Advertisement

ವಿಶಿಷ್ಟ ಗುರುತಿನ ಚೀಟಿ ನೋಂದಣಿ ಕಾರ್ಯ ತ್ವರಿತಗೊಳ್ಳಲಿ: ವಿನೋತ್‌ ಪ್ರಿಯಾ

02:40 PM Aug 06, 2019 | Team Udayavani |

ಚಿತ್ರದುರ್ಗ: ಜಿಲ್ಲೆಯಲ್ಲಿರುವ ವಿಕಲಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿ ನೋಂದಣಿ ಕಾರ್ಯವನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚಿಸಿದರು.

Advertisement

ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ನೀಡುವ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ವೈದ್ಯಕೀಯ ಪ್ರಮಾಣಪತ್ರ ನೀಡಲು ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಬೇಕು. ವೈದ್ಯಕೀಯ ಪರಿಶೀಲನೆಗೆ ಸೂಕ್ತ ವ್ಯವಸ್ಥೆಯಾಗಬೇಕು. ಈ ವಿಷಯದಲ್ಲಿ ವೈದ್ಯರು ಇಲ್ಲಸಲ್ಲದ ಸಬೂಬು ಹೇಳುವಂತಿಲ್ಲ ಎಂದು ತಾಕೀತು ಮಾಡಿದರು.

ಜಿಲ್ಲೆಯಲ್ಲಿ 2011ರ ಜನಗಣತಿಯಂತೆ 35,971 ವಿಕಲಚೇತನರಿದ್ದಾರೆ. ಈ ಮೊದಲು ಪುಸ್ತಕ ರೂಪದಲ್ಲಿ ಗುರುತಿನ ಚೀಟಿ ನೀಡಲಾಗುತ್ತಿತ್ತು. ಆದರೆ ಸರ್ಕಾರ ಗಣಕೀಕೃತಗೊಂಡ ವಿಶಿಷ್ಟ ಗುರುತಿನ ಚೀಟಿ ನೀಡಲು ನಿರ್ಧರಿಸಿದ್ದು ಪ್ರಕ್ರಿಯೆ ನಡೆಯುತ್ತಿದೆ ಎಂದರು.

ತಾಲೂಕು ಅಂಗವಿಕಲ ಪುನರ್ವಸತಿ ಕಾರ್ಯಕರ್ತರು ಮಾತನಾಡಿ, ಜಿಲ್ಲೆಯಲ್ಲಿ ಶ್ರವಣ ದೋಷವುಳ್ಳವರಿಗೆ ಪ್ರಮಾಣ ದೃಢೀಕರಣಕ್ಕಾಗಿ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಉಪಕರಣವಿಲ್ಲ, ಪಕ್ಕದ ದಾವಣಗೆರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ವಾಪಸ್‌ ಕಳುಹಿಸುತ್ತಿದ್ದಾರೆ. ಬಹು ಅಂಗವೈಕಲ್ಯ ಹೊಂದಿರುವವರನ್ನು ಸಂಬಂಧಪಟ್ಟ ತಜ್ಞ ವೈದ್ಯರೇ ಪರಿಶೀಲಿಸಿ ಪ್ರಮಾಣಪತ್ರ ನೀಡಬೇಕಿದೆ. ಅದಕ್ಕಾಗಿ ವೈದ್ಯರನ್ನು ಹುಡುಕಿಕೊಂಡು ಅಲೆಯುವ ಪರಿಸ್ಥಿತಿ ಇದೆ ಎಂದು ಸಮಸ್ಯೆಯನ್ನು ವಿವರಿಸಿದರು.

Advertisement

ತಾಲೂಕು ಕಚೇರಿಗಳಲ್ಲಿ ಆನ್‌ಲೈನ್‌ ನೊಂದಣಿಗೆ ಅಲ್ಲಿನ ಸಿಬ್ಬಂದಿ ಸಹಕಾರ ನೀಡುತ್ತಿಲ್ಲ. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ನಮಗೆ ತರಬೇತಿಯ ಅಗತ್ಯವಿದೆ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಬಹು ಅಂಗವೈಕಲ್ಯ ಉಳ್ಳವರಿಗೆ ಒಂದೇ ಕಡೆ ತಜ್ಞ ವೈದ್ಯರಿಂದ ಪರೀಕ್ಷೆ ನಡೆಯಬೇಕು. ಕಾರ್ಯಕರ್ತರಿಗೆ ತರಬೇತಿ ನೀಡಬೇಕು, ಅಂಗವೈಕಲ್ಯ ಪ್ರಮಾಣ ದೃಢೀಕರಣ ವಿಷಯದಲ್ಲಿ ವೈದ್ಯರು ಹಣ ಪಡೆದು ಪ್ರಮಾಣ ನಿರ್ಧರಿಸುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇಂತಹ ಯಾವುದೇ ಅಕ್ರಮದಲ್ಲಿ ಭಾಗವಹಿಸದೆ ಪ್ರಾಮಾಣಿಕವಾಗಿ ಅಂಗವೈಕಲ್ಯದ ಪ್ರಮಾಣವನ್ನು ನಮೂದಿಸಬೇಕು ಎಂದು ಎಚ್ಚರಿಸಿದರು.

ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ವೈಶಾಲಿ ಮಾತನಾಡಿ, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 35,971 ವಿಕಲಚೇತನರಿದ್ದಾರೆ. ಈ ಪೈಕಿ ದೃಷ್ಟಿದೋಷ-6196, ಶ್ರವಣ-6096, ಮಾತಿನ ದೋಷ-2880, ಮಾನಸಿಕ ಅಸ್ವಸ್ಥ-415, ಬುದ್ಧಿಮಾಂದ್ಯ-2461, ದೈಹಿಕ ವೈಕಲ್ಯ-8373, ಬಹುವಿಧ ಅಂಗವೈಕಲ್ಯ-2961, ಇತರೆ-6589 ಜನ ವೈಕಲ್ಯತೆ ಹೊಂದಿದ್ದಾರೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಹೊಂದಿರುವ ಅಂಗವೈಕಲ್ಯ ಪ್ರಮಾಣಪತ್ರ ತಾತ್ಕಾಲಿಕವಾಗಿದೆ. ಮರು ಮೌಲ್ಯಮಾಪನ ನಡೆಸಿ ಗಣಕೀಕೃತ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತಿದೆ. ಚಿತ್ರದುರ್ಗ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಗತಿಯಲ್ಲಿದೆ. ಆದರೆ ಹೊಳಲ್ಕೆರೆ, ಹೊಸದುರ್ಗ ಹಾಗೂ ಹಿರಿಯೂರು ತಾಲೂಕಿನಲ್ಲಿ ನಿಧಾನಗತಿಯಲ್ಲಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್‌, ಡಿವೈಪಿಸಿ ಸಿ.ಎಂ. ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು. ವಿಕಲಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿಗಳು ಸಾಂಕೇತಿಕವಾಗಿ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next