ಹುಬ್ಬಳ್ಳಿ: ವಿದೇಶಗಳಲ್ಲಿ ಲಿಂಗಾಯತರು ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಇಲ್ಲಿ ಕೂಡ ಲಿಂಗಾಯತರು ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವ ಸಂಪ್ರದಾಯ ಆರಂಭಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವುದರಿಂದ ಬಸವತತ್ವದ ಬಗ್ಗೆ ಅರಿಯಲು, ಸಮಾಜ ಒಗ್ಗಟ್ಟಾಗಲು, ಸಮಾಜ ಬಾಂಧವರ ನೋವು-ನಲಿವುಗಳನ್ನು ತಿಳಿಯಲು ಪೂರಕವಾಗುತ್ತದೆ ಎಂದರು.
ನಾನು ಅಮೆರಿಕ-ಆಸ್ಟ್ರೇಲಿಯಾದಲ್ಲಿ ನೆಲ ಮಹಡಿಯಲ್ಲಿ ಒಂದು ಬಸವೇಶ್ವರ ಫೋಟೋ ಇಟ್ಟುಕೊಂಡು ವಾರಕ್ಕೊಮ್ಮೆ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನೋಡಿದ್ದೇನೆ. ಇದರಿಂದಾಗುವ ಅನುಕೂಲವನ್ನು ಮನಗಂಡಿದ್ದೇನೆ ಎಂದರು. ಇಲ್ಲಿನ ಮೂರುಸಾವಿರಮಠಕ್ಕೆ ದೊಡ್ಡ ಪರಂಪರೆಯಿದೆ. ಜಾತಿ, ಧರ್ಮ ಭೇದವಿಲ್ಲದೇ ಎಲ್ಲರೂ ಮಠಕ್ಕೆ ಬರುತ್ತಾರೆ. ಈ ಮಠದ ಹಿರಿಮೆಯನ್ನು ಹೆಚ್ಚಿಸಿದವರು ಮೂಜಗಂ. ಸಮಾಜದಲ್ಲಿ ಸೌಹಾರ್ದತೆ ಮೂಡಿಸುವಲ್ಲಿ ಅವರು ಯತ್ನಿಸಿದರು. ವಚನ ಸಾಹಿತ್ಯಕ್ಕೆ ತ್ರಿಪದಿಗಳ ಕೊಡುಗೆ ನೀಡಿದ ಮೂಜಗಂ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಕನಿಷ್ಟ 10,000 ಜನರಾದರೂ ಸೇರುವಂತಾಗಬೇಕು. ಶ್ರೀ ಮಠದಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಯುವಕರಿಗೆ ಬಸವಣ್ಣನ ತತ್ವ ತಿಳಿಸುವುದು ಅವಶ್ಯವಿದ್ದು, ಡಾ| ಬಿ.ವಿ.ಶಿರೂರ ಬಸವ ಕೇಂದ್ರ ಮೂಲಕ ಮನೆ ಮನೆಗೆ ಬಸವತತ್ವ ಮುಟ್ಟಿಸುವ ಅಮೋಘ ಕೆಲಸ ಮಾಡುತ್ತಿದ್ದಾರೆಂದರು.
Advertisement
ಮೂರುಸಾವಿರಮಠದ ಲಿಂ.ಡಾ| ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳ 16ನೇ ಪುಣ್ಯಸ್ಮರಣೋತ್ಸವ ಹಾಗೂ ಡಾ|ಮೂಜಗಂ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ,ಮೂಜಗಂ ಅವರು ಬದ್ಧತೆ ಹೊಂದಿದ್ದರು. ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿಕೊಳ್ಳುತ್ತಿದ್ದರು. ಅದು ಅವರ ಸದ್ಗುಣವಾಗಿತ್ತು. ಮಹಿಳಾ ವಿಶ್ವವಿದ್ಯಾಲಯ ಮಾಡಲು ಅವರಿಗೆ ಸಾಧ್ಯವಾಗದಿದ್ದರೂ ಮಹಿಳಾ ಮಹಾವಿದ್ಯಾಲಯ ಮಾಡಿ ಅದನ್ನು ಉತ್ತಮ ಕಾಲೇಜನ್ನಾಗಿ ರೂಪಿಸಿದರು ಎಂದರು. ಮೂರುಸಾವಿರಮಠ ಇನ್ನಷ್ಟು ಪ್ರಗತಿ ಸಾಧಿಸಬೇಕು. ಮಠದಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯಬೇಕು. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜ ಬಾಂಧವರೆಲ್ಲರೂ ಮಠವನ್ನು ಬೆಳೆಸಬೇಕು. ಮಠ ಮತ್ತೂಮ್ಮೆ ತನ್ನ ಮೆರಗು ಪಡೆಯುವಂತಾಗಬೇಕು ಎಂದರು.
ಮೂಜಗಂ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಡಾ|ಬಿ.ವಿ.ಶಿರೂರ ಮಾತನಾಡಿ, ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಸಾಹಿತ್ಯ ಸೇವೆ ಮಾಡಲು ಪ್ರೇರಣೆ ನೀಡಿದೆ. ವಚನ ಸಾಹಿತ್ಯ ಕ್ಷೇತ್ರದಲ್ಲಿ ನಾನು ಮಾಡಿದ ಕಾರ್ಯ ನನಗೆ ತೃಪ್ತಿ ತಂದಿದೆ. ಶರಣರ ವಚನಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಇನ್ನೂ ಭರದಿಂದ ನಡೆಯಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿದರು. ಎರಡೆತ್ತಿನಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಇದ್ದರು.
ಹಿತಶತ್ರುಗಳ ಕಿರಿಕಿರಿಯಿಂದ ತೊಂದರೆ ಅನುಭವಿಸಿದ್ದ ಶ್ರೀ:
ಹಿತಶತ್ರುಗಳ ಕಿರಿಕಿರಿಯಿಂದಾಗಿಯೇ ಮೂರುಸಾವಿರಮಠದ ಹಿಂದಿನ ಜಗದ್ಗುರುಗಳಾದ ಗಂಗಾಧರ ರಾಜಯೋಗಿಂದ್ರ ಸ್ವಾಮೀಜಿ ಬೇಗನೇ ಇಹಲೋಕ ತ್ಯಜಿಸಿದರು. ಕಿರಿಕಿರಿ ಇಲ್ಲದಿದ್ದರೆ ಇನ್ನೂ 3-4 ವರ್ಷ ಬದುಕುತ್ತಿದ್ದರು. ಕೊನೆಗಾಲದಲ್ಲಿ ಅವರು ಹಿತಶತ್ರುಗಳ ಕಾಟದಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಮಠ ಕಟ್ಟಿದ್ದು ಅವರ ಹೆಗ್ಗಳಿಕೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.