ಸುಳ್ಯ ತಾಲೂಕಿನ ಜೀವನದಿ “ಪಯಸ್ವಿನಿ’ಯ ಒಡಲು ಮಲಿನವಾಗುತ್ತಿದೆ. ಮೂರು ಜಿಲ್ಲೆಗಳಲ್ಲಿ ಒಟ್ಟು 87 ಕಿ.ಮೀ. ಹರಿಯುವ ನದಿ ತನ್ನೊಡಲಿನಲ್ಲಿ ತ್ಯಾಜ್ಯವನ್ನು ತುಂಬಿಕೊಂಡು ಸಂಕಟಪಡುತ್ತಿದೆ. ಈ ನದಿಯನ್ನು ಶುದ್ಧ ರೂಪದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಉದಯವಾಣಿ ಸುದಿನ ಕಾಳಜಿ ಇದು. ಓದುಗರೂ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಬರೆದು ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಭಾವಚಿತ್ರದೊಂದಿಗೆ ನಮಗೆ ಕಳುಹಿಸಿ. ಆಯ್ದ ಅಭಿಪ್ರಾಯಗಳನ್ನು ಸುದಿನದಲ್ಲಿ ಪ್ರಕಟಿಸಲಾಗುವುದು.
ನಮ್ಮ ವಾಟ್ಸ್‌ಆ್ಯಪ್ ಸಂಖ್ಯೆ: 9108051452
ಪ್ರಕೃತಿಯನ್ನು ದೇವರಾಗಿ ಕಂಡವರು ನಾವು. ಪ್ರಕೃತಿಯಲ್ಲಿರುವ ಮರ, ಪರ್ವತ, ನದಿ ಪ್ರಾಣಿ-ಪಕ್ಷಿ ಇವೆಲ್ಲವೂ ನಮಗೆ ಪೂಜನೀಯ. ಅದರಲ್ಲೂ ನದಿಯನ್ನು ತಾಯಿಯಾಗಿ ಕಾಣುತ್ತಿದ್ದೇವೆ. ಯಾಕೆಂದರೆ ನದಿ ತೀರದ ನಾಗರಿಕತೆಯಿಂದ ಬಂದ ಸಂಸ್ಕೃತಿ ನಮ್ಮದು. ಭಾರತಕ್ಕೆ ಗಂಗಾ, ಕರ್ನಾಟಕಕ್ಕೆ ಕಾವೇರಿ, ದಕ್ಷಿಣ ಕನ್ನಡಕ್ಕೆ ನೇತ್ರಾವತಿ ಹೇಗೋ; ಹಾಗೆ ಸುಳ್ಯಕ್ಕೆ ಪಯಸ್ವಿನಿ ಜೀವ ನದಿ. ಪಯಸ್ವಿನಿ ನದಿ ಸುಳ್ಯದ ಮೂಲಕ ಹಾದು ಹೋಗದೆ ಇದ್ದರೆ ಏನಾಗುತ್ತಿತ್ತು? ಯೋಚಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಪಯಸ್ವಿನಿ ಸುಳ್ಯದ ಜನಜೀವನದೊಂದಿಗೆ ಹಾಸು ಹೊಕ್ಕಾಗಿದ್ದಾಳೆ.
