Advertisement

ಹೊಸ ಹಾದಿಯನು ಹಿಡಿದು ನಡೆಯೋಣ ಮುಂದೆ

06:41 AM Jan 01, 2021 | Team Udayavani |

ಎಲ್ಲರ ಜೀವನವನ್ನೂ ತಲೆಕೆಳಗಾಗಿಸಬಲ್ಲ ತನ್ನ ಸಾಮರ್ಥ್ಯದಿಂದಾಗಿ, 2020, ಈ ತಲೆಮಾರಿನ ಬದುಕಿನಲ್ಲಿ ಅಳಿಸಲಾಗದಂಥ ಹೆಗ್ಗುರುತು ಮೂಡಿಸಿರುವುದು ನಿಶ್ಚಿತ. ಆದರೂ ಕಳೆದ ಶತಮಾನವು ಎದುರಿಸಿದ ಯುದ್ಧಗಳು, ಸಾಂಕ್ರಾಮಿಕಗಳು, ನೈಸರ್ಗಿಕ ವಿಪತ್ತುಗಳಿಗೆ ಹೋಲಿಸಿ ನೋಡಿದರೆ, 21ನೇ ಶತಮಾನದ ಮೊದಲ 20 ವರ್ಷಗಳು ಹಿತಕರವಾಗಿಯೇ ಇದ್ದವು ಎನ್ನಬಹುದು. ಒಂದೆಡೆ ನಾವೆಲ್ಲ ಭವಿಷ್ಯದ ಪೀಳಿಗೆಗಳಿಗಾಗಿ ಪರಿಸರ ವ್ಯವಸ್ಥೆಯನ್ನು ರಕ್ಷಿಸಲೇಬೇಕಾದಂಥ ಅನಿವಾರ್ಯವನ್ನು ಎದುರಿಸುತ್ತಿದ್ದೇವೆ. ಇದರ ಮಧ್ಯೆಯೇ ಸಾಂಕ್ರಾಮಿಕವು ಎಲ್ಲದಕ್ಕೂ ಅಡ್ಡಗಾಲು ಹಾಕಲಾರಂಭಿಸಿದೆ. ಗಮನಿಸಬೇಕಾದ ಅಂಶವೆಂದರೆ, ಈಗಿನ ಸಾಂಕ್ರಾಮಿಕವು ಹಲವು ಬಗೆಯಲ್ಲಿ ಅಡ್ಡಿ ಆತಂಕಗಳನ್ನು ನಮ್ಮ ಎದುರಿಗಿಟ್ಟಿದೆ ಎನ್ನುವುದು ನಿಜವಾದರೂ ಇದು ಅಪರಿಹಾರ್ಯವೇನೂ ಅಲ್ಲ. ಜನರ ಪ್ರಜ್ಞಾಪೂರ್ವಕ ಮತ್ತು ಜವಾಬ್ದಾರಿಯುತ ನಡವಳಿಕೆಯಿಂದ ಈ ಸಾಂಕ್ರಾಮಿಕವನ್ನು ಕೊನೆಗಾಣಿಸಬಹುದಾಗಿದೆ.

