Advertisement

“ಬಿಜೆಪಿ ಕೊಡುಗೆ ವಿಚಾರ ಚರ್ಚೆಗೆ ಬರಲಿ’

09:34 AM Apr 05, 2019 | Team Udayavani |

ಮಂಗಳೂರು: ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವ ಬಿಜೆಪಿಯವರು ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ 28 ವರ್ಷಗಳಲ್ಲಿ ಬಿಜೆಪಿಯ ಕೊಡುಗೆ ಏನು, ಕಳೆದ 10 ವರ್ಷಗಳಲ್ಲಿ ಹಾಲಿ ಸಂಸದರ ಕೊಡುಗೆ ಏನು ಎಂಬ ಬಗ್ಗೆ ಅಂಕಿಅಂಶಗಳ ಜತೆಗೆ ಚರ್ಚೆಗೆ ಬರಲಿ, ಕಾಂಗ್ರೆಸ್‌ ಸಾಮಾನ್ಯ ಕಾರ್ಯಕರ್ತ ಕೂಡ ಅವರ ಹೇಳಿಕೆಗಳನ್ನು ಸುಳ್ಳು ಎಂದು ಸಾಬೀತು ಮಾಡಲು ಶಕ್ತನಾಗಿದ್ದಾನೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಮಾಧ್ಯಮ ವಕ್ತಾರ ಹಾಗೂ ಸಂಯೋಜಕ ಎ.ಸಿ. ವಿನಯ್ ರಾಜ್‌ ಸವಾಲು ಹಾಕಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ಆದರ್ಶ ಗ್ರಾಮ ಬಳ್ಪವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ; ಅಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು ವಿದ್ಯುತ್‌ ಸಂಪರ್ಕವೇ ಸರಿಯಾಗಿಲ್ಲ ಎಂದು ಆಪಾದಿಸಿದರು.

ಸ್ಮಾರ್ಟ್‌ ಸಿಟಿಯನ್ನು ಕೇಂದ್ರದ ಕೊಡುಗೆ, ತಮ್ಮ ಸಾಧನೆ ಎಂದು ಬಿಜೆಪಿಯವರು ಹೇಳಿ ಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ 2,000 ಕೋಟಿ ರೂ.ಗಳ ಈ ಯೋಜನೆಯಲ್ಲಿ ಕೇಂದ್ರ ಸರಕಾರದ ಪಾಲು ನಾಲ್ಕನೇ ಒಂದು ಭಾಗ ಮಾತ್ರ. 500 ಕೋಟಿ ರೂ.ಗಳನ್ನು ಮಾತ್ರ ಕೇಂದ್ರ ಸರಕಾರ ಭರಿಸಲಿದೆ. ಉಳಿದ 500 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಮತ್ತು ಬಾಕಿ ಹಣವನ್ನು ಸ್ಥಳೀಯ ಸಂಸ್ಥೆಗಳು ಭರಿಸಬೇಕಾಗಿದೆ. ಹಾಗಿರುವಾಗ ಕೇಂದ್ರದ ಯೋಜನೆ ಹೇಗಾಗುತ್ತದೆ? 600 ಮೀಟರ್‌ ಉದ್ದ ಪಂಪ್‌ವೆಲ್‌ ಮೇಲ್ಸೇತುವೆ ಮಾಡಲು 8 ವರ್ಷಗಳಾದರೂ ಸಾಧ್ಯವಾಗಿಲ್ಲ. ಜಿಲ್ಲೆಯ ವ್ಯಾಪಾರ ವಹಿವಾಟಿನ ಪ್ರಧಾನ ಸಂಪರ್ಕ ರಸ್ತೆಯಾದ ತೊಕ್ಕೊಟ್ಟು ರಸ್ತೆಯ ಮೇಲ್ಸೇತುವೆ ಕೂಡ ಪೂರ್ಣಗೊಂಡಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಸಂಸದ ನಳಿನ್‌ ಅವರೊಬ್ಬ ವೈಫ‌ಲ್ಯಗಳ ಸರದಾರ ಎನ್ನಬಹುದು ಎಂದವರು ಟೀಕಿಸಿದರು.

ಮಂಗಳೂರು- ತಲಪಾಡಿ- ಸುರತ್ಕಲ್‌ -ಕುಂದಾಪುರ -ಗೋವಾ ಗಡಿ ತನಕ ನಾಲ್ಕು ಪಥಗಳ ಹೆದ್ದಾರಿ ಕಾಮಗಾರಿ ಅಭಿವೃದ್ಧಿ ಯೋಜನೆ ನಿರ್ಮಿಸಿ, ನಿರ್ವಹಿಸಿ ಹಸ್ತಾಂತರಿಸುವ (ಬಿಒಟಿ) ಮಾದರಿಯಲ್ಲಿ ಅನುಷ್ಠಾನ ಆಗಬೇಕಿತ್ತು. 2016ರಲ್ಲಿ ಮುಕ್ತಾಯ ಆಗಬೇಕಾದ ಇದು ಇನ್ನೂ ಪೂರ್ತಿಯಾಗಿಲ್ಲ. ರೈಲು ನಿಲ್ದಾಣವನ್ನು ವಿಶ್ವ ದರ್ಜೆಗೆ ಏರಿಸಲಾಗುವುದು ಎಂದು ಪದೇ ಪದೇ ಸಂಸದರು ಹೇಳುತ್ತಾರೆ. ಆದರೆ ನಿಲ್ದಾಣದ ಪರಿಸ್ಥಿತಿ ಹದಗೆಟ್ಟಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಸದರಿದ್ದ ಸಂದರ್ಭ ಬಂದರು, ರೈಲು ನಿಲ್ದಾಣ ನಿರ್ಮಾಣ, ವಿಮಾನ ನಿಲ್ದಾಣ ಜತೆಗೆ ಎನ್‌ಐಟಿಕೆಯಂತಹ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿವೆ ಎಂದರು.  28 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿಯವರೇ ಸಂಸದರಾಗಿದ್ದರೂ ಅಭಿವೃದ್ಧಿ ಶೂನ್ಯವಾಗಿದೆ. ಆದ್ದರಿಂದ ಮಿಥುನ್‌ ರೈ ಅವರ ಪರ ಜಿಲ್ಲೆಯ ಜನರು ಮತದಾನ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

Advertisement

ಟಿ.ಕೆ. ಸುಧೀರ್‌, ವಿಶ್ವಾಸ್‌ ಕುಮಾರ್‌ ದಾಸ್‌, ನವನೀತ್‌, ನಝೀರ್‌ ಬಜಾಲ್‌, ಫಾರೂಕ್‌, ಪ್ರಕಾಶ್‌ ಸಾಲಿಯಾನ್‌, ಸದಾಶಿವ ಉಳ್ಳಾಲ್‌, ನೀರಜ್‌ಪಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next