Advertisement

ನನೆಗುದಿಗೆ ಬಿದ್ದ ಕಾರ್ಯಗಳ ಮುಂದುವರಿಕೆ ಕೋರಿ ಪತ್ರ

11:06 PM Jun 03, 2019 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಸಬ್‌ಅರ್ಬನ್‌ ರೈಲ್ವೆ ಯೋಜನೆ ಜಾರಿ ಹಾಗೂ ಮೇಕೆದಾಟು ಯೋಜನೆಗೆ ಸಮಗ್ರ ಯೋಜನಾ ವರದಿ ಸಲ್ಲಿಸುವ ಪ್ರಯತ್ನ ರಾಜ್ಯ ಸರ್ಕಾರದಿಂದ ನಡೆದಿಲ್ಲ. ಈ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಸದ್ಯದಲ್ಲೇ ಪತ್ರ ಬರೆಯಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Advertisement

ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಬಿಜೆಪಿ ರಾಜ್ಯ ಕಚೇರಿಗೆ ಭೇಟಿ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರೈಲ್ವೆ ಸಚಿವನಾಗಿದ್ದಾಗಲೇ ಸಬ್‌ಅರ್ಬನ್‌ ಯೋಜನೆಯಡಿ ಆರು ಪ್ರಾಥಮಿಕ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಿರಂತರ ಮೇಲ್ವಿಚಾರಣೆ ಬಳಿಕ ಕೇಂದ್ರ ಬಜೆಟ್‌ನಲ್ಲಿ ಯೋಜನೆಗೆ 17,500 ಕೋಟಿ ರೂ. ಘೋಷಣೆಯಾಯಿತು.

ಯೋಜನಾ ವೆಚ್ಚ ಭರಿಸುವ ಅನುಪಾತವನ್ನು 20:80ರ ಬದಲಿಗೆ 50:50ರಷ್ಟಕ್ಕೆ ಇಳಿಸಲಾಗಿತ್ತು. ಇಷ್ಟಾದರೂ ಯಾವುದೇ ಪ್ರಯತ್ನ ನಡೆದಿಲ್ಲ. ರೈಲ್ವೆ ಖಾತೆ ರಾಜ್ಯ ಸಚಿವರಾಗಿ ರಾಜ್ಯದ ಸುರೇಶ್‌ ಅಂಗಡಿಯವರೇ ಇದ್ದು, ಯೋಜನೆಗೆ ವೇಗ ನೀಡಬಹುದು. ಆ ಹಿನ್ನೆಲೆಯಲ್ಲಿ ತಕ್ಷಣವೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.

ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಮೇಕೆದಾಟು ಯೋಜನೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಕೇಂದ್ರ ಸೂಚಿಸಿತ್ತು. ಆದರೆ ಈವರೆಗೆ ವರದಿ ಸಲ್ಲಿಸಿಲ್ಲ. ರಾಜ್ಯ ಸರ್ಕಾರದಿಂದ ಡಿಪಿಆರ್‌ ಸಲ್ಲಿಸಿದರೆ ನಂತರ ಕೇಂದ್ರದಲ್ಲಿ ಅದನ್ನು ಮುಂದುವರಿಸುವ ಪ್ರಯತ್ನ ನಾವು ಮಾಡುತ್ತೇವೆ. ರಾಜ್ಯದ ಯಾವುದೇ ಸಮಸ್ಯೆಯಿದ್ದರೂ ಕೇಂದ್ರದಲ್ಲಿ ಆಗಬೇಕಾದ ಕೆಲಸಗಳನ್ನು ನಿರ್ವಹಿಸಲು ಒತ್ತು ನೀಡಲಾಗುವುದು ಎಂದರು.

ಈ ಹಿಂದೆ ಕಲಬುರಗಿ ರೈಲ್ವೆ ಉಪವಿಭಾಗಕ್ಕಾಗಿ 5 ಕೋಟಿ ರೂ. ನೀಡಿದ್ದರೂ ಅದು ಕಾರ್ಯಗತವಾಗಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಅನುದಾನ ಸಾಲದು ಎಂದು ಹೇಳಿದ್ದರು. ಕೇಂದ್ರ ನೀಡಿದ ಅನುದಾನ ಬಳಸಿ ಕೆಲಸ ಆರಂಭಿಸಿದರೆ ಯೋಜನೆ ಸಾಕಾರವಾಗಲು ಅನುಕೂಲವಾಗಲಿದೆ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾರನ್ನೂ ಟೀಕಿಸುವುದಿಲ್ಲ. ಯಾರಾದರೂ ಟೀಕೆ ಮಾಡಿದರೆ ಉತ್ತರ ನೀಡಬೇಕಾಗುತ್ತದೆ ಎಂದು ತಿಳಿಸಿದರು.

