ನಿನಗೇ ಗೊತ್ತಿರುವಂತೆ ನನಗೆ ಬರೆಯುವಾಗಲೆಲ್ಲ ಈ ಔಪಚಾರಿಕ ಒಕ್ಕಣೆಗಳೆಲ್ಲ ಇಷ್ಟವಾಗುವುದಿಲ್ಲ , ನಿನಗಂತೂ ನಾನು ಯಾವ ಸಂಬೋಧನೆಯನ್ನೋ ಹಚ್ಚಿ ನಮ್ಮ ಪ್ರೀತಿ ಮತ್ತು ಒಡನಾಟದ ವ್ಯಾಪ್ತಿಗೆ ವೃತ್ತ ಎಳೆಯಲಾರೆ. ತುಂಬ ದಿನಗಳಿಂದ ಮನಸಲ್ಲೇ ಉಳಿದ ನಿನ್ನಲ್ಲಿ ಹೇಳಬೇಕೆಂದಿರುವ, ಎದುರಿಗೆ ಸಿಕ್ಕಾಗ ಹೇಳಬಹುದು, ಆದರೆ, ನಾನು ನಿನ್ನನ್ನು ಹೊಗಳಿ ನೀನು ಧೋ… ಎಂದು ಕಣ್ಣೀರು ಸುರಿಸಿ ನನ್ನನ್ನೂ ಅಳಿಸಿ ಯಾವುದೋ ನಾಟಕದ ದೃಶ್ಯ ಆಗುವುದು ಬೇಡ ಎಂದು ಪತ್ರ ಬರೆಯುತ್ತಿದ್ದೇನೆ. ನನ್ನ ಹೊಗಳಿಕೆಯಿಂದ ನೀನು ಉಬ್ಬಿ ಗಾಳಿಗೆ ಹಾರುವುದನ್ನು ಸಹಿಸದ ತುಂಟ ತಂಗಿ ನಾನು. ಮಾಧ್ಯಮಿಕ ಶಾಲೆಯಲ್ಲೆಲ್ಲೊ ಅಕ್ಕನಿಗೆ ಪತ್ರ ಬರೆದ ನೆನಪು ನಾವು ಹೋದ ಶಾಲೆಯ ಪ್ರವಾಸದ ಬಗೆಗೆ ಬರೆಯಲು ಹೇಳಿದ್ದರು. ನೀನಂತೂ ಯಾವಾಗಲೂ ಪತ್ರ ಬರೆಯುವುದರಲ್ಲಿ ನಿಸ್ಸೀಮಳು. ಚಿಕ್ಕವರಿದ್ದಾಗ ರೇಡಿಯೋದಲ್ಲಿ ಬರುವ ಉಚಿತ ಕ್ಯಾಟಲಾಗ್ ಕಳಿಸುವ, ಧರ್ಮಪ್ರಚಾರಕ್ಕಾಗಿ ಉಚಿತ ಪುಸ್ತಕಗಳನ್ನು ಕಳಿಸುವ, ಹಾಗೆಯೇ ಪತ್ರಿಕೆಗಳಲ್ಲಿ ಬರುವ ಉಚಿತವಾಗಿ ಕಳಿಸುತ್ತೇವೆ ನೀವೂ ಬರೆಯಿರಿ ಅಂತಿದ್ದಲ್ಲೆಲ್ಲ ನೀನು ಪತ್ರ ಬರೆದು ನಮ್ಮ ಅಡ್ರೆಸ್‌ಗೆ ಏನೋ ಒಂದು ಬಂದಾಗ ಎಷ್ಟೊಂದು ಹರ್ಷಿಸುತ್ತಿದ್ದೆವು. ಹಾಗೆಯೇ ನೀನು ನಮಗೆಲ್ಲ ಭಾಷಣ-ಪ್ರಬಂಧ ಬರೆದುಕೊಟ್ಟು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಪ್ರೇರೇಪಿಸುತ್ತಿದ್ದೆ. ಎಲ್ಲ ಸುಮಧುರ ನೆನಪುಗಳು ಈಗ !
ಮತ್ತೇನು ಸಮಾಚಾರ ನಿಮ್ಮೂರ ಕಡೆ?
