ಸಿರಿಯಾದ ಮೇಲೆ ಶನಿವಾರ ನಡೆದಿರುವ ಕ್ಷಿಪಣಿ ದಾಳಿ ಅಮೆರಿಕ ಮತ್ತು ರಶ್ಯಾದ ನಡುವೆ ಮತ್ತೂಮ್ಮೆ ನೇರ ಮುಖಾಮುಖೀಗೆ ಮುನ್ನುಡಿ ಬರೆದಂತಿದೆ. ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಬಂಡುಕೋರರನ್ನು ಸದೆಬಡಿಯಲು ರಾಸಾಯನಿಕ ದಾಳಿ ನಡೆಸಿರುವುದಕ್ಕೆ ಪ್ರತಿಯಾಗಿ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಪಡೆಗಳು ಸಿರಿಯಾದ ಸೇನಾ ಮೂರು ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿವೆ. ಈ ದಾಳಿಯ ಪರಿಣಾಮ ಏನು ಎನ್ನುವುದು ಇನ್ನಷ್ಟೆ ಜಗತ್ತಿಗೆ ಗೊತ್ತಾಗಬೇಕಿದೆ. ಕಳೆದ ಏಳು ವರ್ಷಗಳಲ್ಲಿ ಸಿರಿಯಾದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದ ಸಂದರ್ಭದಲ್ಲಿ ನಡೆದಿರುವ ಅತಿ ದೊಡ್ಡ ದಾಳಿಯಿದು. ರಶ್ಯಾದ ಬೆಂಗಾವಲಿನಲ್ಲಿ ಸಿರಿಯಾ ನಡೆಸುತ್ತಿರುವ ನರಹತ್ಯೆಯನ್ನು ತಡೆಯಲು ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.ತೊಂಭತ್ತರ ದಶಕದ ಬಳಿಕ ತಣ್ಣಗಾಗಿದ್ದ ಅಮೆರಿಕ ಮತ್ತು ರಶ್ಯಾ ನಡುವಿನ ಶೀತಲ ಸಮರ ಮತ್ತೂಮ್ಮೆ ಶುರುವಾಗಿದೆ. ಆದರೆ ಇದಕ್ಕೆ ಪುಟ್ಟ ರಾಷ್ಟ್ರ ಸಿರಿಯಾ ಅಖಾಡವಾಗಿರುವುದು ಮಾತ್ರ ದುರದೃಷ್ಟಕರ.
ಹಾಗೆಂದು ಸಿರಿಯಾ ಮೇಲೆ ಅಮೆರಿಕ ದಾಳಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಸರಿಯಾಗಿ ಒಂದು ವರ್ಷದ ಹಿಂದೆ ಇದ್ಲಿಬ್‌ನಲ್ಲಿ 80 ಬಂಡುಕೋರರನ್ನು ರಾಸಾಯನಿಕ ಅಸ್ತ್ರ ಬಳಸಿ ಸಾಯಿಸಿದ್ದಕ್ಕೆ ಪ್ರತಿಯಾಗಿ ಸಿರಿಯಾದ ವಾಯುನೆಲೆಗಳ ಮೇಲೆ ದಾಳಿ ಮಾಡಲಾಗಿತ್ತು. ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಅವರೂ ಸಿರಿಯಾ ವಿರುದ್ಧ ಗುಟುರು ಹಾಕುತ್ತಿದ್ದರೂ ದಾಳಿ ಮಾಡುವ ದುಡುಕುತನವನ್ನು ತೋರಿಸಿರಲಿಲ್ಲ. ಇನ್ನೊಂದು ದೇಶದ ಆಂತರಿಕ ವಿಚಾರಗಳಲ್ಲಿ ಮೂಗುತೂರಿಸುವಾಗ ಎರಡೆರಡು ಸಲ ಯೋಚಿಸಬೇಕೆಂಬ ನಿಲುವು ಒಂದು ಕಾರಣವಾದರೆ ರಶ್ಯಾ ಜತೆಗೆ ನೇರ ಸಂಘರ್ಷ ಬೇಡ ಎನ್ನುವುದು ಎರಡನೇ ಕಾರಣವಾಗಿತ್ತು. ಆದರೆ ಒಬಾಮ ನೀತಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಟ್ರಂಪ್.
ಕ್ಷಿಪಣಿ ದಾಳಿಯಿಂದಾಗಿ ಸಿರಿಯಾದ ಆಂತರಿಕ ಸಂಘರ್ಷವೇನೂ ನಿಲ್ಲುವುದಿಲ್ಲ. ಬದಲಾಗಿ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ. ಮುಖ್ಯವಾಗಿ ಬಲಾಡ್ಯ ದೇಶಗಳಾದ ಅಮೆರಿಕ ಮತ್ತು ರಶ್ಯಾ ಸಿರಿಯಾವನ್ನೇ ಯುದ್ಧ ಭೂಮಿಯಾಗಿ ಮಾಡಿಕೊಂಡರೆ ನಲುಗಬೇಕಾಗುವುದು ಈ ಪುಟ್ಟ ರಾಷ್ಟ್ರ. ಇಂತಹ ಸಂದರ್ಭ ಉಂಟಾದರೆ ಇನ್ನಷ್ಟು ಸಾವುನೋವುಗಳು ಸಂಭವಿಸಲಿವೆ.ಮತ್ತೂಂದು ಸಾಮೂಹಿಕ ವಲಸೆ ಶುರುವಾಗಬಹುದು.ಅಂತಿಮವಾಗಿ ಇಡೀ ಜಗತ್ತು ಇದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಅಂತರಾಷ್ಟ್ರೀಯ ಸಮುದಾಯ ಈ ದಂಗೆಯನ್ನು ನಂದಿಸುವ ಪ್ರಯತ್ನ ಮಾಡಬೇಕೆ ಹೊರತು ಅದನ್ನು ಇನ್ನಷ್ಟು ಹೆಚ್ಚಿಸುವ ಪ್ರಚೋದನಕಾರಿ ಕ್ರಮ ಕೈಗೊಳ್ಳುವುದು ಸರಿಯಲ್ಲ ಎನ್ನುತ್ತಿದ್ದಾರೆ ರಾಜನೀತಿ ತಜ್ಞರು.
