Advertisement

ಸರ್ವಜನರನ್ನು ಒಗ್ಗೂಡಿಸುವ ಗುಣವುಳ್ಳ ಗುರ್ಮೆ ಗೆಲುವಿಗೆ ಶ್ರಮಿಸೋಣ : ಪ್ರಮೋದ್‌ ಮಧ್ವರಾಜ್‌

11:23 AM May 01, 2023 | Team Udayavani |

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ಮತದಾರರು ಪ್ರಬುದ್ಧರಾಗಿದ್ದಾರೆ. ಜಾತಿವಾದಿಗಳಿಗೆ, ಕೋಮುವಾದಿಗಳಿಗೆ ಮತ ನೀಡದೇ ಸರ್ವಜಾತಿ, ಸರ್ವಧರ್ಮ ಮತ್ತು ಸರ್ವಜನರನ್ನೂ ಒಗ್ಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಾಮರ್ಥಯವುಳ್ಳ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರನ್ನು ಬಹುಮತಗಳಿಂದ ಗೆಲ್ಲಿಸಿ ಕೊಡುವ‌ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಕಾಪು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರ ಪರವಾಗಿ ರವಿವಾರ ಪಡುಬಿದ್ರಿ, ಉಚ್ಚಿಲ, ಹೆಜಮಾಡಿ, 80 ಬಡಗುಬೆಟ್ಟು, ಅಲೆವೂರು ಮೊದಲಾದ ಕಡೆಗಳಲ್ಲಿ ಮತಯಾಚನೆ ನಡೆಸಿ, ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಗುರ್ಮೆಯವರಿಗೆ ಸರಿಸಾಟಿ ಬೇರ್ಯಾರಿಲ್ಲ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರದ್ದು ವಿಶಿಷ್ಟ ವ್ಯಕ್ತಿತ್ವ. ಅವರಿಂದ ಯಾವುದೇ ಜಾತಿ, ಧರ್ಮದವರಿಗೆ ಅನ್ಯಾಯವಾಗುವುದಿಲ್ಲ. ಏನಾದರೂ ಆಗುವುದಿದ್ದರೆ ಅದು ಉಪಕಾರ ಮಾತ್ರ. ಅವರು ನಡೆಸಿರುವ ಜನಸೇವೆ, ಧರ್ಮ ಕಾರ್ಯಗಳೇ ಅವರ ಜೀವನ ಶೈಲಿಯನ್ನು ನಮ್ಮ ಮುಂದೆ ತೆರೆದಿಟ್ಟಿದೆ. ಎಲ್ಲ ಸಮುದಾಯದವರೂ ಗುರ್ಮೆ ಅವರ ಬಗ್ಗೆ ಸದಭಿಪ್ರಾಯವನ್ನು ಹೊಂದಿದ್ದು ಅವರು ಬಹುಮತಗಳೊಂದಿಗೆ ಜಯಿಸ‌ುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಶಾಸಕ ಲಾಲಾಜಿ ಗುಣಕ್ಕೆ ಮೆಚ್ಚುಗೆ : 2018ರ ಚುನಾವಣೆಯಲ್ಲಿ ಲಾಲಾಜಿ ಆರ್‌. ಮೆಂಡನ್‌ ಮತ್ತು ಗುರ್ಮೆ ಸುರೇಶ್‌ ಶೆಟ್ಟಿ ಕಾಪು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಕೊನೆಗೆ ಲಾಲಾಜಿ ಅವರಿಗೆ ಟಿಕೆಟ್‌ ಘೋಷಣೆಯಾದಾಗ ಗುರ್ಮೆ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಲಾಲಾಜಿಯವರನ್ನು ಗೆಲ್ಲಿಸಿದ್ದರು. ಈ ಬಾರಿ ಗುರ್ಮೆ ಅವರಿಗೆ ಪಕ್ಷ ಟಿಕೆಟ್‌ ನೀಡಿದ್ದು ಲಾಲಾಜಿ ಹೃದಯ ವೈಶಾಲ್ಯತೆ ಮೆರೆದು ಗುರ್ಮೆ ಗೆಲುವಿಗಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಂಪರೆಯನ್ನು ಬಿಜೆಪಿಯಿಂದ ಮಾತ್ರಾ ನಿರೀಕ್ಷಿಸಲು ಸಾಧ್ಯವಿದೆ ಎಂದರು.