ನಮ್ಮ ಉದ್ಯಾನನಗರಿಯಲ್ಲಿ ಮಳೆಯು ನಿಂತು ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ. ನೆನಪಿದೆಯ ನಿನಗೆ? ನಾವು ಚಿಕ್ಕವರಿದ್ದಾಗ ರಭಸವಾಗಿ ಮಳೆ ಸುರಿದು ನಿಂತಾಗ ನಮ್ಮೂರ ಕೆರೆ ಹಾಗೂ ಕೆರೆ ಕೋಡಿಯಲ್ಲಿ ನೀರಿನ ಮಟ್ಟ ನೋಡಲು ನಾವು ನಾಲ್ವರೂ ಕೆರೆ ಏರಿ ಮೇಲೆ ಓಡುತ್ತಿದ್ದೆವು. ಆಗ ಕೆರೆಯಿಂದ ಎದ್ದು ಮೇಲೆ ಏರಿ ಹತ್ತಿ ಕುಪ್ಪಳಿಸಿ ಬರುತ್ತಿದ್ದ ಕಪ್ಪೆಗಳನ್ನು ತಪ್ಪಿಸಿಕೊಂಡು ಹೆಜ್ಜೆ ಹಾಕುವುದೇ ಬಲು ಕಷ್ಟವಾಗಿತ್ತು. ಆದರೂ ಮಳೆನಿಂತ ತಕ್ಷಣ ಕೆರೆ ಕೋಡಿಯ ನೀರಿನ ಮಟ್ಟ ಅಳೆದು ಬಂದರೆ ಮಾತ್ರ ನಮಗೆ ಸಮಾಧಾನವಾಗುತ್ತಿತ್ತು. ಈಗ ನಮ್ಮ ಮನೆಯಿಂದ ಕಾಲ್ನಡಿಗೆಯಲ್ಲೇ ಸಿಗುವ ವೃಷಭಾವತಿಯಲ್ಲೂ ಬೆಂಗಳೂರಿನ ಮಳೆಗೆ ಎಷ್ಟು ನೀರಿನ ಹರಿವು ಇರಬಹುದೆಂದು ದೂರದಲ್ಲೇ ನೋಡಿಕೊಂಡು ಬರೋಣವೆಂದರೆ ಇಲ್ಲಿ ರಸ್ತೆಯಲ್ಲಿ ಹೋದರೆ ಬದುಕಿ ಬರುವ ವಿಶ್ವಾಸವೇ ಇಲ್ಲ. ಬಿಡು, ಆ ಸುಂದರ ಬಾಲ್ಯವನ್ನು ಹೋಲಿಸಿದರೆ ಕ್ಲೀಷೆ ಎನಿಸುತ್ತದೆ.
ಬಾಲ್ಯ-ಯೌವನ ಕಳೆದು ನಾವೀಗ ಮಕ್ಕಳ ತಾಯಂದಿರಾಗಿ ಅತ್ಯಂತ ಜಾಗರೂಕತೆಯಿಂದ ಅವರನ್ನು ಬೆಳೆಸುವ ಜವಾಬ್ದಾರಿ ಹೊತ್ತಿದ್ದೇವೆ. ಮೊನ್ನೆ ಮೊನ್ನೆ ಇನ್ನೂ ಭೂಮಿಗೆ ಬಂದ ಚೋಟುಮೆಣಸಿನ ಕಾಯಿಗಳು, “”ಅಮ್ಮಾ , ನಿನಗೇನು ಗೊತ್ತಾಗತ್ತೆ ?” ಅನ್ನೋವಷ್ಟು ಬೆಳೆದಿದ್ದಾರೆ. ನನಗಿನ್ನೂ ಚೆನ್ನಾಗಿ ನೆನಪಿದೆ, ನಾವು ನಿನ್ನ ತಂಗಿಯರೆಲ್ಲ ಪ್ರಗ್ನೆನ್ಸಿಯಲ್ಲಿ ಚಿಕ್ಕದೊಂದು ವ್ಯಾಕ್ಸಿನೇಶನ್, ಬ್ಲಿಡ್‌ಟೆಸ್ಟ್‌ಗೂ ಆಸ್ಪತ್ರೆ ಮೆಟ್ಟಿಲು ಹತ್ತುವಾಗ ಧೈರ್ಯಕ್ಕೆ ಗಂಡ ಜೊತೆಗಿರಲೇಬೇಕು ಎನ್ನುವಷ್ಟು ಪುಕ್ಕಲರಾಗಿದ್ದೆವು. ನೀನು ಹೇಗೆ ಗರ್ಭಾವಸ್ಥೆಯ ತಿಂಗಳುಗಳು ಉರುಳಿದಂತೆ ಒಂದು ಹೆಣ್ಣು, ಮಗುವಿಗೆ ಜನ್ಮ ಕೊಡುವ ಪ್ರತಿಯೊಂದು ಹಂತವನ್ನು ಎಷ್ಟೊಂದು ಸಹಜವೆಂಬಂತೆ ವಿವರಿಸುತ್ತಿದ್ದೆ. ನೀನು ನಮಗೆಲ್ಲ ಚಿಕ್ಕ-ಪುಟ್ಟ ವಿವರಗಳನ್ನು ತಿಳಿ ಹೇಳಿದಂತೆ ನಿನಗ್ಯಾರೂ ವಿವರಿಸಲೇ ಇಲ್ಲ. ವೈದ್ಯರು ನೂರಾರು ಹೇಳಬಹುದು, ಆದರೆ, ಎಲ್ಲವೂ ನಿಂತಿರುವುದು ನಮ್ಮ ಆತ್ಮವಿಶ್ವಾಸ ಮತ್ತು ಅಂತಃಶಕ್ತಿ ಮೇಲೆಯೇ ಎಂದು ಆಗಾಗ ಹೇಳುತ್ತಿದ್ದೆ. ನೀನು ಹೇಳಿಕೊಟ್ಟ ಶ್ಲೋಕಗಳು, ಹೆರಿಗೆ ಸಮಯದಲ್ಲಿ ಪಾಲಿಸಬೇಕಾದ ಉಸಿರಾಟದ ತಂತ್ರಗಳು ನಮಗೆ ಎಷ್ಟೊಂದು ಪರಿಣಾಮಕಾರಿಯಾಗಿ ನೋವು ಸಹಿಸಲು ಸಹಕಾರಿಯಾಗಿತ್ತು. ನಾನಂತೂ ಎರಡನೆಯ ಮಗುವಿನ ಹೆರಿಗೆ ಸಂದರ್ಭದಲ್ಲಿ ನೀನು ಹೇಳಿಕೊಟ್ಟ ವಿಧಾನಗಳನ್ನೇ ಪಾಲಿಸಿ ಸ್ವಲ್ಪವೂ ಕಿರುಚದೇ ಕೂಗಾಡದೇ ಕಣ್ಣಲ್ಲಿ ನಾಲ್ಕು ಹನಿ ಮಾತ್ರ ನೀರಿಳಿಸಿ ನನ್ನ ಕಂದನನ್ನು ಹೆತ್ತಾಗ ಡಾಕ್ಟರ್ ನನ್ನ ಬೆನ್ನು ತಟ್ಟಿ ಕೊಂಡಾಡಿದ್ದರು. ಶಿಶುವಿಗೆ ಜನ್ಮ ಕೊಡುವಾಗಿನ ಗಳಿಗೆಯನ್ನು ಒಂದು ಅದ್ಭುತ, ಅನನ್ಯ ಅನುಭೂತಿಯನ್ನಾಗಿಸಲು ನನ್ನ ವೈದ್ಯರು ಅವರ ಮೊಬೈಲ…ನಲ್ಲಿ ಹಾಕಿಟ್ಟಿದ್ದ ವೇದಮಂತ್ರಗಳನ್ನು ಕೇಳಿಸಿಕೊಳ್ಳುವಾಗ ನೀನೇ ನನಗೆ ದೇವರಂತೆ ಕಂಡಿದ್ದೆ.
