ಬೆಂಗಳೂರು: ನಾಡು-ನುಡಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿದ ವಿಚಾರಗಳೆಲ್ಲವೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡು, ಇಂದಿನ ರಾಜಕಾರಣಿಗಳು ಹಾಗೂ ಯುವ ಜನರಿಗೆ ತಲುಪಿಸಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.
ಅಖೀಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ “ಜಿ.ನಾರಾಯಣಕುಮಾರ್ ಸಂಸ್ಮರಣೆ’, ಮತ್ತು ಕನ್ನಡಪರ ಹೋರಾಟಗಾರರಿಗೆ “ಜಿ ನಾಕು ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾರಾಯಣಕುಮಾರ್ ಕನ್ನಡಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದು ಶ್ಲಾ ಸಿದರು.
ನಾರಾಯಣ್ ಕುಮಾರ್ ಶಾಸಕರಾಗಿದ್ದ ವೇಳೆ ವಿಧಾಸಭೆಯಲ್ಲಿ ಮಹತ್ವದ ವಿಷಯಗಳನ್ನು ಚರ್ಚಿಸುತ್ತಿದ್ದರು. ಅವರು ಜನಪರ ವಿಚಾರಗಳನ್ನು ಮಂಡಿಸುತ್ತಿದ್ದರಿಂದ ಶಾಸನಭೆಯಲ್ಲಿ ಇವರ ಮಾತನ್ನು ಯಾರೂ ತಿರಸ್ಕರಿಸುತ್ತಿರಲಿಲ್ಲ ಎಂದರು.
ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಗೋಕಾಕ್ ಚಳವಳಿ ಕಾಲದಲ್ಲಿ ನಾರಾಯಣ್ ಕುಮಾರ್ ಅವರು ಉತ್ತರ ಕರ್ನಾಟಕದ ತುಂಬ ಮನೆ ಮಾತಾಗಿದ್ದರು. ಕನ್ನಡ ಪರ ಹೋರಾಟದ ವಿಚಾರದಲ್ಲಿ ಪ್ರಭಾಕರ್ ರೆಡ್ಡಿ ಜತೆ ಜಿನಾಕು ಅವರ ಹೆಸರು ಮುಂಚೂಣಿಯಲ್ಲಿತ್ತು ಎಂದರು.
ಕೊರಳಪಟ್ಟಿ ಹಿಡಿದಿದ್ದರು!: ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದ ಭಕ್ತವತ್ಸಲಂ, ತಮಿಳಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಂದಾದರು. ಆಗ ರೊಚ್ಚಿಗೆದ್ದ ನಾರಾಯಣಕುಮಾರ್, ಭಕ್ತವತ್ಸಲಂ ಅವರ ಕೊರಳಪಟ್ಟಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಂತಹ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ವ.ಚ.ಚನ್ನೇಗೌಡ ಹೇಳಿದರು. ಇದೇ ವೇಳೆ ಕನ್ನಡಪರ ಹೋರಾಟಗಾರರಾದ ದೊಡ್ಡೇಗೌಡ, ಜಿ. ಗುರುಪ್ರಸಾದ್ ಅವರಿಗೂ “ಜಿನಾಕು ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕನ್ನಡ ಚಳವಳಿ ನಾಯಕ ಗುರುದೇವ್ ನಾರಾಯಣ್‌ಕುಮಾರ್, ಕನ್ನಡಪರ ಹೋರಾಟಗಾರ ಫಾಲನೇತ್ರ ಮತ್ತಿತರರು ಉಪಸ್ಥಿತರಿದ್ದರು.