Advertisement

ತಂಬಾಕು ಸೇವನೆಯ ದುಶ್ಚಟದಿಂದ ದೂರ ಉಳಿಯೋಣ

12:34 AM May 31, 2023 | Team Udayavani |

ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್‌ 19ನಿಂದ ಸಾವನ್ನಪ್ಪಿರುವವರ ಸಂಖ್ಯೆಗಿಂತ ಬೀಡಿ, ಸಿಗರೇಟ್‌, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳ ಬಳಕೆಯಿಂದ ಮರಣ ಹೊಂದಿರುವವರ ಸಂಖ್ಯೆ ಅಧಿಕವಾಗಿದೆ. ತಂಬಾಕು ಉತ್ಪನ್ನಗಳ ನೇರ ಸೇವನೆ ಮತ್ತು ಪರೋಕ್ಷ ಸೇವನೆಯ ಪರಿಣಾಮದಿಂದ ಪ್ರತೀ ವರ್ಷ ಸರಿಸುಮಾರು 13.5-14 ಲಕ್ಷ ಜನರು ದೇಶದಲ್ಲಿ ಸಾವನ್ನಪ್ಪುತ್ತಿದ್ದಾರೆ.

Advertisement

ವಿಶ್ವ ಆರೋಗ್ಯ ಸಂಸ್ಥೆ ನಡೆಸಿರುವ ಗ್ಲೋಬಲ್‌ ಅಡಲ್ಟ್ ತಂಬಾಕು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 3 ಕೋಟಿ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಕರ್ನಾಟಕದ ಒಟ್ಟಾರೆ ಜನಸಂಖ್ಯೆಯ ಅರ್ಧಕ್ಕರ್ಧ ಮಂದಿ ಈ ಉತ್ಪನ್ನಗಳನ್ನು ಬಳಸುತ್ತಿರುವುದು ಕಂಡು ಬಂದಿದೆ. ಈ ಪೈಕಿ ಶೇ.8.8ರಷ್ಟು ಧೂಮಪಾನಿಗಳು, ಶೇ.16.3ರಷ್ಟು ಧೂಮಪಾನ ರಹಿತ ತಂಬಾಕು ಬಳಕೆದಾರರು ಸೇರಿದ್ದಾರೆ. ಇವರಲ್ಲಿ ಯುವಕರೇ ಹೆಚ್ಚು ವ್ಯಸನಿಗಳಾಗಿದ್ದಾರೆ.

ಮಾರಣಾಂತಿಕ ಕಾಯಿಲೆಗಳ ಜನಕ!
ತಂಬಾಕು ಸೇವನೆಯಿಂದ ದೇಹದ ಬಹುತೇಕ ಎಲ್ಲ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟ, ರೋಗನಿರೋಧಕ ಮತ್ತು ಸಂತಾನೋತ್ಪತ್ತಿ ಸಮಸ್ಯೆ, ಶ್ವಾಸಕೋಶ ಸಹಿತ ವಿವಿಧ ಅಂಗಾಂಗಗಳ ಕ್ಯಾನ್ಸರ್‌, ಅಧಿಕ ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಅಂಧತ್ವ, ಎಲುಬು ಸವೆತ ಸಹಿತ ಹಲವಾರು ಕಾಯಿಲೆಗಳಿಗೆ ತಂಬಾಕು ಸೇವನೆ ಕಾರಣೀಭೂತವಾಗಿದೆ.

ಈ ಬಾರಿಯ ಧ್ಯೇಯವಾಕ್ಯ
ತಂಬಾಕು ಮತ್ತು ಅದರ ಉತ್ಪನ್ನಗಳಿಂದಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯ ನಿರ್ಣಯದಂತೆ ಪ್ರತೀ ವರ್ಷ ಮೇ 31ರಂದು “ವಿಶ್ವ ತಂಬಾಕು ರಹಿತ ದಿನ’ವನ್ನು ಆಚರಿಸ ಲಾಗುತ್ತದೆ. “ನಮಗೆ ಆಹಾರ ಬೇಕು, ತಂಬಾಕು ಅಲ್ಲ’ ಎಂಬುದು ಈ ವರ್ಷದ ಧ್ಯೇಯವಾಕ್ಯ. ತಂಬಾಕನ್ನು ಬೆಳೆಯುವ ರೈತರನ್ನು ಪರ್ಯಾಯ ಬೆಳೆಗಳತ್ತ ಸೆಳೆದು ಆ ಬೆಳೆಗಳ ಮಾರುಕಟ್ಟೆ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದರ ಜತೆಯಲ್ಲಿ ಪೌಷ್ಟಿಕ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಗುರಿಯೊಂದಿಗೆ ಈ ಬಾರಿಯ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತಿದೆ.

ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳು
ಸಾರ್ವಜನಿಕರಿಂದ ಸಿಒಟಿಪಿಎ ಉಲ್ಲಂಘನೆಗಳನ್ನು ನೋಂದಾಯಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ಸ್ಟಾಪ್‌ ಟೊಬ್ಯಾಕೊ’ ಎಂಬ ಆ್ಯಂಡ್ರಾಯಿಡ್‌ ಮೊಬೈಲ್‌ ಆ್ಯಪ್ಲಿಕೇಶನ್‌ ಪರಿಚಯಿಸಿದೆ.
ನಗರಾಭಿವೃದ್ಧಿ ಇಲಾಖೆಯು 2022ರಲ್ಲಿ ತಂಬಾಕು ಮಾರಾಟಗಾರರ ಪರವಾನಿಗೆ ಕುರಿತು ಹೊರಡಿಸಿರುವ ಅಧಿಸೂಚನೆ ಪ್ರಕಾರ, ತಂಬಾಕು ಉತ್ಪನ್ನಗಳನ್ನು ಮಾರಾಟಕ್ಕೆ ಪ್ರತ್ಯೇಕ ಪರವಾನಿಗೆ ಕಡ್ಡಾಯವಾಗಿದ್ದು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮ ಎಂದು ಘೋಷಣೆ.
 ಅಪ್ರಾಪ್ತ ವಯಸ್ಕರನ್ನು ತಂಬಾಕು ಹಾವಳಿಯಿಂದ ರಕ್ಷಿಸಲು “ತಂಬಾಕು ಮುಕ್ತ ಉತ್ಪಾದನೆ-2023′ ಎಂಬ ಹೊಸ ನೀತಿಯನ್ನು ಪರಿಚಯಿಸುವ ಪ್ರಕ್ರಿಯೆ ನಡೆಯುತ್ತಿದೆ.
ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ(ಸಿಒಟಿಪಿಎ) 2003ರ ರಾಜ್ಯ ಮಟ್ಟದ ತಿದ್ದುಪಡಿಯು ಸರಕಾರದ ಪರಿಶೀಲನೆಯಲ್ಲಿದೆ.

Advertisement

ರಾಜ್ಯಾದ್ಯಂತ ಜಾಗೃತಿ
ರಾಜ್ಯ ಆರೋಗ್ಯ ಇಲಾಖೆಯೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮವನ್ನು ಕೈಗೊಂಡಿದೆ. ರಾಜ್ಯದ ಹಲವೆಡೆ ತಂಬಾಕು ಸೇವನೆ ಮತ್ತದರ ಪಾರ್ಶ್ವ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗಿರುವ “ತಂಬಾಕು ವ್ಯಸನ ಮುಕ್ತ ಕೇಂದ್ರ’ಗಳ ಮೂಲಕ ಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ.

ತಂಬಾಕು ಬೆಳೆಯಿಂದ ಲಾಭಕ್ಕಿಂತ ನಷ್ಟವೇ ಅಧಿಕ
ತಂಬಾಕು ಬಳಕೆ ಮತ್ತು ಬೆಳೆಯಿಂದ ಮಾನವನ ಆರೋಗ್ಯದ ಮೇಲೆ ಮಾತ್ರವಲ್ಲದೆ ಪರಿಸರ, ಆರ್ಥಿಕತೆ ಮತ್ತು ರಾಷ್ಟ್ರದ ಒಟ್ಟಾರೆ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತಿದೆ. ತಂಬಾಕು ಬೆಳೆಯಿಂದ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ಲಾಭವಾಗುವುದಕ್ಕಿಂತ ಹೆಚ್ಚು ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ಪೀಡಿತರಾದವರ ಚಿಕಿತ್ಸೆಗೆಂದು ಸರಕಾರ ಅಧಿಕ ಹಣವನ್ನು ವೆಚ್ಚಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next