ಎಲ್ಲರಿಗೂ ನಿನ್ನಂತಿರುವ ಅಕ್ಕ ಸಿಕ್ಕರೆ ಎಷ್ಟು ಚೆಂದ ಪ್ರಪಂಚ ಎಂದೆನಿಸಿತು. ಅದೇಕೆ ಹೀಗೆ ಗೊತ್ತಿಲ್ಲ ನೋಡು! ನಾವು ಅಕ್ಕ -ತಂಗಿಯರು ವಿಷಯಗಳನ್ನು ಗ್ರಹಿಸುವ ಪರಿ ಎಷ್ಟು ಭಿನ್ನ. ನಿನ್ನ ಮೂವರು ತಂಗಿಯರೂ ಬೆರಳ ತುದಿಯಲ್ಲೇ ಆ ಕ್ಷಣದಲ್ಲೇ ಮೊಬೈಲ್‌ನಲ್ಲಿ ಏನನ್ನಾದರೂ ಹೆಕ್ಕಿ ತೆಗೆಯಬಹುದು. ಬೇಕೆನಿಸಿದ ದೃಶ್ಯಗಳನ್ನು ಹುಡುಕಿ ನೋಡಬಹುದು. ಈಗ ಇಂಟರ್ನೆಟ್‌ನಲ್ಲಿ ಸಿಗುವುದು ಏನಿದೆ ಏನಿಲ್ಲ ಎಂಬುದಿಲ್ಲ . ಪ್ರಗ್ನೆನ್ಸಿ ಪೇರೆಂಟಿಂಗ್ ಸಂಬಂಧಪಟ್ಟ ನೂರಾರು ಜಾಲತಾಣಗಳು. ಪ್ರತಿವಾರ ನಿಮ್ಮ ಮಗುವಿನ ಬೆಳವಣಿಗೆ ನೋಡಿ, “ಹೀಗೆ ಮಾಡಿ ಹಾಗೆ ಮಾಡಬೇಡಿ’ ಎಂಬ ಮಿಂಚಂಚೆಯ ಸೂಚನೆಗಳು, ಜೊತೆಗೆ ನಮ್ಮನ್ನು ಹೆದರಿಸುವ ಒಂದಷ್ಟು ಅಂಶಗಳನ್ನೂ ಅವರು ಸೇರಿಸಿರುತ್ತಾರೆ. ಅನಾವಶ್ಯಕವಾಗಿ ಮಧ್ಯೆ ಮಧ್ಯೆ ವೈದ್ಯರನ್ನು ಭೇಟಿಯಾಗಲಿ ಎಂಬ ಮಾರುಕಟ್ಟೆಯ ತಂತ್ರಗಳೇನೋ ಇರಬಹುದು ಗೊತ್ತಿಲ್ಲ ! ಆದರೆ, ಇದ್ಯಾವ ಜಾಲತಾಣಗಳ ಗೊಡವೆಯೇ ಇಲ್ಲದ ನಿನಗೆ ವಿಷಯಗಳ ಮೂಲ, ನೀನು ತುಂಬಾ ವರ್ಷಗಳಿಂದ ಸಂಗ್ರಹಿಸಿಟ್ಟ ಪುಸ್ತಕಗಳು, ತರಂಗ-ತುಷಾರಗಳು, ಪತ್ರಿಕೆಯಿಂದ ಕತ್ತರಿಸಿಟ್ಟ ಮೌಲ್ಯಯುತ ಲೇಖನಗಳು.
