ಧಾರವಾಡ: ಜನಾಂದೋಲನ ಮಾದರಿಯಲ್ಲಿ ಸಾಹಿತ್ಯ ಪರಿಷತ್ ಕೆಲಸ ಮಾಡುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಮುನ್ನಡೆಯಲಿ ಎಂದು ರಾಜಕೀಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಹೇಳಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಾಹಿತ್ಯ ಭವನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಪರಿಷತ್ ಕೇವಲ ನಾಲ್ಕು ಗೋಡೆಗಳ ನಡುವಿನ ಸಂಘಟನೆಯಾಗಬಾರದು. ಬದಲಾಗಿ ಜನಾಂದೋಲನ ಮಾದರಿಯಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಜನರ ಸಮಸ್ಯೆಗಳನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಬಿಂಬಿಸುವಂಥ ಸಂಸ್ಥೆಯಾಗಿ ಕಸಾಪ ಬೆಳೆಯಬೇಕು.
ಆದರೆ ಇಂತಹ ಸಂಸ್ಥೆಗಳಿಗೂ ಚುನಾವಣೆ ನಡೆಯುತ್ತಿರುವುದು ನನಗಂತೂ ವೈಯಕ್ತಿಕ ಇಷ್ಟವಾಗುತ್ತಿಲ್ಲ ಎಂದರು. ಏಕೀಕರಣದವಾದರೂ ನಮ್ಮ ಮನಸ್ಸುಗಳು ಇಂದಿಗೂ ಒಂದಾಗಿಲ್ಲ. ಹೃದಯದಲ್ಲಿ ನಾವೆಲ್ಲರೂ ಒಂದಾಗದಿದ್ದರೆ ಮುಂದಿನ ಭವಿಷ್ಯ ಕಡಿಮೆ ಆಗಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಪಾಲು ಬೇಕಾದಲ್ಲಿ ನಾವೆಲ್ಲರೂ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಬೇಕು.
ಅದರಲ್ಲೂ ಈಗಿನ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಶಕ್ತಿ ತುಂಬದೇ ಹೋದರೆ ನಾವು ಒಂದು ರಾಜ್ಯವಾಗಿ ಉಳಿಯುವುದು ಕಷ್ಟವಾಗಲಿದೆ ಎಂಬುದನ್ನೂ ಮನಗಾಣಬೇಕು. ಹೀಗಾಗಿ ಕನ್ನಡವನ್ನು ಪುನರ್ ಪ್ರತಿಷ್ಠಾಪಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಲೋಕಸಭೆಯಲ್ಲಿ ರಾಜ್ಯದಿಂದ 22 ಸಂಸದರು ಪ್ರತಿನಿಧಿಸುತ್ತಿದ್ದರೂ ಸಹ ಅವರೆಲ್ಲ ಕನ್ನಡದ ನಾಡು-ನುಡಿ, ಜಲಕ್ಕಾಗಿ ಒಂದಾಗುತ್ತಿಲ್ಲ. ಅದೇ ಪಕ್ಕದ ತಮಿಳುನಾಡಿನ ಸಂಸದರು ತಮ್ಮ ನೆಲ,ಜಲ ಹಾಗೂ ಭಾಷೆಯ ಪ್ರಸ್ತಾಪವಾದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಈ ಸಂಸ್ಕೃತಿ, ಒಗ್ಗಟ್ಟಿನ ಬೆಲೆ ನಮ್ಮ ಸಂಸದರಿಗೆ ಅರ್ಥವಾಗುತ್ತಿಲ್ಲ ಎಂದು ವಿಷಾದಿಸಿದರು.
ದೂರದರ್ಶನದ ದಕ್ಷಿಣ ವಲಯದ ಹೆಚ್ಚುವರಿ ಮಹಾ ನಿರ್ದೇಶಕ ಡಾ| ಮಹೇಶ ಜೋಶಿ ಮಾತನಾಡಿ, ಚಳವಳಿಗಳ ತವರೂರಾದ ಧಾರವಾಡ ನೆಲದ ಹಿರಿಯರು ದೇಶ ಹಾಗೂ ಭಾಷೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ ಸಂಗ್ರಾಮ, ಏಕೀಕರಣ ಹಾಗೂ ಭಾಷಾ ಚಳವಳಿಯಲ್ಲಿ ಧಾರವಾಡಿಗರ ಕೊಡುಗೆ ದೊಡ್ಡದು. ಇಂಥ ನಾಡಿನಲ್ಲಿ ನಾನು ಹುಟ್ಟದೇ ಇದ್ದಿದ್ದರೆ ಇಂಥ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಧಾರವಾಡ ವಕೀಲರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಧಿಕಾರಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮೋಹನ ನಾಗಮ್ಮನವರ, ವಕೀಲರ ಸಂಘದ ಅಧ್ಯಕ್ಷ ಆರ್.ವಿ. ಬೆಳ್ಳಕ್ಕಿ, ಉಪಾಧ್ಯಕ್ಷ ಪ್ರಕಾಶ ಬೆಳಕ್ಕಿ, ರೂಪಾ ಕೆಂಗಾನೂರ, ಪ್ರೊ| ಕೆ.ಎಸ್. ಕೌಜಲಗಿ, ಸಂಗಮೇಶ ಬನ್ನೂರ ಸೇರಿದಂತೆ ಹಲವರು ಇದ್ದರು.