Advertisement

ಶರತ್‌ ಹತ್ಯೆ ಹಿಂದಿನ ಷಡ್ಯಂತ್ರ ಬಯಲಾಗಲಿ: ನಳಿನ್‌ ಆಗ್ರಹ

08:50 AM Aug 17, 2017 | Team Udayavani |

ಬಂಟ್ವಾಳ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಹತ್ಯೆಯ ಹಿಂದಿನ ಷಡ್ಯಂತ್ರ ಬಯಲಾಗಬೇಕು. ಆರೋಪಿಗಳ ಪತ್ತೆಯಲ್ಲಿ ವಿಳಂಬವಾದರೂ ಜಿಲ್ಲೆಯ ಪೊಲೀಸರ ಶ್ರಮಕ್ಕೆ ಅಭಿನಂದನೆಗಳು. ಇತರ ಆರೋಪಿಗಳು, ಅವರಿಗೆ ಸಹಾಯ ಮಾಡಿದವರ ಬಂಧನವಾಗಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಬಿ.ಸಿ.ರೋಡ್‌ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಜ ಆರೋಪಿಗಳ ಪತ್ತೆಯಾಗಬೇಕು. ನಿರಪರಾಧಿ ಗಳ ಬಂಧನ ಆಗಬಾರದು. ಹತ್ಯೆಯ ಹಿಂದೆ ಮತೀಯ ಶಕ್ತಿಗಳು ವ್ಯಕ್ತಿಗಳು ಇದ್ದಾರಾ ಎಂಬ ವಿಷಯ  ಹೊರಗೆ ಬರಬೇಕು ಎಂದರು.

ದೇಗುಲದ ಹಣ ಶಾಲೆಗೆ
ದೇವಸ್ಥಾನಗಳಿಂದ ಸಾಮಾಜಿಕ ಚಿಂತನೆಯ ಕೆಲಸಗಳು ಆಗಬೇಕು. ದೇವಸ್ಥಾನದ ಮೂಲಕ ಸಮಾಜಕ್ಕೆ ಉಂಬಳಿ ನೀಡುವ ಪದ್ಧತಿ ಇತ್ತು. ಆರೋಗ್ಯ ಶಿಕ್ಷಣ, ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ ಕ್ರಮ ಹಿಂದಿನಿಂದಲೇ ಇತ್ತು. ಡಾ| ವಿ.ಎಸ್‌. ಆಚಾರ್ಯ ಅವರು ಮುಜರಾಯಿ ಸಚಿವರಾಗಿದ್ದ ಸಂದರ್ಭದಲ್ಲಿ ಧಾರ್ಮಿಕ ಪರಿಷತ್‌ ಮೂಲಕ ದೇಗುಲಗಳ ಆದಾಯ ಸಮಾಜದ ಕೆಲಸಕ್ಕೆ ಉಪಯೋಗ ಆಗಬೇಕು ಎಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳಿಗೆ, ಭಜನ ಮಂದಿರಗಳಿಗೆ, ಹಳೆಯ ದೇವಸ್ಥಾನಗಳ ನವೀಕರಣಕ್ಕೆ ಆರ್ಥಿಕ ಸಹಾಯ ನೀಡುವ ಕಾನೂನು ಜಾರಿಗೆ ತಂದರು. ಆ ಸಂದರ್ಭದಲ್ಲಿ ಕೊಲ್ಲೂರು ದೇವಸ್ಥಾನದ ಮೂಲಕ ದ.ಕ. ಜಿಲ್ಲೆಯ ಹಲವು ಶಾಲೆಗಳಿಗೆ ಅನುದಾನ ಬರುತ್ತಿತ್ತು. ಆದರೆ ಕಾಂಗ್ರೆಸ್‌ ಸರಕಾರ ಪುಣಚ ಮತ್ತು ಕಲ್ಲಡ್ಕ ವಿದ್ಯಾಸಂಸ್ಥೆಗಳಿಗೆ ಬರುವ ಸಹಾಯವನ್ನು ರಾಜಕೀಯ ದೃಷ್ಟಿಕೋನದಿಂದ ನಿಲ್ಲಿಸುವ ಮಟ್ಟಕ್ಕೆ ಬಂದಿದೆ; ಇದು ಖಂಡನೀಯ ಎಂದು ಅವರು ಹೇಳಿದರು.