ಒಂದು ವಿಚಾರವನ್ನಂತೂ ಸ್ಪಷ್ಟವಾಗಿ ಹೇಳಬಲ್ಲೆ, ಆ ಎಲ್ಲ ವಿಷಯಗಳನ್ನು ಗ್ರಹಿಸಿ ಒಂದು ಕ್ಷಣ ಯೋಚಿಸಿದಾಗ ನನ್ನ ಉದ್ಗಾರ ಅಯ್ಯಯ್ಯಪ್ಪೊ ಎಂದಾದರೆ ನಿನ್ನ ತೀರ್ಮಾನ ಇಷ್ಟೇ. ಇದು ತುಂಬ ಸಹಜ ಎಂದಾಗಿರುತ್ತದೆ. ಇದನ್ನು ನೀನು ನಮ್ಮನ್ನು ಪ್ರಗ್ನೆ°ನ್ಸಿಯಲ್ಲಿ ಸಹಜ ಹೆರಿಗೆಗೆ ಧೈರ್ಯ ತುಂಬುತ್ತಿದ್ದ ಉದಾಹರಣೆಯೊಂದಿಗೆ ವಿವರಿಸಬಹುದು. ಹೆರಿಗೆ ಕೋಣೆಯಿಂದಲೇ ಅಪ್‌ಲೋಡ್ ಮಾಡುವ ಎಷ್ಟೊಂದು ವೀಡಿಯೊಗಳನ್ನೆಲ್ಲ ಇಂಟರ್ನೆಟ್‌ನಲ್ಲಿ ಪ್ರತಿದಿನ ನೋಡಿ ನೋಡಿ ನಾನಂತೂ ಬೇಸತ್ತು ಹೋಗಿದ್ದೆ (ನೋಡದೆ ಇರುವ ಆಯ್ಕೆ ಇದ್ದಾಗಲೂ). ಕೂಗಾಟ-ಕಿರುಚಾಟಗಳನ್ನು ವೈಭವೀಕರಿಸಿ ಸಾಮಾನ್ಯರನ್ನು ಭಯಭೀತರನ್ನಾಗಿಸಿ ಆತಂಕಕ್ಕೀಡುಮಾಡಿ ಅವರದ್ಯಾವುದೋ ಉದ್ದೇಶ ಈಡೇರಿಸಿಕೊಂಡಿರಬಹುದು. ಆದರೆ ನಾನಂತೂ ಅದರಿಂದ ತಿಳಿದುಕೊಂಡಿದ್ದು ಶೂನ್ಯ. ಈಗ ಇವೆಲ್ಲ ನೆನಪಾಗಲು ಕಾರಣ ನೀನು ನಮಗೆ ವರ್ಗಾಯಿಸಿದ, ಗರ್ಭಾವಸ್ಥೆ, ಬಾಣಂತನ ಕುರಿತಾದ ಹಳೆಯ ಪತ್ರಿಕೆಗಳನ್ನೆಲ್ಲ ಮೊನ್ನೆ ನಮ್ಮ ಪುಟ್ಟ ತಂಗಿಗೆ ನಾನು ವರ್ಗಾಯಿಸಿದೆ. ಇನ್ನೇನು ಕೆಲ ತಿಂಗಳುಗಳಲ್ಲಿ ಅವಳೂ ಅಮ್ಮನಾಗುತ್ತಾಳೆ. ಅವಳಿಗೂ ಅಮ್ಮನಾಗುವ ಅನನ್ಯ ಅನುಭೂತಿ ದೊರಕಿಸಿಕೊಡುವ ಜವಾಬ್ದಾರಿ ಈಗ ನಮ್ಮ ಮೇಲಿದೆ.
ಅಂತೂ ಮಕ್ಕಳನ್ನು ಹೆತ್ತಾಯಿತು. ಮಕ್ಕಳನ್ನು ಬೆಳೆಸುವಾಗಲೂ ಬೇಕಾಗುವ ತಾಳ್ಮೆ , ಪರಿಶ್ರಮ, ಶ್ರದ್ಧೆ ಎಲ್ಲವನ್ನೂ ನಿನ್ನಷ್ಟಲ್ಲದಿದ್ದರೂ ಸ್ವಲ್ಪ$ಮಟ್ಟಿಗೆ ರೂಢಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.ಮಕ್ಕಳಿಗೆ ಹೊಡೆಯುವುದನ್ನು ಈಗ ಪೂರ್ತಿ ನಿಲ್ಲಿಸಿದ್ದೇನೆ ಎಂದರೂ ತಪ್ಪಾಗಲಿಕ್ಕಿಲ್ಲ.
