Advertisement

ಬದುಕಲು ಅವಕಾಶ ಕೊಡಿ

11:58 AM Jun 12, 2019 | Suhan S |

ಅಂಕೋಲಾ: ಮಳೆ ಬಂದು ಕೆರೆ ಹಳ್ಳ ಬಾವಿಗಳನ್ನು ತುಂಬಿಸಿ ನೀರಿನ ದಾಹ ನಿಗಿಸು ಎಂದು ಜನರು ಮಳೆಗೆ ಪ್ರಾರ್ಥಿಸಿದರೆ ಇತ್ತ ಮಳೆಯೆ ಬಾರದೇ ಇರಲಿ ಎಂದು ಕೆಲವು ಕುಟುಂಬ ಪ್ರಾರ್ಥಿಸುತ್ತ ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಜೀವನ ನಡೆಸುತ್ತಿದ್ದ ಮನ ಕಲುಕುವ ಘಟನೆಗೆ ಚತುಷ್ಪಥ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ಎಡೆಮಾಡಿಕೊಟ್ಟಿದೆ.

Advertisement

ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲೇ ಐಆರ್‌ಬಿ ಕಂಪನಿಯ ಅದ್ವಾನಗಳ ಸರಮಾಲೆಯೆ ಹೊತ್ತು ಬಂದಿದೆ. ತಮ್ಮ ಅವೈಜ್ಞಾನಿಕ ಕಾಮಗಾರಿಗಳಿಂದ ಒಂದಿಲ್ಲೊಂದು ಅವಘಡ ಸೃಷ್ಠಿಸುತ್ತಿದೆ. ಹಾಗೆಯೇ ಪಟ್ಟಣದ ಅಜ್ಜಿಕಟ್ಟಾದ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಹೆದ್ದಾರಿ ಅಗಲಿಕರಣ ಸಂದರ್ಭದಲ್ಲಿ ಎದುರಾದ ಗುಡ್ಡವನ್ನು ಕಟಿಂಗ್‌ ಮಾಡಲು ಆರಂಭಿಸಿದರು. ಈ ಗುಡ್ಡದಲ್ಲಿ ಕಳೆದ 40-50 ವರ್ಷಗಳಿಂದ ನಾಲ್ಕೈದು ಕುಟುಂಬಗಳು ಅತಿಕ್ರಮಣ ಮಾಡಿಕೊಂಡು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಅಲ್ಲಿರುವವರ ಕುಟುಂಬಕ್ಕೆ ಯಾವುದೇ ಬದಲಿ ವ್ಯವಸ್ಥೆ ನೀಡದೆ ಗುಡ್ಡ ಕತ್ತಿರಿಸಿರುವುದರಿಂದ ಇರುವ ಮನೆಯು ಸಹ ಅಪಾಯದ ಅಂಚಿಗೆ ಬಂದು ನಿಂತಿದೆ.

ಈ ಪ್ರದೇಶದಲ್ಲಿ ಜೋರಾಗಿ ಮಳೆ ಬಿದ್ದರೆ ಸಾಕು ಗುಡ್ಡ ಕುಸಿವ ಆತಂಕವಿದೆ. ಕಾರವಾರ ಮಾಜಾಳಿಯಿಂದ ಕುಂದಾಪುರ ತನಕ ಕೈಗೊಂಡ‌ ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಇವರು ನೆಲೆ ಕಳೆದುಕೊಂಡು, ಗುಡ್ಡದಂಚಿನಲ್ಲಿ ತಲೆ ಮೇಲೆ ತೂಗುಗತ್ತಿ ಇಟ್ಟುಕೊಂಡು ವಾಸಿಸುತ್ತಿದ್ದಾರೆ.

ಪ್ರಾಣಕ್ಕೆ ಬೆಲೆ ಇಲ್ಲ: ಕಳೆದ ವರ್ಷ ಕುಮಟಾದ ತಂಡ್ರಕುಳಿಯಲ್ಲಿ ನಡೆದ ಭೂಕುಸಿತ ಪರಿಣಾಮ ಆದ ಅವಘಡ ಇನ್ನೂ ಜನರ ಕಣ್ಣ ಮುಂದಿದೆ. ಇಂತಹ ಸಂದರ್ಭದಲ್ಲಿ ರಾಹೆ ಪ್ರಾಧಿಕಾರ ಮಾತ್ರ ಇವರಿಗೆ ಯಾವುದೇ ಪುನರ್ವಸತಿ ಕಲ್ಪಿಸದೇ, ಚೆಲ್ಲಾಟವಾಡುತ್ತಿದೆ.

ಮನೆಯೆ ಇಲ್ಲ: ಅತಿ ಬಡ ಕುಟುಂಬದವರಾದ ಇವರು ವಾಸಿಸಲು ಸರಿಯಾದ ಸೂರಿಲ್ಲದೆ ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ. ಯಾವಾಗ ಏನು ಅನಾಹುತವಾಗುತ್ತದೆಯೋ ಎಂಬ ಆತಂಕದಲ್ಲಿ ಇಲ್ಲಿಯ ಕುಟುಂಬಗಳಿವೆ. ಅತಿಕ್ರಮಣ ಜಾಗವಾಗಿರುವುದರಿಂದ ಹೆದ್ದಾರಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡ ಜಾಗೆಗೆ ಯಾವುದೇ ಪರಿಹಾರ ನೀಡಿಲ್ಲ. ಮನೆಯ ಅಂಚಿನವರೆಗೆ ಗುಡ್ಡ ಕೊರೆಯಲಾಗಿದೆ. ಜೋರಾದ ಮಳೆಯ ರಭಸಕ್ಕೆ ಗುಡ್ಡ ಕುಸಿದು ಅವಘಡ ಸಂಭವಿಸುವ ಪೂರ್ವದಲ್ಲಿ ಇಲ್ಲಿನ ಬಡ ಕುಟುಂಬಗಳಿಗೆ ಜಿಲ್ಲಾಡಳಿತ ಸೂರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ.

Advertisement

•ಅರುಣ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next