Advertisement

ಗುಳೆ ಹೋದವರನ್ನು ಮತದಾನಕ್ಕೆ ಆಹ್ವಾನಿಸಲು ಪತ್ರ ಚಳವಳಿ

01:32 PM Apr 16, 2019 | pallavi |
ವಿಜಯಪುರ: ಉದ್ಯೋಗ ಅರಸಿ ಹಾಗೂ ವಿವಿಧ ಕಾರಣಗಳಿಂದ ಜಿಲ್ಲೆಯಿಂದ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ವಲಸೆ ಹೋಗಿರುವ ಪಾಲಕರಲ್ಲಿ ಮಕ್ಕಳಿಂದ ಮತದಾನಕ್ಕೆ ಮನವಿ ಪತ್ರ ಕಳುಹಿಸುವ ಪತ್ರ ಚಳವಳಿಗೆ ವಿಜಯಪುರ ತಾಲೂಕಿನ ಅರಕೇರಿ ಎಲ್‌.ಟಿ.ಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಮಹಾರಾಷ್ಟ್ರ ರಾಜ್ಯದ ಸಾಂಗಲಿ, ರತ್ನಾಗಿರಿ, ಸೇರಿದಂತೆ ಇತರೆ ಪ್ರದೇಶಗಳಿಗೆ ಉದ್ಯೋಗ ಅರಸಿ ಹಾಗೂ ವಿವಿಧ ಕಾರಣಗಳಿಂದ ವಲಸೆ ಹೋಗಿರುವ ಮಕ್ಕಳ ಪಾಲಕರು ಇದೇ ಏ. 23ರಂದು ತಪ್ಪದೇ ಮತದಾನ ಮಾಡಬೇಕು.
ಈ ಕುರಿತಂತೆ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮದ ವಿಳಾಸದೊಂದಿಗೆ ಮಕ್ಕಳು ತಮ್ಮ ಪಾಲಕರಿಗೆ ಪ್ರಸಕ್ತ ಲೋಕಸಭಾ ಚುನಾವಣೆ ಅತ್ಯಂತ ಮಹತ್ವವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ತಪ್ಪದೇ ಮತದಾನಕ್ಕೆ ಆಗಮಿಸುವಂತೆ ಮನವಿ ಮಾಡುವ ಪತ್ರಗಳನ್ನು ಇಂದು ಮಕ್ಕಳ ಮೂಲಕ ಬರೆಯಿಸಿ ಕಳುಹಿಸಲು ಕ್ರಮ ಕೈಗೊಳ್ಳಲಾಯಿತು.
ಈ ವೇಳೆ ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ ಮಾತನಾಡಿ, ಅತ್ಯಂತ ಮಹತ್ವದ ಚುನಾವಣೆ ಇದಾಗಿರುವುದರಿಂದ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಮತ ಚಲಾಯಿಸುವ ಮೂಲಕ ಮತದಾನ
ಪ್ರಮಾಣ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ವಲಸೆ ಹೋಗಿರುವ ಪಾಲಕರಲ್ಲಿಯೂ ಕೂಡ ಜಾಗೃತಿ ಅಂಗವಾಗಿ ಮಕ್ಕಳಿಂದ ಪತ್ರ ಬರೆಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಆಯಾ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಪಾಲಕರಿಗೆ ಪತ್ರ ತಲುಪಿಸಲು ಕ್ರಮ ಕೈಗೊಳ್ಳಬೇಕು. ಅಧಿಕೃತ ವಿಳಾಸ ಹಾಗೂ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮಗಳಲ್ಲಿ ನಮೂದಿಸುವ ಜೊತೆಗೆ ಏ. 23ರಂದು ತಪ್ಪದೇ ಮತದಾನ ಮಾಡುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಡಯಟ್‌ ಉಪನ್ಯಾಸಕ ಆರ್‌.ಕೊಣ್ಣೂರ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳ ಶಾಲಾ ವಲಯದಲ್ಲಿ ಏಕ ಕಾಲಕ್ಕೆ ಪತ್ರ ಬರೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ 63 ಸಾವಿರ ಶಾಲಾ ಮಕ್ಕಳು ಮತದಾನ ಮಾಡುವ ಕುರಿತು ತಮ್ಮ ಪಾಲಕರಿಗೆ ಪತ್ರ ಬರೆದಿದ್ದು, ವಲಸಿಗ ಪೋಷಕರನ್ನೂ ಸಹ ಮತದಾನಕ್ಕೆ ಆಹ್ವಾನಿಸುವ ಪತ್ರ ಚಳವಳಿಗೂ ಸಹ ಪ್ರತ್ಯೇಕವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್‌, ಜಿಪಂ ಸ್ವತ್ಛ ಭಾರತ ಅಭಿಯಾನ ನೆರವು ಘಟಕದ ಅಧಿಕಾರಿ ಟಿ.ಎಸ್‌. ಆಲಗೂರ, ಬಿಎಲ್‌ಒಗಳಾದ ಎಂ.ಜಿ. ರಾಠೊಡ, ಪಿ.ಡಿ. ಹವಳಗಿ, ಜಿಪಂನ ಅಶೋಕ ನಾಯ್ಕೋಡಿ, ಉಪ್ಪಲದಿನ್ನಿ, ರಾಜು ಚವ್ಹಾಣ, ಸಿದ್ದಣ್ಣ ಪೂಜಾರಿ, ಸಿಆರ್‌ಪಿ ಬಗಲಿ, ಮುಖ್ಯಗುರು ಜಿ.ಕೆ. ನಾಯಕ, ಸಿಆರ್‌ಪಿ ಆರ್‌.ಐ. ಅವಟಿ ಇದ್ದರು.
Advertisement

Udayavani is now on Telegram. Click here to join our channel and stay updated with the latest news.

Next