ದೊಡ್ಡಬಳ್ಳಾಪುರ: ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡದಿರುವ ಪರಿಣಾಮ ಇಂದು ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿದೆ. ಸಂವಿಧಾನದಲ್ಲಿ ಅಂಗೀಕೃತವಾಗಿರುವ ಎಲ್ಲಾ ಭಾಷೆಗಳಿಗೂ ಸಮಾನ ಮಾನ್ಯತೆ ಇದ್ದು, ಈ ದಿಸೆಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಿ ಸಮಾನ ಶಿಕ್ಷಣ ನೀತಿ ಜಾರಿಗೊಳಿಸುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ರಾಷ್ಟ್ರಭಾಷೆ: ಸಂವಿಧಾನ ಅಂಗೀಕರಿಸಿರುವ 22 ಭಾಷೆಗಳು ಸಹ ರಾಷ್ಟ್ರಭಾಷೆಗಳಗಿವೆ. ಇದರಲ್ಲಿ ಯಾವುದೂ ಹೆಚ್ಚಲ್ಲ, ಯಾವುದೂ ಕಡಿಮೆಯಲ್ಲ. ಆದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡುತ್ತಿಲ್ಲ. ಕರ್ನಾಟಕ ಮೂಲದ ಬ್ಯಾಂಕ್‌ಗಳಲ್ಲಿಯೂ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿಲ್ಲ. ವ್ಯಾಪಾರೀಕರಣದ ಪ್ರಭಾವ ಇಂದು ನೆಲದ ಭಾಷೆಗೆ ಕುತ್ತಾಗುತ್ತಿದೆ. ಉದ್ಯೋಗ ವಂಚಿತ ಯುವಕರು ಸಮಾಜ ಘಾತುಕರಾಗುತ್ತಿದ್ದಾರೆ ಎಂದರು.
ಬದ್ಧತೆ ಬೇಕು: ಆಡಳಿತದಲ್ಲಿ ಬದ್ಧತೆ ಇಚ್ಛಾಶಕ್ತಿ ಇದ್ದರೆ ಮಾತ್ರ ಶಿಕ್ಷಣ ಸಂಸ್ಥೆಗಳು ಏಳಿಗೆಯಾಗುತ್ತವೆ. ನಾಮಕಾವಾಸ್ತೆ ಆಡಳಿತದಿಂದ ಶಿಕ್ಷಣ ಬೆಳೆಯುವುದಿಲ್ಲ. ಮಕ್ಕಳಿಗೆ ನಾವು ಹೇಳಿಕೊಡುವ ಶಿಕ್ಷಣದ ಉತ್ತರದಾಯಿತ್ವ ಇರಬೇಕು. ಉತ್ತಮ ಪರಿಸರ, ಶೈಕ್ಷಣಿಕ ವಾತಾವರಣ ಮೂಡಿಸುವಲ್ಲಿ ಕಾಲೇಜಿನ ನೇತೃತ್ವ ವಹಿಸುವವರ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಪಿ.ರಾಜಣ್ಣ ಕಾರ್ಯ ಶ್ಲಾಘನೀಯ ಎಂದರು.
ಸಾಧನೆಗೆ ಸ್ಫೂರ್ತಿ: ಉದ್ಯಮಿ ಕಿಶನ್ ಲಾಲ್ ಚಂಪಾಲಾಲ್ ಜೈನ್ ಮಾತನಾಡಿ, ಶಿಕ್ಷಣದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮುನ್ನಡೆಯಬೇಕು. ನಮ್ಮ ವ್ಯಕ್ತಿತ್ವ ಹಾಲಿನಂತಿರಬೇಕು. ಅದಕ್ಕೆ ಸ್ವಲ್ಪ ಹುಳಿ ಹಿಂಡಿದರೆ ಒಡೆಯುತ್ತದೆ. ಗಾಂಧೀಜಿ, ಸ್ವಾಮಿ ವಿವೇಕಾನಂದ ಮೊದಲಾ ಮಹನೀಯರು ಸಹ ನಮ್ಮ ನಿಮ್ಮಂತೆಯೇ ಇದ್ದು ಸಾಧನೆ ಮಾಡಿದ್ದು, ಸ್ಫೂರ್ತಿಯಾಗಬೇಕು ಎಂದರು.
Advertisement
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದರು.
Related Articles
Advertisement
ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ಜ್ಞಾನಾರ್ಜನೆಗೆ ಯಾವುದೇ ಮಡಿವಂತಿಕೆ ಇರಬಾರದು. ಇಂಗ್ಲಿಷ್ ಭಾಷೆಯ ಕಲಿಕೆ ನಮ್ಮ ಜ್ಞಾನಾರ್ಜನೆಗೆ ಪೂರಕವಾಗಬೇಕು. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಂಡು ನಮಗೆ ನಾವೇ ಮಾರ್ಗದರ್ಶಿಗಳಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ಪ್ರಾಂಶುಪಾಲ ಎಸ್.ಪಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಬೋಧಕೇತರ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ನಾರಾಯಣಸ್ವಾಮಿ ದಂಪತಿಯನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.