ಬೆಳಗಾವಿ: ದಿನ ನಿತ್ಯ ನಾವು ತಿಳಿದೋ ತಿಳಿಯದೆಯೋ ಶೇ. 60ರಷ್ಟು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಇದರಿಂದ ಸಮಾಜಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದರು.
ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ರವಿವಾರ ನಡೆದ ಪ್ಲಾಸ್ಟಿಕ್ ಮುಕ್ತ ಬೆಳಗಾವಿ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ಬೀಳುತ್ತಿರುವುದರಿಂದ ಜಲಚರ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ನಿಂದ ಜೀವ ಕಳೆದುಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದರು.
ಒಳ್ಳೆಯ ಕೆಲಸ ಮಾಡಲು ಜನರನ್ನು ಜಾಗೃತಿ ಮಾಡಬೇಕು. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡಿದ್ದಾರೆ. ಅದಕ್ಕೆ ಎಲ್ಲರೂ ಕೈ ಜೋಡಿಸುವ ಅಗತ್ಯವಿದೆ. ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣ ಮಾಡಲು ಜನರು ಸಂಕಲ್ಪ ಮಾಡಬೇಕು. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಜನ ಪ್ಲಾಸ್ಟಿಕ್ ಬಳಸುವುದನ್ನು ತ್ಯಜಿಸಿದಾಗ ಮಾತ್ರ ಹಂತ ಹಂತವಾಗಿ ಪ್ಲಾಸ್ಟಿಕ್ ಮುಕ್ತವಾಗುವುದು ಎಂದರು.
ಮನೆಯಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ಬಳಕೆಯ ತ್ಯಾಜ್ಯದಿಂದ ಸಾವಿರಾರು ಪ್ರಾಣಿ ಸಂಕುಲಗಳು ನಶಿಸುತ್ತಿವೆ. ಪ್ರವಾಹದಲ್ಲಿ ಹರಿದು ಬಂದಿದ್ದು ಅತೀ ಹೆಚ್ಚು ಪ್ಲಾಸ್ಟಿಕ್ ಚೀಲಗಳು. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಮೊದಲು ಮನೆಯಿಂದಲೇ ಸಂಕಲ್ಪ ಪ್ರಾರಂಭವಾಗಬೇಕು. ಬಳಿಕ ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕೆಂದು ಹೇಳಿದರು.
ಈ ವೇಳೆ ನ್ಯಾಯಾಧೀಧಿಶರಾದ ಮಹಾದೇವಯ್ಯ , ಬಿ.ಐ. ಪಾಟೀಲ, ಅರವಿಂದ ಜೋಶಿ, ವೀರೂಪಾಕ್ಷಯ್ಯ ನೀರಲಗಿಮಠ ಸೇರಿದಂತೆ ಇತರರು ಇದ್ದರು.