Advertisement

ಮಗೂ, ದೇಶ ಕಾಯುವೆಯಾ?

12:30 AM Feb 20, 2019 | |

ಮಕ್ಕಳು ಹುಟ್ಟುವ ಮುನ್ನವೇ ಡಾಕ್ಟರ್‌ ಓದಿಸುವುದೋ, ಎಂಜಿನಿಯರ್‌ ಓದಿಸುವುದೋ ಎಂಬುದನ್ನು ಹೆತ್ತವರು ನಿರ್ಧರಿಸುವ ಕಾಲವಿದು. ಎಲ್ಲರಿಗೂ ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವ ನೀಡುವ ಹುದ್ದೆಗಳತ್ತಲೇ ಗಮನ. ಅದರಿಂದಾಚೆ ಅವರ ಆಸಕ್ತಿ ಹರಿಯುವುದೇ ಇಲ್ಲ. ಎಲ್ಲಾ ತಾಯಂದಿರಂತೆ ನಾನು ಕೂಡಾ ನೀನೇನಾಗಬೇಕೆಂದು ಆಸೆ ಪಟ್ಟಿದ್ದೇನೆ…

Advertisement

ಮಗುವೇ…
ನಿನ್ನ ನಿರೀಕ್ಷೆಗೀಗ ಎಂಟು ತಿಂಗಳು. ಒಳಗೆ ಎಲ್ಲವೂ ಕ್ಷೇಮ ತಾನೇ. ನಾನಿಲ್ಲಿ ಕ್ಷೇಮ. ನನಗೆ ಗೊತ್ತು ಒಳಗಲ್ಲಿ ಕತ್ತಲು. ನಿನಗೆ ಗೊತ್ತೇ? ಇಲ್ಲೂ ಕತ್ತಲು. ನಮ್ಮ ದೇಶದ ಸೈನಿಕರ ಮೇಲೆ ದಾಳಿ ನಡೆಸಿ ಹಲವರನ್ನು ಹತ್ಯೆಗೈದಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಮನೆಯಲ್ಲಿ ನನಗೂ, ನಿನ್ನ ತಂದೆಯದೂ ಇದೇ ಮಾತುಕತೆ. ನಿನ್ನ ಚಿಕ್ಕಪ್ಪನೂ ಸೇನೆಯಲ್ಲಿದ್ದಾರೆ. ಅವರು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶ ದಾಳಿ ನಡೆದ ಸ್ಥಳದಿಂದ ಬಹಳ ದೂರವಿಲ್ಲ. ಈ ಕಾರಣಕ್ಕೆ ನಮ್ಮ ದಿಗಿಲು ಇನ್ನೂ ಹೆಚ್ಚಾಗಿದೆ. ಮುಂದಿನಿಂದ ದಾಳಿ ನಡೆಸುವವರನ್ನು ಧೈರ್ಯವಾಗಿ ಎದುರಿಸಿ ಸೆದೆಬಡಿದುಬಿಡಬಹುದು, ಆದರೆ ಹಿಂದಿನಿಂದ, ಕದ್ದು ಮುಚ್ಚಿ ದಾಳಿ ನಡೆಸುವವರದೇ ಚಿಂತೆ. ಅಷ್ಟುಮಾತ್ರಕ್ಕೆ ಜಗತ್ತು ಕೆಟ್ಟಿದೆಯೆಂದು ತಿಳಿಯಬೇಡ. ಜಗತ್ತು ನಿಜಕ್ಕೂ ಸುಂದರವಾಗಿದೆ. ಹುಂ, ಸ್ವಲ್ಪ ಸಮಯವಷ್ಟೇ. ಇನ್ನೇನು ಹೊರಗೆ ಬರುತ್ತೀಯಲ್ಲ. ಆಗ, ಎಲ್ಲವನ್ನೂ ನೀನೇ ನೋಡುವೆಯಂತೆ…