ವೈಚಾರಿಕ ಹೋರಾಟ ಮಾಡಿ
ಶ್ರೀರಾಮ ವಿದ್ಯಾಕೇಂದ್ರ ಉಚಿತ ಶಿಕ್ಷಣ ನೀಡುತ್ತಿದೆ. ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳುವ ಸರಕಾರ ನಮ್ಮ ಜಿಲ್ಲೆಯ ಮಾದರಿ ಕನ್ನಡ ಶಾಲೆ ಎಂದರೆ ಅದು ಕಲ್ಲಡ್ಕ ಶ್ರೀರಾಮ ಮತ್ತು ಪುಣಚದ ಶ್ರೀ ದೇವಿ ವಿದ್ಯಾಕೇಂದ್ರ, ಡಾ| ಪ್ರಭಾಕರ ಭಟ್ಟರು ಶಿಕ್ಷಣವನ್ನು ಸೇವಾ ಮನೋಭಾವದಿಂದ ಮಾಡುತ್ತಿದ್ದಾರೆ ಎಂದರು.

ಇದಕ್ಕೆ ಬರುವಂತಹ ಅನುದಾನವನ್ನು ರಾಜಕೀಯ ಉದ್ದೇಶದಿಂದ ನಿಲ್ಲಿಸಿರುವುದು ಜಿಲ್ಲಾ ಉಸ್ತುವಾರಿ ಸಚಿವ‌ರಿಗೆ ಶೋಭೆಯಲ್ಲ. ಶಾಲೆಯಲ್ಲಿ ಎಲ್ಲ ಧರ್ಮದ ಜಾತಿ ಮತದ ವಿದ್ಯಾರ್ಥಿಗಳಿದ್ದಾರೆ. ಉಸ್ತುವಾರಿ ಸಚಿವರು ಶಿಕ್ಷಣದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಸಚಿವರು ವೈಚಾರಿಕ ಹೋರಾಟ ಮಾಡಲಿ. ಬಿಜೆಪಿಯವರ ಜತೆ ಹೋರಾಟ ಮಾಡಲಿ. ಕೊಲ್ಲೂರು ದೇವಸ್ಥಾನದ ಅನುದಾನ ಸಿದ್ದರಾಮಯ್ಯ ಅಥವಾ ಉಸ್ತುವಾರಿ ಸಚಿವರ ಹಣವಲ್ಲ. ಅದನ್ನು ಕೊಡಲೇ ಬೇಕು ಎಂದು ಆಗ್ರಹಿಸಿದರು.

Advertisement

ಕಾಂಕ್ರೀಟ್‌ ರಸ್ತೆಗೆ 19 ಕೋಟಿ
ಬಿ.ಸಿ.ರೋಡ್‌ ಸಹಿತ ಜಿಲ್ಲೆಯ ಮೂರುಕಡೆಗೆ ಸರ್ವಿಸ್‌ ರಸ್ತೆ ಕಾಂಕ್ರೀಟಿಕರಣಕ್ಕೆ 19 ಕೋಟಿ ರೂ. ಕೇಂದ್ರ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ. ಭಟ್‌, ಬಿಜೆಪಿ ನೇತಾರ ರಾಜೇಶ್‌ ನಾೖಕ್‌ ಉಳಿಪಾಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ. ಆನಂದ, ಮಂಡಲ ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ, ಜಿಲ್ಲಾ ಸಮಿತಿ ಸದಸ್ಯ ಆರ್‌. ಚೆನ್ನಪ್ಪ ಕೋಟ್ಯಾನ್‌, ಮಂಡಲ ಕೋಶಾಧ್ಯಕ್ಷ ದಿನೇಶ್‌ ಭಂಡಾರಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ದಿನೇಶ್‌ ಅಮೂrರು, ಉಪಸ್ಥಿತರಿದ್ದರು. 

ನಿಮ್ಮ ಶಾಲೆಯಲ್ಲೂ ಉಚಿತ ಶಿಕ್ಷಣ ನೀಡಿ: ರೈಗೆ ಸವಾಲು
ನಿಮಗೆ ಸಾಮರ್ಥ್ಯವಿದ್ದರೆ ಪ್ರಭಾಕರ ಭಟ್ಟರಂತೆ ಉಚಿತ ಶಿಕ್ಷಣವನ್ನು ನಿಮ್ಮ ಆಧೀನದಲ್ಲಿರುವ ಬಿ.ಸಿ.ರೋಡಿನ ಬೆಸ್ಟ್‌ ಆಂಗ್ಲ ಮಾಧ್ಯಮ ಶಾಲೆಯಲ್ಲೂ ನೀಡಿ. ಡೊನೇಷನ್‌ ಪಡೆಯದೆ ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಿ. ಆಗ ಶಿಕ್ಷಣ ಸಂಸ್ಥೆ ನಡೆಸುವ ಕಷ್ಟ ನಿಮಗೂ ತಿಳಿಯುತ್ತದೆ ಎಂದು ನಳಿನ್‌ ಅವರು ಸಚಿವ ರಮಾನಾಥ ರೈ ಅವರಿಗೆ ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next