Advertisement

ಪ್ರವಾಸೋದ್ಯಮದಲ್ಲಿ ಸಮುದಾಯ ಪಾಲ್ಗೊಳ್ಳಲಿ

06:12 AM Jan 04, 2019 | |

ಕಲಬುರಗಿ: ಪ್ರವಾಸೋದ್ಯಮವು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯೊಂದಿಗೆ ಸಮುದಾಯಗಳ ಅವಶ್ಯಕತೆಗಳನ್ನು ಪೂರೈಸುವ ಕ್ಷೇತ್ರವಾಗಿದ್ದು, ಸಮುದಾಯಗಳ ಪಾಲ್ಗೊಳ್ಳುವಿಕೆ ಇಲ್ಲದೇ ಪ್ರವಾಸೋದ್ಯಮ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಗ್ವಾಲಿಯರ್‌ನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೂರಿಸಂ ಟ್ರಾವೆಲ್‌ ಮಾನ್ಯೆಜಮೆಂಟ್‌ ಸಂಸ್ಥೆ ನಿರ್ದೇಶಕ ಪ್ರೊ| ಸಂದೀಪ ಕುಲಶ್ರೇಷ್ಠ ತಿಳಿಸಿದರು.

Advertisement

ಇಲ್ಲಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಇನ್‌ಕ್ರೆಡಿಬಲ್‌ ಇಂಡಿಯಾದ ಸಹಯೋಗದಲ್ಲಿ ಸ್ಕೂಲ್‌ ಆಫ್‌ ಬಿಸಿನೆಸ್‌ ಸ್ಟಡೀಸ್‌ ಹಾಗೂ ಬಿಸಿನೆಸ್‌ ಸ್ಟಡೀಸ್‌ ವಿಭಾಗ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ “ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಗುರುವಾರ ಪ್ರಮುಖ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರವಾಸೋದ್ಯಮ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದ್ದು, ಗ್ರಾಮೀಣ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅರಣ್ಯ ಮತ್ತು ಸಾಹಸಮಯ ಪ್ರವಾಸೋದ್ಯಮದತ್ತ ನಗರ ವಾಸಿಗಳು ಒಲವು ತೋರುತ್ತಿದ್ದಾರೆ. ಆದ್ದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ ಅಗತ್ಯವಿದೆ ಎಂದರು.

ಶ್ರೀಲಂಕಾದಲ್ಲಿ 2016-17ನೇ ಸಾಲಿನಲ್ಲಿ ಶೇ.20ರಷ್ಟು ಆರ್ಥಿಕ ಪ್ರಗತಿ ಪ್ರವಾಸೋದ್ಯಮದಿಂದಾಗಿದೆ. ಈಜಿಪ್ಟ್, ಬ್ರೆಜಿಲ್‌, ಕಿರಗಿಸ್ತಾನನಂತ ಸಣ್ಣ-ಪುಟ್ಟ ದೇಶಗಳಲ್ಲಿಯೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರಗತಿ ಸಾಧಿಸುತ್ತಿವೆ. ನಮ್ಮದೇ ದೇಶದ ಕೇರಳ, ಗೋವಾ ಮತ್ತು ರಾಜಸ್ಥಾನಗಳಲ್ಲಿ ಪ್ರವಾಸೋದ್ಯಮವು ಸಮುದಾಯಗಳ ಪಾಲ್ಗೊಳ್ಳುವಿಕೆಯಿಂದಲೇ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.