ಈಗ ನನಗೆ ನೆನಪಾಗುತ್ತಿದೆ. ನಿನ್ನ ತಂದೆಯನ್ನು ಮದುವೆಯಾಗುವ ಮೊದಲು ಹಲವು ಸಂಬಂಧಗಳನ್ನು ಮನೆಯವರು ನೋಡಿದ್ದರು. ಯಾವ ಯಾವುದೋ ಕಾರಣಗಳಿಗೆ ಸರಿಬಂದಿರಲಿಲ್ಲ. ಕಡೆಗೆ ನಿನ್ನ ತಂದೆಯ ಕಡೆಯ ಸಂಬಂಧ ನಮ್ಮ ಮನೆಯವರಿಗೆಲ್ಲಾ ಹಿಡಿಸಿದ್ದು ಈಗ ಹಳೆಯ ಕಥೆ. ಈ ಬಗ್ಗೆ ನಿನಗೊಂದು ವಿಚಾರ ಹೇಳಲೇಬೇಕು. ನನ್ನನ್ನು ನೋಡಲು ಬಂದಿದ್ದವರಲ್ಲಿ ಒಬ್ಬರು ಸೈನಿಕರಾಗಿದ್ದರು. ಅವರು ನನ್ನನ್ನು ನೋಡಿ ಇಷ್ಟಪಟ್ಟಿದ್ದರು. ನನಗೂ ಅವರು ಹಿಡಿಸಿದ್ದರು. ಆರಡಿ ಎತ್ತರದ ಆಜಾನುಬಾಹು, ನಾನೋ ಅವರ ಹೆಗಲಿಗಿಂತಲೂ ಕೆಳಕ್ಕೆ ಬರುತ್ತಿದ್ದೆ. ಗೆಳತಿಯರೆಲ್ಲಾ ಈ ಬಗ್ಗೆ ಆಡಿಕೊಂಡಿದ್ದೇ ಆಡಿಕೊಂಡಿದ್ದು. ನನಗೆ ಅವರು ಸೇನೆಯವರೆಂದು ತಿಳಿದು ಅವರ ಮೇಲೆ ಗೌರವ ಮೂಡಿತ್ತು. ಅವರ ಬಳಿ ಮಾತಾಡುವಾಗಲೂ ಅಷ್ಟೆ: ಎಲ್ಲಿ ತಪ್ಪು ತಿಳಿದುಕೊಂಡುಬಿಡುತ್ತಾರೋ ಎಂದು ಪ್ರತಿ ಪದವನ್ನೂ ಅಳೆದು ತೂಗಿ ಆಡುತ್ತಿದ್ದೆ. ಆದರೆ, ಅವರು ನಾನಂದುಕೊಂಡಂತೆ ಅಂಥ ಕಟ್ಟುನಿಟ್ಟಿನ ವ್ಯಕ್ತಿಯಾಗಿರಲಿಲ್ಲ. ಅವರೇ ನನ್ನ ಪತಿಯಾಗುತ್ತಾರೆ ಎಂದುಕೊಂಡೆ. ಆದರೆ, ನಮ್ಮ ಮನೆಯಲ್ಲಿ ಅವರನ್ನು ಒಪ್ಪಲಿಲ್ಲ. ಅವರು  ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆಂಬ ಕಾರಣಕ್ಕೆ ನಮ್ಮ ಮನೆಯಲ್ಲಿ ವಿರೋಧ ಬಂದಿತು. ನಾನಂತೂ ಸಿದ್ಧಳಿದ್ದೆ. ಅವರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದರೆಂಬ ಕಾರಣಕ್ಕೇ ಅವರು ನನಗೆ ಹಿಡಿಸಿಬಿಟ್ಟಿದ್ದರು. ಆದರೆ, ಯೋಗ ಕೂಡಿ ಬರಲಿಲ್ಲ. ಅವರೀಗ ಕ್ಷೇಮವಾಗಿದ್ದಾರೆಂದೇ ಆಶಿಸುತ್ತೇನೆ. ಟಿ.ವಿ.ಯಲ್ಲಿ ಸೇನೆ ಮೇಲಿನ ದಾಳಿ ಸುದ್ದಿ ನೋಡಿದಾಗ ಇವೆಲ್ಲಾ ನೆನಪಾಯಿತು.

ಮಕ್ಕಳು ಹುಟ್ಟುವ ಮುನ್ನವೇ ಡಾಕ್ಟರ್‌ ಓದಿಸುವುದೋ, ಎಂಜಿನಿಯರ್‌ ಓದಿಸುವುದೋ ಎಂಬುದನ್ನು ಹೆತ್ತವರು ನಿರ್ಧರಿಸುವ ಕಾಲವಿದು. ಎಲ್ಲರಿಗೂ ಕೈತುಂಬಾ ಸಂಬಳ, ಸಮಾಜದಲ್ಲಿ ಗೌರವ ನೀಡುವ ಹುದ್ದೆಗಳತ್ತಲೇ ಗಮನ. ಅದರಿಂದಾಚೆ ಅವರ ಆಸಕ್ತಿ ಹರಿಯುವುದೇ ಇಲ್ಲ. ಎಲ್ಲಾ ತಾಯಂದಿರಂತೆ ನಾನು ಕೂಡಾ ನೀನೇನಾಗಬೇಕೆಂದು ಆಸೆ ಪಟ್ಟಿದ್ದೇನೆ. ಅವರಂತೆ ಡಾಕ್ಟರ್‌, ಎಂಜಿನಿಯರ್‌ ಆಗಿಸುವ ಆಸೆಯಿಲ್ಲ. ನಿನ್ನನ್ನು ಸೈನಿಕನನ್ನಾಗಿ ಮಾಡುವ ಆಸೆಯಿದೆ. ದೇಶಕ್ಕಾಗಿ ಹೋರಾಡುವ ಸೈನಿಕನ ಹುದ್ದೆಗಿಂತ ನನಗೆ ಬೇರಾವ ಹುದ್ದೆಯೂ ದೊಡ್ಡದಾಗಿ ಕಾಣುವುದಿಲ್ಲ. ಮುದ್ದೂ, ನನ್ನಾಸೆಯೇ ನಿನ್ನದೂ ಆಗಿರುತ್ತೆ ಎಂಬ ನಂಬಿಕೆ ನನ್ನದು… 

ಇತಿ ನಿನ್ನ
ಅಮ್ಮ

Advertisement

ಭಾರತೀ

Advertisement

Udayavani is now on Telegram. Click here to join our channel and stay updated with the latest news.

Next