Advertisement

ಅನೇಕರು ಕೋವಿಡ್‌-19 ಹಾವಳಿಯನ್ನು ಎರಡನೇ ಮಹಾಯುದ್ಧಕ್ಕೆ ಹೋಲಿಸುತ್ತಿದ್ದಾರೆ. ಏಕೆಂದರೆ ಅವರು ಆ ಯುದ್ಧವನ್ನು ನೋಡಿಲ್ಲ ಅಷ್ಟೇ! ಆ ಯುದ್ಧದ ಸ್ವರೂಪವೇ ಭಿನ್ನವಾಗಿತ್ತು. ಇಂದು ಅಂಥ ಭಯಾನಕತೆಯನ್ನು ನಾವು ಎದುರಿಸುತ್ತಿಲ್ಲ. ನಿಮ್ಮ ಮನೆಗಳೂ ಗಟ್ಟಿಯಾಗಿಯೇ ಇವೆಯಲ್ಲವೇ? ಯಾರೂ ನಿಮ್ಮ ಮೇಲೆ ಬಾಂಬ್‌ ದಾಳಿ ನಡೆಸಿಲ್ಲವಲ್ಲವೇ? ಆದರೆ…ಈಗಿನ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಮಾನಸಿಕ ಸ್ಥಿರತೆಯನ್ನು ಜನರು ಹೊಂದಿಲ್ಲ. ಒಂದು ವೇಳೆ ನಾವೆಲ್ಲ ಒಂದಿಷ್ಟು ಯೋಗ, ಧ್ಯಾನದಲ್ಲಿ ತರಬೇತಿ ಪಡೆದಿದ್ದೆವು ಎಂದಾಗಿದ್ದರೆ ಆಗ ಕೇವಲ ಕಣ್ಣು ಮುಚ್ಚಿ ಹದಿನಾಲ್ಕು ದಿನಗಳವರೆಗೆ ಒಂದೇ ಸ್ಥಳದಲ್ಲಿ ಸದ್ದಿಲ್ಲದೆ ಕುಳಿತಿದ್ದರೆ, ಸಾಂಕ್ರಾಮಿಕದ ಕಥೆಯೇ ಮುಗಿದು ಹೋಗಿರುತ್ತಿತ್ತು!

ಎಲ್ಲ ತಲೆಮಾರುಗಳಲ್ಲೂ ಬರಗಾಲ, ಯುದ್ಧಗಳು, ಸಾಂಕ್ರಾಮಿಕ ರೋಗಗಳು, ಜ್ವಾಲಾಮುಖೀ ಸ್ಫೋಟ, ಭೂಕಂಪಗಳಂಥ ನೈಸರ್ಗಿಕ ವಿಪತ್ತುಗಳು ಘಟಿಸುತ್ತಲೇ ಬಂದಿವೆ. ಈ ಕಾರಣಕ್ಕಾಗಿಯೇ ಏನೇ ಸಂಭವಿಸಿದರೂ ಅದನ್ನು ಸರಾಗವಾಗಿ ಎದುರಿಸಿಕೊಂಡು ಹೋಗುವಂತೆ ಮನುಷ್ಯನನ್ನು ಗಟ್ಟಿಗೊಳಿಸುವುದು ಹೇಗೆ ಎಂಬುದರತ್ತ ನಾವು ಚಿತ್ತ ಹರಿಸಬೇಕಿದೆ.

ನಮ್ಮ ದೈಹಿಕ ಆರೋಗ್ಯಕ್ಕೆ ವೈರಾಣು ಸವಾಲು ಎಸೆಯುತ್ತಿದೆ. ಆದರೆ ಅದರೊಟ್ಟಿಗೆ ನಾವು ನಮ್ಮನ್ನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿಸಿಕೊಳ್ಳುತ್ತಾ ಹೆಚ್ಚುವರಿ ಸಮಸ್ಯೆಯನ್ನೂ ಸೃಷ್ಟಿಸುತ್ತಿದ್ದೇವೆ. ಈಗ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಹೀಗಾಗಿ “ಮಾನಸಿಕ ಖನ್ನತೆ ಅಥವಾ ಆತ್ಮಹತ್ಯೆಯ ಸಾಂಕ್ರಾಮಿಕ’ವನ್ನು ಬೆಳೆಯಲು ಬಿಡುವುದಿಲ್ಲ ಎಂದು ಎಲ್ಲ ಸಮಾಜಗಳು, ರಾಷ್ಟ್ರಗಳು ಮತ್ತು ಜನಸಾಮಾನ್ಯರು ಪ್ರತಿಜ್ಞೆ ಮಾಡಬೇಕಿದೆ. ನಾವು ಸ್ಥಿರವಾಗಿ, ಸಂವೇದನಾಶೀಲರಾಗಿ, ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಬೇಕಾದ ಸಮಯವಿದು. ನಿಮ್ಮನ್ನು ನೀವು ಉತ್ತಮ ಮನುಷ್ಯರನ್ನಾಗಿ ರೂಪಿಸಿಕೊಳ್ಳಲು ಶ್ರಮಿಸಬೇಕಾದ ಸಮಯವಿದು.

