ಹಾಸನ: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕೆಂದು ಆಗ್ರಹಿಸಿ ಶನಿವಾರ ಬೆಳಿಗ್ಗೆ ನಿಗಮದ ಹಾಸನ ಡಿಪೋದ ಮುಂದೆ ಚಾಲಕರು, ನಿರ್ವಾಹಕರು, ಮತ್ತು ಸಿಬ್ಬಂದಿ ಶನಿವಾರ ಬೆಳಿಗ್ಗೆ ಪ್ರದರ್ಶನ ನಡೆಸಿ ಮುಖ್ಯಮಂತ್ರಿಯವರಿಗೆ ಪತ್ರ ಚಳವಳಿ ಆರಂಭಿಸಿದರು.
ಮುಖ್ಯಮಂತ್ರಿ, ರಾಜ್ಯಪಾಲರಿಗೆ ರವಾನೆ: ಕೆಎಸ್‌ಆರ್‌ಟಿಸಿ ಹಾಸನದ ಒಂದನೇ ಡಿಪೋದ ನೌಕರರು, ಚಾಲಕ, ನಿರ್ವಾಹಕರು ಪತ್ರವನ್ನು ಕೈಯಲ್ಲಿಡಿದು ಮುಖ್ಯಮಂತ್ರಿಗಳಿಗೆ ಮತ್ತು ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಪಾಲರಿಗೆ ಪತ್ರ ರವಾನೆ ಮಾಡುವುದಾಗಿ ಹೇಳಿದರು.
ವೇತನ ತಾರತಮ್ಯ ನಿವಾರಿಸಿ: ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಕೆಎಸ್‌ಆರ್‌ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ 6ನೇ ವೇತನ ಆಯೋಗದ ತಾರತಮ್ಯ ನಿವಾರಣೆಯೊಂದಿಗೆ ಸರ್ಕಾರಿ ನೌಕರರಿಗೆ ನೀಡುತ್ತಿರುವ ಎಲ್ಲ ಸೌಲಭ್ಯವನ್ನು ರಸ್ತೆ ಸಾರಿಗೆ ನಿಗಮದ ನೌಕರರಿಗೂ ನೀಡಬೇಕು ಎಂದು ಆಗ್ರಹಪಡಿಸಿದರು.
ಸೇವಾ ಭದ್ರತೆ ನೀಡಿ: ಸರ್ಕಾರದ ಅಂಗ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ನೌಕರರನ್ನು ರಾಜ್ಯ ಸರ್ಕಾರದ ಇತರೆ ನೌಕರರಂತೆ ಕಾಣುತ್ತಿಲ್ಲ. ಜೊತೆಗೆ ವೇತನ, ಪಿಂಚಣಿ, ಭತ್ಯೆ ಹಾಗೂ ರಜೆ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ.ಸೇವಾ ಭದ್ರತೆಯನ್ನು ನೀಡಿಲ್ಲ. ಹಾಗಾಗಿ ಸಾರಿಗೆ ಸಂಸ್ಥೆಯ ರಾಜ್ಯದ 4 ನಿಗಮಗಳ ನೌಕರರೂ ಪತ್ರ ಚಳವಳಿ ಆರಂಭಿಸಿದ್ದು, ನಮ್ಮ ಬೇಡಿಕೆಯನ್ನ ಈಡೇರಿಸದಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂದಿನ ದಿನದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಬೇಡಿಕೆಗೆ ಸ್ಪಂದಿಸದ ಸರ್ಕಾರ: ನೌಕರರ ಮುಖಂಡ ಫಾಲಾಕ್ಷ ಮಾತನಾ, ದೇಶದ ಇತರೆ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಶೇ.30ರಷ್ಟು ಕಡಿಮೆಯಿದೆ. ಈ ಬಗ್ಗೆ ಕಳೆದ ಒಂದೂವರೆ ದಶಕದಿಂದ ಸರ್ಕಾರದ ಮುಂದೆ ಬೇಡಿಕೆಗಳನ್ನು ಮಂಡಿಸುತ್ತಾ ಬಂದಿದ್ದರೂ ಸ್ಪಂದಿಸಿಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.
ಕೆಎಸ್‌ಆರ್‌ಟಿಸಿ ನೌಕರರಾದ ಮಲ್ಲಿಕಾರ್ಜುನ್, ದೇವರಾಜು, ಧರ್ಮ, ಚಂದ್ರಶೇಖರ್, ಗಿರೀಶ್, ಸತೀಶ್, ಯೋಗಾರಾಜು, ಆನಂದ್, ಭಾಗ್ಯಮ್ಮ, ಮತ್ತಿತರರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.