ಒಂದು ವಸ್ತು ನಮ್ಮ ಜತೆ ಇದ್ದಾಗ ಅದರ ಮಹತ್ವ ಗೊತ್ತಾಗುವುದಿಲ್ಲ. ಅದು ಕಳೆದು ಹೋದರೆ ಅನಂತರ ಅದರ ಮಹತ್ವ ತಿಳಿಯುತ್ತದೆ. ತಾಯಿಯ ಹಾಗೆ. ತಾಯಿಯೆಂದರೆ ಸಾûಾತ್ ದೇವರೇ. ತನ್ನ ಹಾಲನ್ನು ಉಣಿಸಿ ನಮ್ಮನ್ನು ಪೋಷಿಸಿದಳು, ಲಾಲನೆ ಪಾಲನೆ ಮಾಡಿ ಬೆಳೆಸಿದವಳು. ಕುಟುಂಬದ ಎಲ್ಲ ನೋವನ್ನು ತಾನು ಹೊಟ್ಟೆಯಲ್ಲಿ ಹಾಕಿಕೊಂಡು ಸದಾ ಮಕ್ಕಳ ಶ್ರೇಯಸ್ಸನ್ನೇ ಬಯಸುವವಳು. ಆಕೆಯದು ನಿರ್ಮಲ ಮನಸ್ಸು, ನಿಸ್ವಾರ್ಥ ಭಾವ. ಹಲವು ಮಕ್ಕಳಿದ್ದರೂ ಎಲ್ಲರನ್ನು ಸಮಾನವಾಗಿ ಕಾಣುವಾಕೆ. ಅಂತಹ ತಾಯಿಯ ಋಣ ನಮ್ಮ ಮೇಲಿದೆ. ಆ ಋಣವನ್ನು ತೀರಿಸುವ ಬಗೆ ಹೇಗೆ? ಆಕೆ ಆರೋಗ್ಯವಂತಳಾಗಿ ಇರುವಂತೆ ನೋಡಿಕೊಳ್ಳಬೇಕು. ಆಕೆಗೆ ಯಾರೂ ತೊಂದರೆ ಮಾಡದಂತೆ ಎಚ್ಚರ ವಹಿಸಬೇಕು. ಮಕ್ಕಳಾದ ನಾವು ಎಲ್ಲೇ ಇರಬಹುದು, ಯಾವುದೇ ಹುದ್ದೆಯಲ್ಲಿ ಇರಬಹುದು, ಎಷ್ಟೇ ಬ್ಯುಸಿ ಆಗಿರಬಹುದು. ಆಗಾಗ ತಾಯಿಯಲ್ಲಿಗೆ ಬಂದು ಕುಶಲೋಪಚರಿ ನೋಡಿಕೊಳ್ಳುವುದು, ಆರೋಗ್ಯಕ್ಕೆ ಬೇಕಾದ ಏರ್ಪಾಡು ಮಾಡುವುದು ಇತ್ಯಾದಿ ನಮ್ಮ ಕರ್ತವ್ಯ. ಹೇಳುವುದು ಬಹಳ ಸರಳ. ಆದರೆ ಹಾಗೆ ಮಾಡುವವರು ಬಹಳ ವಿರಳ. ಆದರೆ ಅವಳ ಮಕ್ಕಳಾದ ನಾವೇ ಆಕೆಯನ್ನು ನೋಡಿಕೊಳ್ಳದಿದ್ದರೆ? ನಾವು ಯಾವ ದೇವರನ್ನು ಪೂಜಿಸಿದರೆವೇನು ಫಲ? ಎಷ್ಟು ಸಮಾಜಸೇವೆ ಮಾಡಿದರೇನು ಅರ್ಥ?
ಇದುವರೆಗೆ ನಾನು ಹೇಳಿದ ತಾಯಿ ಸುಳ್ಯದ ಜೀವ ನದಿ ಪಯಸ್ವಿನಿ. ಸುಮಾರು 87 ಕಿಲೋಮೀಟರ್‌ಗಳಷ್ಟು ಸಾಗುವ ಆಕೆಯ ವಿಶಾಲವಾದ ಮಡಿಲಲ್ಲಿ ಮಕ್ಕಳಾದ ನಾವು ಸುಮಾರು 15ರಿಂದ 20 ಲಕ್ಷ ಜನ ಇದ್ದೇವೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಕೆಯ ನೀರನ್ನು ಕುಡಿದು ಬದುಕು ಸಾಗಿಸುತ್ತಿದ್ದೇವೆ. ಕೃಷಿ, ಶಿಕ್ಷಣ, ಉದ್ದಿಮೆಗಳ ಮೂಲಕ ಸದೃಢರಾಗಿದ್ದೇವೆ. ಆದರೆ ತಾಯಿ ಪಯಸ್ವಿನಿಯ ಆರೋಗ್ಯ ಕೆಟ್ಟಿದೆ. ನಾವು ಆಕೆಯನ್ನು ಕಸದ ತೊಟ್ಟಿಯನ್ನಾಗಿ ಮಾಡಿದ್ದೇವೆ. ಆಕೆ ಪರಿಸರ ಹಾನಿ, ವಿಷಪೂರಿತ ತ್ಯಾಜ್ಯವನ್ನು ಮೌನವಾಗಿ ತನ್ನ ಒಡಲಲ್ಲಿ ಹಾಕಿಕೊಂಡು ಹರಿಯುತ್ತಿದ್ದಾಳೆ. ಆಕೆಯ ಬೊಗಸೆ ನೀರನ್ನು ಎತ್ತಿ ಕುಡಿಯುವಂತಿಲ್ಲ. ದಡಗಳಲ್ಲಿ ಪ್ರಕೃತಿದತ್ತವಾದ ಅರಣ್ಯಗಳು ನಾಶವಾಗಿ ಆಕೆ ಸದಾ ತನ್ನಲ್ಲಿ ಕೆಂಪು ನೀರನ್ನು ಹೊತ್ತು ಸಾಗುತ್ತಿದ್ದಾಳೆ. ಆಕೆಯ ಹೊಟ್ಟೆಯಲ್ಲಿರುವ ಜಲಚರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿ ಆಕೆ ಬಂಜೆಯಾಗುತ್ತಿದ್ದಾಳೆ. ಮರಳು ಸಾಗಾಟ, ಬಂಡೆ ಒಡೆಯುವಿಕೆ ಮೂಲಕ ಆಕೆ ವಿರೂಪಗೊಳ್ಳುತ್ತಿದ್ದಾಳೆ. ಮೇರೆ ಮೀರಿದ ನೀರು ಹೀರುವಿಕೆಯಿಂದಾಗಿ ಆಕೆ ಬತ್ತಿ ಕೃಷವಾಗುತ್ತಿದ್ದಾಳೆ.
