Advertisement

ಆಣೂರು ಕೆರೆಗೆ ನೀರು ತುಂಬಿಸಲು ಪತ್ರ ಚಳವಳಿ

10:14 AM Jun 24, 2019 | Team Udayavani |

ಬ್ಯಾಡಗಿ: ಆಣೂರು ಕೆರೆಗೆ ನೀರು ತುಂಬಿಸುವ ಮೂಲಕ ತಾಲೂಕಿನ 36 ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ನ್ಯಾಯವಾದಿಗಳ ಸಂಘದ ಸದಸ್ಯರು ಹಾಗೂ ರೈತ ಸಂಘದ ಮಹಿಳಾ ಘಟಕಗಳು ಪತ್ರ ಚಳವಳಿ ಆರಂಭಿಸಿದ್ದಾರೆ.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಅವರಿಗೆ ಪತ್ರ ಬರೆದಿರುವ ಅವರು, ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ಹಾಗೂ ಹಾವೇರಿ ತಾಲೂಕುಗಳ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ 30 ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದಾರೆ. ಆದರೆ, ಈ ವರೆಗೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತಿದ್ದು, ಅದರ ಮುಂದಿನ ಭಾಗವಾಗಿ ಪತ್ರ ಚಳವಳಿ ನಡೆಸುತ್ತಿರುವುದಾಗಿ ಪ್ರತಿಭಟನಾಕಾರರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳ ಸಂಘದ ಸದಸ್ಯರು, ಈ ಯೋಜನೆಗೆ ಈಗಾಗಲೇ 212 ಕೋಟಿ ರೂ. ಮಂಜೂರಾಗಿರುವುದಾಗಿ ಉಸ್ತುವಾರಿ ಸಚಿವರು ಸುಳ್ಳು ಹೇಳುತ್ತಿದ್ದಾರೆ. ವಾಸ್ತವ ಮರೆಮಾಚುವ ಕೆಲಸ ಯಾರಿಂದಲೂ ಆಗುವುದು ಬೇಡ. ಈ ವರೆಗೂ ಯುಟಿಪಿ ಅಧಿಕಾರಿಗಳಿಂದ 0.923 ಟಿಎಂಸಿ ನೀರು ಬಳಕೆ ಮಾಡುವ ಕುರಿತು ಅನುಮತಿ ಕೇಳಲಾಗಿದೆ. ನದಿ ನೀರು ಬಳಕೆ ಮತ್ತು ಹಂಚಿಕೆ ನಿಯಮಾವಳಿಗಳ ಪ್ರಕಾರ ಯಾವ ತಿಂಗಳಿನಲ್ಲಿ ನೀರು ಬಳಸಬಹುದು ಮತ್ತು ಎಷ್ಟು ಅಡಿ ನೀರು ಎತ್ತರ ಬಂದ ಮೇಲೆ ಬಳಕೆ ಮಾಡಬೇಕು ಹೀಗೆ ಹತ್ತು ಹಲವು ಪ್ರಶ್ನೆ ಕೇಳಿದರೆ ಜಿಲ್ಲಾಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ಸಮರ್ಪಕ ಉತ್ತರ ನೀಡಲಿಲ್ಲ. ಬದಲಾಗಿ ನಿಮ್ಮವನಾಗಿ ನನ್ನ ಪ್ರಯತ್ನವನ್ನು ಮಾಡುವೆ ಎಂದಷ್ಟೇ ಹೇಳಿದರು.

ರೈತ ಸಂಘದ ಮುಖಂಡರಾದ ಫರೀದಾಬಾನು ನದೀಮುಲ್ಲಾ ಮಾತನಾಡಿ, ಕುಡಿಯುವ ನೀರಿಗಾಗಿ ಇಡೀ ಕುಟುಂಬ ಮೈಲುಗಟ್ಟಲೇ ಅಲೆದಾಡುವಂತಾಗಿದೆ. ನೀರಿಲ್ಲದೇ ಗ್ರಾಮದ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲಾಗಿದೆ. ತಮ್ಮ ನಿರ್ದೇಶನದಂತೆ 600 ಅಡಿಗಿಂತ ಹೆಚ್ಚು ಕೊರೆಯುವಂತಿಲ್ಲ. ಆದರೆ, ಸಾವಿರ ಅಡಿಗಳಷ್ಟು ಆಳಕ್ಕೆ ಕೊರೆದರೂ ನೀರು ಸಿಗುತ್ತಿಲ್ಲ. ನಮ್ಮ ಅಳಲನ್ನು ಯಾರ ಬಳಿ ತೋಡಿಕೊಳ್ಳಬೇಕು? ನಾವ್ಯಾರು ಸಾಲಮನ್ನಾ ಕೇಳುತ್ತಿಲ್ಲ ಮತ್ತು ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತ ಹೇಡಿಗಳೂ ಅಲ್ಲ. ಆದರೆ ಒಂದು ವೇಳೆ ಏನಾದರೂ ಆತ್ಮಹತ್ಯೆಯಂತಾದರೇ ಅದು ಕುಡಿಯುವ ನೀರಿಗಾಗಿಯೇ ಎಂದು ಎಚ್ಚರಿಸಿದರು.

ನ್ಯಾಯವಾದಿಗಳ ಸಂಘದ ಪ್ರಕಾಶ ಬನ್ನಿಹಟ್ಟಿ ಸೇರಿದಂತೆ ಇನ್ನಿತರ ಸದಸ್ಯರು ರೈತ ಸಂಘ ಮಹಿಳಾ ಘಟಕದ ಸದಸ್ಯರಾದ ರೇಣುಕಾ ಉಪ್ಪಿನವರ ಚೌಡವ್ವ ಚಿನ್ನಮ್ಮನವರ, ಚಂದ್ರಕಲಾ ರಾವಳ ಹಾಗೂ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next