ಆದರೆ ಇಂತಹ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ಟ್ರಂಪ್‌ರದ್ದು ಬೇಜವಾಬ್ದಾರಿ ನಡೆ. ಉತ್ತರ ಕೊರಿಯಾ ವಿಚಾರದಲ್ಲೂ ಅವರು ಪದೇ ಪದೇ ಪ್ರನಚೋದನಕಾರಿಯಾಗಿ ನಡೆದುಕೊಂಡಿದ್ದರು. ಇದೀಗ ಸಿರಿಯಾ ವಿಚಾರದಲ್ಲೂ ಅದೇ ವರ್ತನೆಯನ್ನು ತೋರಿಸುತ್ತಾ ಜಗತ್ತನ್ನು ಯುದ್ಧದ ಆತಂಕಕ್ಕೆ ತಳ್ಳುತ್ತಿದ್ದಾರೆ. ರಶ್ಯಾದ ಅಧ್ಯಕ್ಷ ಪುಟಿನ್ ಕೂಡಾ ಬಿಕ್ಕಟ್ಟು ಶಮನ ಮಾಡುವ ಪ್ರಯತ್ನವನ್ನು ಮಾಡುತ್ತಿಲ್ಲ. ನಿಜವಾಗಿ ಹೇಳುವುದಾದರೆ 2015ರಲ್ಲಿ ರಶ್ಯಾ ಪ್ರವೇಶಿಸಿದ ಬಳಿಕವೇ ಸಿರಿಯಾ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಬಶರ್ ಅಲ್ ಅಸಾದ್ ವಿರುದ್ಧ ಏಳು ವರ್ಷದ ಹಿಂದೆ ಶುರುವಾದ ಶಾಂತಿಯುತ ಪ್ರತಿಭಟನೆಯೇ ಈಗ ಪೂರ್ಣ ಪ್ರಮಾಣದ ಸಂಘರ್ಷವಾಗಿ ಬದಲಾಗಿದೆ. ಅರಬ್ ವಿಪ್ಲವದಿಂದ ಪ್ರೇರಿತರಾಗಿರುವ ಬಂಡುಕೋರರೂ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ಸುಮಾರು 4 ಲಕ್ಷ ಜನರನ್ನು ಈ ವಿಪ್ಲ ಬಲಿತೆಗದುಕೊಂಡಿದೆ ಹಾಗೂ ಇದರ ದುಪ್ಪಟ್ಟು ಸಂಖ್ಯೆಯಲ್ಲಿ ಜನರು ನಿರ್ವಸಿತರಾಗಿದ್ದಾರೆ ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಹೇಳುತ್ತಿವೆ.
ಜಗತ್ತಿನಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳು ಸಾವಿರಾರು ಇವೆ. ಆದರೆ ಅಮೆರಿಕ, ರಶ್ಯಾ, ಫ್ರಾನ್ಸ್, ಬ್ರಿಟನ್‌ನಂತಹ ಬಲಿಷ್ಠ ರಾಷ್ಟ್ರಗಳಿಗೆ ಕಾಣಿ ಸುವುದು ಬಡ ರಾಷ್ಟ್ರಗಳ ಆಂತರಿಕ ವಿಪ್ಲವ ಮಾತ್ರ. ಸಿರಿಯಾದ ಸರಕಾರ ಮತ್ತು ಬಂಡುಕೋರರ ನಡುವೆ ನಡೆಯುತ್ತಿರುವುದು ಆ ದೇಶಕ್ಕೆ ಸೀಮಿತವಾಗಿರುವ ಹೋರಾಟವಾಗಿದ್ದರೂ ಪರದೇಶಗಳ ಹಸ್ತಕ್ಷೇಪ ದಿಂದಾಗಿ ಅದೀಗ ಅಂತರಾಷ್ಟ್ರೀಯ ಆಯಾಮವನ್ನು ಪಡೆದುಕೊಂಡಿದೆ. ಎರಡೂ ರಾಷ್ಟ್ರಗಳು ತಮ್ಮ ಸೇನಾ ಸಾಮರ್ಥ್ಯವನ್ನು ಪ್ರದರ್ಶಿಸಲು ನಡೆಸುತ್ತಿರುವ ಮೇಲಾಟದಿಂದಾಗಿ ಪುಟ್ಟ ರಾಷ್ಟ್ರಗಳು ನಲುಗುತ್ತಿವೆ.
ಪ್ರಬಲ ಶಕ್ತಿಗಳು ತಮ್ಮ ಸಾಮರ್ಥ್ಯವನ್ನು ಈ ರೀತಿ ವಿನಾಶಕ್ಕೆ ಬಳಸುವ ಬದಲು ಜಾಗತಿಕ ಶಾಂತಿಗಾಗಿ ಬಳಸಬೇಕಾಗಿರುವುದು ಈಗಿನ ಅಗತ್ಯ. ಆದರೆ ಮದೋನ್ಮತ್ತರಾಗಿರುವವರಿಗೆ ಈ ಮಾತನ್ನು ಹೇಳುವವರು ಯಾರು?