ಐತಿಹಾಸಿಕ ಮತ್ತು ಧಾರ್ಮಿಕ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೂ ಪ್ರವಾಸೋದ್ಯಮ ಚಾಚಿಕೊಂಡಿದ್ದು, ಅಲ್ಲಿನ ಜನರು ತಮ್ಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿದೆ. ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೂ ಪ್ರವಾಸೋದ್ಯಮ ಪೂರಕವಾಗಿದೆ. ಆದ್ದರಿಂದ ಪ್ರವಾಸಿ ತಾಣಗಳಲ್ಲಿ ಸ್ಥಳೀಯರು ಉತ್ಸುಕತೆಯಿಂದ ಪಾಲ್ಗೊಂಡಲ್ಲಿ ಪ್ರವಾಸೋದ್ಯಮ ಬೆಳೆವಣಿಗೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮುಖ್ಯ ಅತಿಥಿಯಾಗಿದ್ದ ಶ್ರೀಲಂಕಾದ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ| ಡಿ.ಎ.ಸಿ. ಸುರಂಗ ಸಿಲ್ವಾ ಮಾತನಾಡಿ, ಜನರನ್ನು ಬದಿಗಿಟ್ಟು ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆ ಇಟ್ಟುಕೊಳ್ಳುವುದು ಅಸಾಧ್ಯ. ಶ್ರೀಲಂಕಾದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜನರನ್ನು ಹೆಚ್ಚಿನ ರೀತಿಯಲ್ಲಿ ಭಾಗಿದಾರರಾಗಲು ಪ್ರೇರೇಪಿಸಲಾಗುತ್ತಿದೆ. ಹೀಗಾಗಿ ಶ್ರೀಲಂಕಾದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಗ್ರ ಶ್ರೇಣಿಯಲ್ಲಿದೆ. ಸುಸ್ಥಿರ ಪ್ರವಾಸೋದ್ಯಮ ನಮ್ಮೆಲ್ಲರಿಗೂ ಒಂದು ದೊಡ್ಡ ಸವಾಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ| ಎಚ್‌.ಎಂ.ಮಹೇಶ್ವರಯ್ಯ ಮಾತನಾಡಿ, ಸಿಯುಕೆನಲ್ಲಿ ಪ್ರವಾಸೋದ್ಯಮ ಕೋರ್ಸ್‌ ಆರಂಭಿಸಲು ಹಾಗೂ ಇನ್ನಿತರ ಮೂಲಸೌಕರ್ಯಕ್ಕೆ 10 ಕೋಟಿ ರೂ. ಹಾಗೂ ವಸತಿ ನಿಲಯ ನಿರ್ಮಾಣಕ್ಕಾಗಿ 1.79 ಕೋಟಿ ರೂ. ನೀಡಲು ಎಚ್‌ಕೆಆರ್‌ಡಿಬಿ ಒಪ್ಪಿಗೆ ನೀಡಿದೆ. ನೀರಿನ ಸಮಸ್ಯೆ ನಿವಾರಣೆಗೆ ಆವರಣದಲ್ಲಿ ಒಂದು ಕೋಟಿ ಲೀಟರ್‌ ಸಾಮರ್ಥ್ಯದ ಹೊಂಡ ನಿರ್ಮಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಬಿಸಿನೆಸ್‌ ಸ್ಟಡೀಸ್‌ ವಿಭಾಗದ ಡಾ| ಗಣಪತಿ ಸಿನ್ನೂರ, ಡಾ| ಮಹ್ಮದ ಜೋಹೇರ್‌ ಸಂಪಾದಕತ್ವದ “ಕಮ್ಯೂನಿಟಿ ಪಾರ್ಟಿಸಿಪೇಷನ್‌ ಇನ್‌ ಟೂರಿಸಂ ಡೆವಲೆಪಮೆಂಟ್‌ ಇನ್‌ ಎಮರ್ಜಿಂಗ್‌ ಕಂಟ್ರೀಸ್‌’ ಹಾಗೂ ಡಾ| ಗಣಪತಿ ಸಿನ್ನೂರ, ಪ್ರೊ| ಮಲ್ಲಿಕಾರ್ಜುನ ಅಲಗವಾಡಿ ಅವರ ಸಂಪಾದಕತ್ವದ “ಕಮ್ಯೂನಿಟಿ ಬೇಸಡ್‌ ಟೂರಿಸಂ ಇನ್‌ ಇಂಡಿಯಾ’ ಪುಸ್ತಕಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು. 