ಮೀನುಗಾರರಿಗೆ ಬಿಜೆಪಿಯೇ ಶ್ರೀರಕ್ಷೆ : ಮೀನುಗಾರರಿಗೆ ಬಿಜೆಪಿಯೇ ಶ್ರಿರಕ್ಷೆಯಾಗಿದೆ. 50 ಸಾವಿರ ಕಿ. ಲೀ. ವರೆಗೆ ಇದ್ದ ಡೀಸೆಲ್‌ ಸಬ್ಸಿಡಿಯನ್ನು ಬೊಮ್ಮಾಯಿ ಸರಕಾರವು ಎರಡು ಲಕ್ಷ ಕಿ. ಲೀ. ವರೆಗೆ ಹೆಚ್ಚಿಸಿದ್ದು ಮೋದಿ ಸರಕಾರವು ನಾಲ್ಕು ದಿನಗಳ ಹಿಂದೆ ನಾಡದೋಣಿ ಮೀನುಗಾರರಿಗೆ 1,488 ಕಿ.ಲೋ.ಲೀ. ಸೀಮೆ ಎಣ್ಣೆಯನ್ನು ಮಂಜೂರು ಮಾಡಿದೆ. ಹೆಜಮಾಡಿ ಬಂದರು ಅಭಿವೃದ್ಧಿಗೆ ಚಾಲನೆ ನೀಡುವ ಮೂಲಕ ಮೀನುಗಾರರ ಹಿತ ಕಾಯಲು ಸರಕಾರ ಮುಂದೆ ಬಂದಿದೆ ಎಂದರು.

Advertisement

ಗೆಲುವೇ ನಮ್ಮ ಗುರಿ : ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಗೃಹ ಸಚಿವ ಅಮಿತ್‌ ಶಾ ಅವರ ಕಾರ್ಯಕ್ರಮಯಶಸ್ವಿಯಾಗಿ ನಡೆದಿದ್ದು ಎಲ್ಲರ ಸಹಕಾರವೇ ಅದಕ್ಕೆ ಮುಖ್ಯ ಕಾರಣವಾಗಿದೆ. ಕಾಪು ಕ್ಷೇತ್ರದ ಅಭಿವೃದ್ಧಿಯ ರೂವಾರಿ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮತ್ತು ಹಿರಿಯ ಮುತ್ಸದ್ಧಿ ರಾಜಕಾರಣಿ ಪ್ರಮೋದ್‌ ಮಧ್ವರಾಜ್‌ ಅವರ ಮಾರ್ಗದರ್ಶನವನ್ನು ಬಳಸಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಪಕ್ಷದ ಗೆಲುವೇ ನಮ್ಮ ಮುಂದಿರುವ ಗುರಿಯಾಗಿದ್ದು ಇನ್ನುಳಿದ 10-12 ದಿನಗಳಲ್ಲಿ ಸಂಪೂರ್ಣ ಶ್ರಮ ವಹಿಸಿ, ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದರು.

ಬಹುಮತದ ನಿರೀಕ್ಷೆ : ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಕಾಪು ಕ್ಷೇತ್ರದ 26 ಗ್ರಾಮ ಪಂಚಾಯತ್‌ ಮತ್ತು ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎರಡು ಸುತ್ತಿನ ಚುನಾವಣಾ ಪ್ರವಾಸ ನಡೆದಿದ್ದು, ಪ್ರಥಮ ಸುತ್ತಿನ ಮತಯಾಚನೆಯೂ ಪೂರ್ಣಗೊಂಡಿದೆ. ನಮ್ಮ ಅಪೇಕ್ಷೆ ಮತ್ತು ನಿರೀಕ್ಷೆಯಂತೆ ಬಿಜೆಪಿ ಹೆಚ್ಚಿನ ಬಹುಮತಗಳೊಂದಿಗೆ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ. ಎಲ್ಲ ಕಡೆಗಳಲ್ಲೂ ಅಭಿವೃದ್ಧಿ ಕೆಲಸಗಳು ಮಾತನಾಡುತ್ತಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು, ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರ ಬಹುಮುಖ ವ್ಯಕ್ತಿತ್ವ ಮತ್ತು ಸೇವಾ ಗುಣಗಳು ಬಿಜೆಪಿ ಗೆಲುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್‌ ನಾಯಕ್‌, ಪಕ್ಷದ ನಾಯಕರಾದ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಗೋಪಾಲಕೃಷ್ಣ ರಾವ್‌, ಕಿರಣ್‌ ಆಳ್ವ, ಶರಣ್‌ ಮಟ್ಟು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next