ನಾನು ಹೇಳುವುದಿಷ್ಟೆ-ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ನೀವು ಈಗ ಯಾವ ಮಟ್ಟದಲ್ಲಿದ್ದೀರೋ ಅದಕ್ಕಿಂತ ಶೇ.10ರಷ್ಟು ಉತ್ತಮರಾಗಿ. ಈ ವಿಚಾರದಲ್ಲಿ ನಾವು ಆನ್‌ಲೈನ್‌ನಲ್ಲಿ ಉಚಿತವಾಗಿಯೇ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ನೀಡುತ್ತಿದ್ದೇವೆ.

Advertisement

ನೆನಪಿಡಿ, ಈ ವೈರಾಣು ಸ್ವಲ್ಪ ಸಮಯದವರೆಗಷ್ಟೇ ತನ್ನ ಆಟ ಮುಂದುವರಿಸಲಿದೆ. ಒಮ್ಮೆ ಅದರ ಆಟ ಮುಗಿದ ಅನಂತರ, ನಿಮ್ಮ ಜೀವನದಲ್ಲಿ ಎದುರಾಗುವ ದೊಡ್ಡ ಆಟಕ್ಕಾಗಿ ನೀವು ಸಜ್ಜಾಗಬೇಕಿದೆ.

ಈ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವುದಷ್ಟೇ ನಮ್ಮ ಗುರಿಯಾಗಬಾರದು. ಅದರೊಟ್ಟಿಗೆ ಹೆಚ್ಚು ಸುಸಂಸ್ಕೃತ ಮತ್ತು ಸುಸ್ಥಿರ ಪ್ರಪಂಚದ ಸೃಷ್ಟಿಗೆ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕುವುದೂ ಅಗತ್ಯ. ಈ ನಿಟ್ಟಿನಲ್ಲಿ ನಾವು ಕೇವಲ “ಪ್ರತಿಕ್ರಿಯಿಸುವ’ ಬದಲು “ಪರಿಹಾರವನ್ನು’ ಕಂಡುಕೊಳ್ಳಬೇಕಾಗಿದೆ.

ಆದರೂ “ಸಾಧ್ಯತೆ’ ಮತ್ತು “ವಾಸ್ತವ’ದ ನಡುವೆ ಅಂತರವಂತೂ ಇದ್ದೇ ಇರುತ್ತದೆ. ಮುಂಬರುವ ವರ್ಷಗಳಲ್ಲಿ, ಉತ್ತಮ ವ್ಯಕ್ತಿಗಳಾಗಲು, ತನ್ಮೂಲಕ ಉತ್ತಮ ಜಗತ್ತನ್ನು ನಿರ್ಮಿಸಲು ಬೇಕಾದಂತಹ ಧೈರ್ಯ, ಬದ್ಧತೆ ಮತ್ತು ಪ್ರಜ್ಞೆ ನಮ್ಮೆಲ್ಲರಿಗೂ ಬರುವಂತಾಗಲಿ.

ಹತಾಶ ಮನೋಭಾವವೇ ನಮ್ಮ ಮುಂದಿನ ಹಾದಿಯಾಗಬಾರದು, ಬದಲಾಗಿ ಎಲ್ಲ ಜೀವಿಗಳ ಅಗತ್ಯಗಳನ್ನು ಪೂರೈಸುವ ಸಮರ್ಪಣ ಮನೋಭಾವ ನಮ್ಮದಾಗಬೇಕು.

ಸದ್ಗುರು

Advertisement

Udayavani is now on Telegram. Click here to join our channel and stay updated with the latest news.

Next