ನಿಮ್ಮೂರಲ್ಲಿ ಏನು ವಿಶೇಷ? ಅಡಿಕೆ ಸುಲಿಯುವಾಗಿನ ಮಹಿಳೆಯರ ಚರ್ಚೆ ದೈನಂದಿನ ಧಾರಾವಾಹಿಯ ಗಡಿ ದಾಟಿಲ್ಲ ಎಂದು ನಂಬಿದ್ದೇನೆ. ಆ ಚರ್ಚೆಯಿಂದ ದೂರವೇ ಉಳಿಯುವ ನಿನ್ನನ್ನು ಅವರುಗಳು ಗುಂಪಿಗೆ ಸೇರದ ಪದವಾಗಿಸಿ ಕುಹಕದ ಮಾತುಗಳನ್ನಾಡಿ ನಿನ್ನ ಮನ ನೋಯಿಸುವವರ ಬಗ್ಗೆ ನನಗೆ ತುಂಬಾ ಕನಿಕರವಿದೆ. ಅಂತೆಯೇ ನೀನು ರಾತ್ರಿ ಮಕ್ಕಳೊಂದಿಗೆ ಆಕಾಶದಲ್ಲಿ ನಕ್ಷತ್ರ ವೀಕ್ಷಣೆ ಮಾಡುವುದನ್ನೇ ವಿಚಿತ್ರ ದೃಷ್ಟಿಯಿಂದ ನೋಡಿ ಇವಳಿಗೇನೋ ತಲೆ ಕೆಟ್ಟಿದೆ ಎಂಬಂತೆ ನೋಡುವವರಿಂದ ಆದಷ್ಟು ದೂರವಿರು. ಇತ್ತೀಚಿನ ದಿನಗಳಲ್ಲಿ ಅವರ ಮಾತುಗಳಿಗೆ ಮುಗುಳ್ನಗುವಷ್ಟು ಸಾಮರ್ಥ್ಯ ನೀನು ಗಳಿಸಿದ್ದೀಯ ಎಂಬುದೇ ತುಂಬಾ ಹೆಮ್ಮೆ. ನೀನು ಮಕ್ಕಳಿಗೆ ವಿಜ್ಞಾನ ವನ್ನು ವಿವರಿಸುವ ರೀತಿ ನೆನೆದರೆ ನನಗೆ ನನ್ನ ಬಗ್ಗೆ ತುಂಬ ಕೀಳರಿಮೆ ಮೂಡುತ್ತದೆ. ಈಗ ನಾವು ಮೊಬೈಲ…ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳನ್ನು ಹಾಕಿಕೊಂಡು ಟೆರೇಸ್ ಏರಿದರೂ ನಕ್ಷತ್ರಗಳೆಲ್ಲಿ ಕಾಣಬೇಕು ನಮ್ಮ ನಗರಗಳಲ್ಲಿ ! ನೀನು ಅದೆಷ್ಟು ವರ್ಷಗಳಿಂದ ಅದ್ಯಾವುದೋ ಹಳೆಯ ವೈಜ್ಞಾನಿಕ ಲೇಖನಗಳನ್ನು ಹಿಡಿದು ರಾತ್ರಿ ಅಟ್ಟ ಹತ್ತಿ ನಿನ್ನ ಮಕ್ಕಳೊಂದಿಗೆ ಸ್ವಲ್ಪ ಹೊತ್ತು ಕಳೆಯುತ್ತಿದ್ದೆ
ಮನಸ್ಸಿಗೆ ಪೆಟ್ಟು ಬಿದ್ದಾಗಲೂ, ಜೀವನದಲ್ಲಿ ಸಾವು-ನೋವಿನೊಂದಿಗೆ ಹೋರಾಡುವ ಸಂದರ್ಭ ಒದಗಿ ಬಂದರೂ ನಿನ್ನ ದುಃಖ ತೋರ್ಪಡಿಸದೆ ನನ್ನ ತಂಗಿಯರು ಯಾಕೆ ನನಗೋಸ್ಕರ ಕೊರಗಬೇಕು ಎಂದು ದುಃಖ ತೋಡಿಕೊಳ್ಳಲು ಹಿಂದೇಟಾØಕುವ ನೀನು