ತಾಯಿ ಪಯಸ್ವಿನಿ ಮತ್ತೆ ಆರೋಗ್ಯವಂತಳಾಗಿ ಮೊದಲಿನಂತೆ ಪರಿಶುದ್ಧರಾಗಿ ಹರಿಯಬೇಕಲ್ಲವೇ? ಇದನ್ನು ಯಾರು ಮಾಡಬೇಕು? ಯಾರು ಆಕೆಯನ್ನು ಈ ದುಃಸ್ಥಿತಿಗೆ ತಳ್ಳುತ್ತಿದ್ದಾರೋ ಅವರೇ ತಾನೆ? ಅಂದರೆ ನಾವೇ. ನಮ್ಮ ತಾಯಿಯನ್ನು ನೋಡಿಕೊಳ್ಳುವುದು ಹೇಗೆ ದೇವರ ಸೇವೆಯೋ ಹಾಗೆ ತಾಯಿ ಪಯಸ್ವಿನಿಯನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ. ನಮ್ಮ ತಾಯಿಯನ್ನು ನೋಡಿಕೊಳ್ಳಲು ಇತರರು ನಮಗೆ ಹೇಳಬೇಕಾದ್ದಿಲ್ಲ. ಹೇಳಿಕೊಳ್ಳುವ ಮೊದಲೇ ನಾವು ನಮ್ಮ ಕರ್ತವ್ಯವನ್ನು ಆರಂಭಿಸೋಣ. ನಮ್ಮ ಜೀವನ ಶೈಲಿ ಮನೋಭಾವ, ಅಭ್ಯಾಸಗಳನ್ನು ಬದಲಾಯಿಸಿದರೆ ಖಂಡಿತ ಇದು ಸಾಧ್ಯ. ನಮ್ಮ ತಾಯಿ ಕಲುಷಿತಗೊಳ್ಳಲು ಕಾರಣಗಳನ್ನು ತಿಳಿಯೋಣ. ಅದು ಕಡಿಮೆಯಾಗುವಂತೆ ಎಚ್ಚರ ವಹಿಸೋಣ. ತಡವಾದರೆ ಪರಿಸ್ಥಿತಿ ಕೈ ಮೀರಿ ಹೋಗಬಹುದು. ಸ್ವಯಂಪ್ರೇರಿತರಾಗಿ ತಾಯ ಸೇವೆಯಲ್ಲಿ ತೊಡಗೋಣ. ಅಮ್ಮನ ಸೇವೆಗೆ ಬಾರದವರ ಚಿಂತೆ ನಮಗೆ ಯಾಕೆ? ಬಂದವರ ಜತೆ ಕೈ ಜೋಡಿಸೋಣ. ನಿಜವಾಗಿ ಆಲೋಚಿಸಿದರೆ ಇದು ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಅತ್ಯಗತ್ಯ. ಇದೇ ನಾವು ತಾಯಿ ಪಯಸ್ವಿನಿಗೆ ಸಲ್ಲಿಸುವ ಪೂಜೆ. ಬನ್ನಿ ಪಯಸ್ವಿನಿ ಉಳಿಸೋಣ.
– ಪ್ರಕಾಶ್ ಮೂಡಿತ್ತಾಯ ಪಿ.ರಾಜ್ಯ ಸಂಪನ್ಮೂಲ ವ್ಯಕ್ತಿ