Advertisement

ದಾವಣಗೆರೆಯಲ್ಲಿ ಗೊಬ್ಬರ ಕಾರ್ಖಾನೆ: ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅವರು ರಸಗೊಬ್ಬರ ಹಾಗೂ ಔಷಧ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಸಂಬಂಧ ಎಫ್ಎಸಿಟಿ ಅಧ್ಯಕ್ಷರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯು ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಗುರುತಿಸಲಾಗಿದ್ದ 3 ಸ್ಥಳಗಳ ಪೈಕಿ ದಾವಣಗೆರೆ ಸೂಕ್ತ ಎಂದು ವರದಿ ನೀಡಿತ್ತು. ಕಾರ್ಖಾನೆ ಸ್ಥಾಪನೆಗೆ ರೈಲ್ವೆ ಸಂಪರ್ಕ, ನೀರು, ವಿದ್ಯುತ್‌ ಸೌಲಭ್ಯ ಅತ್ಯಗತ್ಯ. ತಕ್ಷಣವೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಕಾರ್ಖಾನೆ ಸ್ಥಾಪನೆಗೆ ಒಂದು ಹಂತದ ಕೆಲಸ ಆಗಿದ್ದು, ಮುಂದುವರಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.

100 ದಿನದ ಯೋಜನೆ: ಮುಂದಿನ 100 ದಿನಗಳಲ್ಲಿ ಏನಾಗಬೇಕು ಎಂಬುದರ ಸ್ಪಷ್ಟ ದೂರದೃಷ್ಟಿ ವಿವರ ನೀಡುವಂತೆ ಪ್ರಧಾನಿ ಸೂಚಿಸಿದ್ದರು. ಖಾತೆ ಹಂಚಿಕೆಯಾದ ಒಂದು ಗಂಟೆಯಲ್ಲಿ ಪ್ರಧಾನಿ ಕಚೇರಿಯಿಂದ ಸೂಚನೆ ಬಂದಿತ್ತು. ಒಂದೆರಡು ಗಂಟೆಯಲ್ಲಿ ಅಧಿಕಾರ ಸ್ವೀಕರಿಸಿ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ 100 ದಿನಗಳ ಯೋಜನೆ ವಿವರ ಸಲ್ಲಿಸುವಂತೆ ಸೂಚಿಸಿತ್ತು. ಪ್ರಧಾನಿಯವರ ಕಾರ್ಯವೈಖರಿ ಅಷ್ಟು ವೇಗ ಹಾಗೂ ದೂರದರ್ಶಿತ್ವದ್ದಾಗಿದೆ. ರಾಜ್ಯದ ನಾಲ್ವರೂ ಕೇಂದ್ರ ಸಚಿವರು ನಿರಂತರವಾಗಿ ಜನರಿಗೆ ಲಭ್ಯವಿರುತ್ತೇವೆ. ಸಂಘರ್ಷವಿಲ್ಲದೆ ಸಾಮರಸ್ಯದಿಂದ ಅಭಿವೃದ್ಧಿ ಕಡೆಗೆ ಹೋಗುವ ಭಾವನೆಯಿಂದ ಕಾರ್ಯ ನಿರ್ವಹಿಸಲಿದ್ದು, ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ಸಚಿವರು, ಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿನಂತಿ ಮಾಡುತ್ತೇನೆ ಎಂದು ಹೇಳಿದರು.

ನನ್ನ ಗೃಹ ಕಚೇರಿಯಲ್ಲಿ ಸಣ್ಣ ಕಾರ್ಯಾಲಯವನ್ನು 15 ದಿನದಿಂದ ತಿಂಗಳಲ್ಲಿ ಆರಂಭಿಸಲು ಚಿಂತಿಸಲಾಗಿದೆ. ತಿಂಗಳಲ್ಲಿ ಒಂದು ದಿನ 2 ಗಂಟೆ ಕಾಲ ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ. ನಾನು ಬೆಂಗಳೂರಿನಲ್ಲಿ ಇದ್ದಾಗ 15 ದಿನಕ್ಕೊಮ್ಮೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮೂರು ಗಂಟೆ ಕಾಲ ಸಾರ್ವಜನಿಕರ ಅಹವಾಲು ಆಲಿಸುತ್ತೇನೆ.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next