ವಿಶ್ವವಿದ್ಯಾಲಯ ಸಮ ಕುಲಪತಿ ಪ್ರೊ| ಜಿ.ಆರ್‌. ನಾಯಕ, ಸ್ಕೂಲ್‌ ಆಫ್‌ ಬಿಸನೆಸ್‌ ಸ್ಟಡೀಸ್‌  ವಿಭಾಗದ ಮಾಜಿ ಮುಖ್ಯಸ್ಥೆ ಪುಷ್ಟಾ ಎಂ.ಸವದತ್ತಿ, ಬಿಸನೆಸ್‌ ಸ್ಟಡೀಸ್‌ ವಿಭಾಗದ ಮುಖ್ಯಸ್ಥ ಪ್ರೊ| ಎಂ.ವಿ. ಅಲಗವಾಡಿ, ಸ್ಕೂಲ್‌ ಆಫ್‌ ಬಿಸಿನೆಸ್‌ ಸ್ಟಡಿಸ್‌ ವಿಭಾಗದ ಡೀನ್‌ ಪ್ರೊ| ಕೆ. ಪದ್ಮಶ್ರೀ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಠಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಸಹಾಯಕ ಪ್ರಾಧ್ಯಾಪಕಿ ಡಾ| ಸಾಫಿಯಾ ಪರ್ವೀನ್‌ ನಿರೂಪಿಸಿದರು, ಸಹಾಯಕ ಪ್ರಾಧ್ಯಾಪಕ ಮಹ್ಮದ್‌ ಜೋಹೆರ್‌ ವಂದಿಸಿದರು.

ಪ್ರವಾಸೋದ್ಯಮ ವಿವಿಧ ಹಂತದಲ್ಲಿ ಉದ್ಯೋಗ ಸೃಷ್ಟಿಸುವ ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಆರ್ಥಿಕ ಪ್ರಗತಿಗಾಗಿ ಪ್ರವಾಸೋದ್ಯಮದ ಮೇಲೆ ಅವಲಂಬನೆ ಹೊಂದಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಸ್ಥಳೀಯರು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ಆರ್ಥಿಕವಾಗಿ ಲಾಭ ಹೊಂದಬಹುದು. ಅಲ್ಲದೆ, ಬಡತನ ನಿವಾರಣೆಗೂ ಸಹಕಾರಿಯಾಗಲಿದೆ. ಹೈ.ಕ ಭಾಗವು ಸನ್ನತಿ, ಆನೆಗುಂದಿ, ಮಳಖೇಡ, ಹಿರೆಬೆಣಕಲ್‌, ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇ ನವಾಜ್‌, ಬುದ್ಧ ವಿಹಾರ, ಬಸವ ಕಲ್ಯಾಣ ಹಾಗೂ ಚಂದ್ರಂಪಳ್ಳಿ, ಕೊಂಚಾವರಂ, ದರೋಜಿ ಕರಡಿಧಾಮಗಳಂತಹ ಶ್ರೀಮಂತ ತಾಣಗಳಿದ್ದು, ಇವುಗಳ ಉತ್ತೇಜನಕ್ಕೆ ಒತ್ತು ನೀಡಬೇಕಾಗಿದೆ.
  ಡಾ| ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ಮಹಾಸಂಸ್ಥಾನ ಪೀಠಾಧಿಪತಿ ಹಾಗೂ ಶರಣ ಬಸವ ವಿಶ್ವವಿದ್ಯಾಲಯದ ಕುಲಾಧಿಪತಿ 

ಸಿಯುಕೆಗೆ 2.5 ಕೋಟಿ ರೂ. ನೆರವು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರವಾಸೋದ್ಯಮ ಕೋರ್ಸ್‌ ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಸಾಧ್ಯವಾದಲ್ಲಿ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 2.5 ಕೋಟಿ ರೂ. ಆರ್ಥಿಕ ನೆರವು ನೀಡಲಾಗುವುದು.
 ಪ್ರೊ| ಸಂದೀಪ ಕುಲಶ್ರೇಷ್ಠ 

Advertisement

Udayavani is now on Telegram. Click here to join our channel and stay updated with the latest news.

Next