ರಾಯಚೂರು: ಅಕ್ರಮ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಮದ್ಯ ನಿಷೇಧ ಆಂದೋಲನದಿಂದ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಹೋರಾಟ ದಿನೇ ದಿನೇ ತೀವ್ರಗೊಳ್ಳುತ್ತಿದ್ದು ಸೋಮವಾರ ಪತ್ರ ಚಳವಳಿ ನಡೆಸಲಾಯಿತು.
ನಗರದ ಜಿಲ್ಲಾ ಕ್ರೀಡಾಂಗಣದಿಂದ ತಹಸೀಲ್ದಾರ್ ಕಚೇರಿ ಎದುರಿನ ಮುಖ್ಯ ಅಂಚೆ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಬಳಿಕ ಮದ್ಯ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆ ಪತ್ರಗಳನ್ನು ಮಹಿಳೆಯರು ಅಂಚೆ ಪೆಟ್ಟಿಗೆಗೆ ಹಾಕುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಕಳೆದ ಐದು ದಿನಗಳಿಂದಲೂ ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಬೇಡಿಕೆ ಈಡೇರಿಸುವವರೆಗೂ ಧರಣಿ ನಿರಂತರವಾಗಿ ನಡೆಯಲಿದೆ.
ಆಂದೋಲನ ಸಂಚಾಲಕಿ ವಿದ್ಯಾ ಪಾಟೀಲ್ ಮಾತನಾಡಿ, ಅಕ್ರಮ ಮದ್ಯದ ವಿರುದ್ಧ ರಾಯಚೂರಿನಲ್ಲಿ ನಡೆಯುವ ಹೋರಾಟ ಐತಿಹಾಸಿಕ.ಈ ಹಿಂದೆಯೂ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಧರಣಿ ಮಾಡಿದ್ದರು. ಈಗಲೂ ರಾಜ್ಯ ಸರ್ಕಾರ ಮಾತುಕತೆಗೆ ಆಹ್ವಾನಿಸದಿದ್ದರೆ ರಾಜ್ಯದೆಲ್ಲೆಡೆಯಿಂದ ಮಹಿಳೆಯರು ರಾಯಚೂರಿನಲ್ಲಿ ನಡೆಯುತ್ತಿರುವಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸುತ್ತಾರೆ. ರಾಜ್ಯದ 11 ಜಿಲ್ಲೆಗಳಯಾವ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಲಾಗುತ್ತಿದೆ. ಯಾರು ಅಕ್ರಮ ಮದ್ಯ ಮಾರುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಯಾ ಜಿಲ್ಲಾಡಳಿತಕ್ಕೆ ಒದಗಿಸಲಾಗಿದೆ. ಅದರಂತೆ ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸದಸ್ಯರಾದ ಮೋಕ್ಷಮ್ಮ, ಉದಯ, ವಿರುಪಮ್ಮ, ಗುರುರಾಜ, ಎಂ.ಆರ್. ಬೇರಿ, ಎಚ್.ಪದ್ಮಾ, ಕೆ.ಜಿ.ವೀರೇಶ, ಬಸವರಾಜ ಸೇರಿ ಇತರರು ಇದ್ದರು.