ನಮ್ಮ ಮಕ್ಕಳಿಗೆ ಹುಷಾರಿಲ್ಲದಾಗ ಮಾತ್ರ ದಿನಕ್ಕೆರಡು ಬಾರಿ ಫೋನಾಯಿಸಿ ಧೈರ್ಯ ತುಂಬುತ್ತೀಯ! ಹೀಗೆ ಹೇಳುತ್ತ ಹೋದರೆ ನೂರಾರಿದೆ. ಕಡೆಯವರೆಗೂ ಷಟ್ಕೊàನದ ರಂಗೋಲಿ ಬಿಟ್ಟು ಬೇರೆಯದನ್ನು ಅಭ್ಯಾಸವೇ ಮಾಡದ ನನಗೆ ಸ್ವಲ್ಪ ಮಟ್ಟಿನ ರಂಗೋಲಿ ರುಚಿ ಹತ್ತಿಸಿದೆ. ಮದುವೆಯಾದ ಹೊಸತರಲ್ಲಿ ಊರಿನಲ್ಲಿರುವ ಗಂಡನ ಮನೆಗೆ ಬಂದಾಗಲಾದರೂ ಷಟ್ಕೊàನ ಬಿಟ್ಟು ಸುಲಭವಾಗಿ ಹಾಕಬಲ್ಲ ಪುಟ್ಟ ಪುಟ್ಟ ರಂಗೋಲಿಗಳನ್ನು ಹಾಕು ಎಂದು ನೀನು ಬರೆದುಕೊಟ್ಟಿದ್ದು ನನಗೆ ಚೆನ್ನಾಗಿ ನೆನಪಿದೆ. ಏಕೆಂದರೆ, ಊರಿನಲ್ಲಿ ಹೊಸ ಸೊಸೆಯ ರಂಗೋಲಿಯೇ ಅವಳ ಬಗೆಗಿನ ಇಮೇಜ… ಸೃಷ್ಟಿಸುವಲ್ಲಿ ಹೇಗೆ ಮಾನದಂಡವಾಗುತ್ತದೆ ಎನ್ನುವವರ ಮಧ್ಯೆಯೇ ಬದುಕುವವಳು ನೀನು. ಉಪನ್ಯಾಸ, ಪ್ರವಚನ ಮಾಲಿಕೆಗಳೆಂದರೆ ವೈರಾಗ್ಯದ ಬಾವಿಯಲ್ಲಿ ಬೀಳುವುದು ಎಂದು ನಂಬಿದ್ದ ನನಗೆ, ಜೀವನವನ್ನು ಬೇರೆ ಬೇರೆ ಆಯಾಮಗಳಿಂದ ನೋಡುವುದರಲ್ಲಿ ಕೆಲವು ಉನ್ನತ ವಿಚಾರಗಳು ನಮಗೆ ಗೊತ್ತಿಲ್ಲದಂತೆ ನಮ್ಮ ಕೈ ಹಿಡಿಯುವುದು ಹೇಗೆ ಎಂದು ಹೇಳದೇ ಅರ್ಥೈಸಿದೆ. ಸಾಕಲ್ಲವೇ ಇಷ್ಟು? ನಿನ್ನ ತಂಗಿಯರು ಮತ್ತಿನ್ನೇನು ನಿರೀಕ್ಷಿಸುವುದು ನಿನ್ನಿಂದ?
ಹಾಂ ! ಒಂದು ವಿಚಾರ, ಈ ಪತ್ರವನ್ನು ಮನೆಯ ಮೆತ್ತಿಯಲ್ಲೋ ಜಗುಲಿಯಲ್ಲೋ ಎಲ್ಲರೆದುರು ಕುಳಿತು ಓದಬೇಡ. ನಿಮ್ಮ ಮನೆಯ ಧರೆ ಹತ್ತಿ ಹಿತ್ತಲಿನಲ್ಲಿ ಒಂಟಿಯಾಗಿ ಕುಳಿತು ಓದು, ಎದುರಿಗೆ ಗಿಡ ಮರಗಳಿರಲಿ, ಪ್ರಾಣಿ-ಪಕ್ಷಿಗಳಿರಲಿ, ಆಗ ಮಾತ್ರ ನನ್ನ ಪ್ರತಿ ಸಾಲುಗಳು ಜೀವಂತಿಕೆಯಿಂದ ಪುಟಿಯುತ್ತವೆ.
ವಿದ್ಯಾ ಹೊಸಕೊಪ್ಪ