Advertisement

ಜೀವಯಾನ; ಬಾಳಿಗೊಂದಿಷ್ಟು ಬೆಳಕು: ನೆನಪುಗಳ ಮೂಟೆಯ ಭಾರ ಇಳಿಸೋಣ

08:56 AM Aug 13, 2020 | mahesh |

ನಾವು ಯೋಚಿಸುವ ರೀತಿ ಸರಿಯಿಲ್ಲ, ನಮ್ಮ ವರ್ತನೆ ಸರಿಯಿಲ್ಲ ಎಂದು ಎಷ್ಟೋ ಬಾರಿ ನಮಗೇ ಅನ್ನಿಸುವುದುಂಟು. ಆಲೋಚಿಸುವ ರೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದುಕೊಳ್ಳುತ್ತೇವೆ. ಸಾಧ್ಯವೇ?  ಸದ್ಗುರು ಜಗ್ಗಿ ವಾಸುದೇವ್‌ ಅವರಿಗೆ ಜ್ಞಾನಾರ್ಥಿಯೊಬ್ಬರಿಂದ ಇದೇ ಪ್ರಶ್ನೆ ಎದು ರಾಯಿತು. ನಿಮಗೆ ಎಂಥ ಆಲೋಚನೆಗಳು, ಭಾವನೆಗಳು ಉಂಟಾಗುತ್ತವೆ ಎಂಬುದರ ಪರಿಶೀಲನೆ ಮುಖ್ಯವಲ್ಲ ಎಂದರು ಸದ್ಗುರು.

Advertisement

ನಮ್ಮ ಮನಸ್ಸು ಮತ್ತು ದೇಹಗಳೆರಡೂ ಕಾರ್ಯಾಚರಿಸುವುದು ನೆನಪುಗಳ ಮೊತ್ತ ದಿಂದ. ಬೆಂಕಿಯ ಜ್ವಾಲೆ ಬಿಸಿ ಇರುತ್ತದೆ ಎಂಬುದು ಸಣ್ಣವರಿದ್ದಾಗ ನಮಗೆ ಗೊತ್ತಾಗಿದೆ. ಅದೇ ನೆನಪಿನಿಂದ ಈಗಲೂ ನಾವು ಬೆಂಕಿಯ ಹತ್ತಿರ ಹೋಗುವುದಿಲ್ಲ. ಎರಡು ಕಾಲುಗಳಿಂದ ನಡೆಯುವುದು, ಬೆರಳುಗಳನ್ನು ಉಪ ಯೋಗಿಸಿ ಅನ್ನ ಕಲಸಿ ಬಾಯಿಗೆ ತುತ್ತು ಇಟ್ಟುಕೊಳ್ಳುವುದು-ಇಂಥ ಸರಳ ಸಂಗತಿಗಳು ಕೂಡ ಹೀಗೆಯೇ, ಸ್ಮರಣೆಯ ಬಲದಲ್ಲಿ ನಡೆಯುತ್ತವೆ.

ಬರೇ ಮನಸ್ಸು ಮಾತ್ರ ಅಲ್ಲ, ದೇಹವೂ ಎಷ್ಟೋ ಸಂಗತಿಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುತ್ತದೆ. ನಮ್ಮ ಪೂರ್ವಜರ ರೀತಿಯದೇ ಕಣ್ಣು, ಬಾಯಿ, ಮೂಗು ಈಗ ನಮ್ಮ ಮುಖದ ಮೇಲಿರುವುದೂ ನಮ್ಮ ದೇಹದ ಒಳಗಿರುವ ಏನೋ ಒಂದು ಅದನ್ನು ನೆನಪಿಟ್ಟುಕೊಂಡಿದ್ದರಿಂದ. ಸಾವಿರಾರು ವರ್ಷ ಗಳಿಂದ ಸಂಚಿತವಾಗಿರುವಂಥ ನೆನಪು ಅದು.

ಹೀಗೆ ದೇಹ ಮತ್ತು ಮನಸ್ಸು ಎರಡೂ ನೆನಪುಗಳ ಮೂಟೆಯನ್ನು ಹೊತ್ತುಕೊಂಡಿವೆ. ಅದರ ಆಧಾರದಲ್ಲಿಯೇ ನಾವು ರೂಪುಗೊಳ್ಳು ವುದು, ನಮ್ಮ ನಿತ್ಯದ ಕೆಲಸಕಾರ್ಯ, ಚಟುವಟಿಕೆಗಳು, ಆಲೋಚನೆಗಳು, ಭಾವನೆ ಗಳು ಎಲ್ಲವೂ ನಡೆಯುವುದು.

ವಿಶ್ವದಲ್ಲಿ ನಮ್ಮ ಸ್ಥಾನ ಒಂದು ಧೂಳಿನ ಕಣಕ್ಕಿಂತಲೂ ಸಣ್ಣದು ಎಂಬುದನ್ನು ಮೊದಲು ಅರಿತುಕೊಳ್ಳೋಣ. ಈ ವಿಶಾಲ ವಿಶ್ವದಲ್ಲಿ ನಾವಿರುವ ಗ್ಯಾಲಕ್ಸಿ ಒಂದು ಧೂಳಿನ ಕಣದಷ್ಟು ಗಾತ್ರದ್ದು. ಈ ಹಾಲುಹಾದಿಯಲ್ಲಿ ನಮ್ಮ ಸೌರವ್ಯೂಹ ಇನ್ನೂ ಸಣ್ಣ ಧೂಳಿನ ಕಣದಂತೆ. ಅದರಲ್ಲಿ ನಮ್ಮ ಭೂಮಿಯ ಗಾತ್ರ ಮತ್ತೂ ಕಿರಿದು. ಅದರಲ್ಲಿ ನಾವಿರುವ ಹಳ್ಳಿಯೋ, ಪಟ್ಟಣವೋ ಇನ್ನಷ್ಟು ಸಣ್ಣದು.

Advertisement

ಅಂಥದ್ದರಲ್ಲಿ ನಾನೊಬ್ಬ ದೊಡ್ಡ ಮನುಷ್ಯ ಅಂದುಕೊಳ್ಳುತ್ತೇವೆ. ನಮ್ಮ ಆಲೋಚನೆ, ಭಾವನೆಗಳ ಬಗ್ಗೆ ಚಿಂತೆ ಮಾಡುತ್ತೇವೆ! ನಮಗೆ ಈ ವಿಶ್ವದಲ್ಲಿ ನಮ್ಮ ಸ್ಥಾನದ ಬಗ್ಗೆ ಅರಿವು ಇಲ್ಲ. ನಮ್ಮ ಆಲೋಚನೆ, ಭಾವನೆ ಸರಿಯಿಲ್ಲ ಎಂದುಕೊಳ್ಳುವುದು ನಾವು ಮಾತ್ರ; ಇಡೀ ವಿಶ್ವಕ್ಕೆ ಅದರಿಂದೇನೂ ಬಾಧಕವಿಲ್ಲ.

ಇಷ್ಟು ವಿಶಾಲವಾದ ವಿಶ್ವದಲ್ಲಿ ನಾವು ಇಷ್ಟು ಸಣ್ಣವರು ಎಂಬ ಅರಿವನ್ನು ಹೊಂದುವುದೇ ಬಹುದೊಡ್ಡ ಜ್ಞಾನೋದಯ. ನಮ್ಮ ಆಲೋಚನೆ, ಭಾವನೆಗಳು ಇಡೀ ವಿಶ್ವದ ದೃಷ್ಟಿಯಿಂದ ತೀರಾ ಅಮುಖ್ಯ ಎಂಬ ಸತ್ಯ ಹೊಳೆದುಬಿಟ್ಟರೆ ನಮ್ಮ ಆಲೋಚನೆ ಮತ್ತು ಭಾವನೆಗಳಿಂದ ಸಮ ದೂರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆಲೋಚನೆ ಮತ್ತು ಭಾವನೆಗಳೆರಡೂ ಪ್ರಜ್ಞಾಶೀಲ ಪ್ರಕ್ರಿಯೆಗಳಾಗಿ ಬದಲಾಗುವುದು ಆಗ.

ಇದಾದಾಗ ನಮ್ಮ ನೆನಪುಗಳ ಮೂಟೆಯ ಭಾರವನ್ನು ಇಳಿಸಿ ನಾವು ಹಗುರವಾಗುತ್ತೇವೆ. ಆಲೋಚನೆ, ಭಾವನೆ ಗಳೆಲ್ಲವೂ ಸ್ವತಂತ್ರ ಸುಂದರ ಅಸ್ತಿತ್ವವನ್ನು ಹೊಂದುತ್ತವೆ.

(ಸಂಗ್ರಹ)

ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು  edit@udayavani.com ಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next