ಅಪ್ಪ -ಅಮ್ಮ ಎಂದರೆ ಪ್ರೀತಿ, ವಾತ್ಸಲ್ಯದಿಂದ ಮಕ್ಕಳೊಂದಿಗೆ ಹೆಗಲಾಗಿ ನಿಲ್ಲುವವರಾಗಿರುತ್ತಾರೆ. ಅಮ್ಮಎಂದರೆ ನೆನಪಿಗೆ ಬರುವುದೇ ಮಮತೆ. ಆಕೆ ಪ್ರೀತಿ ಹಾಗೂ ಹಸಿವನ್ನು ತೀರಿಸುವ ಮಾತೆಯಾಗಿ ಕಂಡರೆ, ತಂದೆ ಮೌನವಾಗಿಯೇ ತನ್ನ ಮಗುವಿಗೆ ಪ್ರೀತಿ ತೋರಿಸಿ ಕೊಂಡು, ಮಗುವಿಗೆ ಬೇಕಾದನ್ನು ತೆಗೆದುಕೊಡುತ್ತಾರೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ತಂದೆ-ತಾಯಿ ತೋರಿಸುವ ಪ್ರೀತಿ ಯಾಂತ್ರಿಕವಾಗಿದೆ.
ತನ್ನ ವ್ಯಾವಹಾರಿಕ ಜೀವನದಿಂದಾಗಿ ಹಣವನ್ನು ಗಳಿಸುವುದೇ ಹೆತ್ತವರ ಗುರಿಯಾಗಿರುತ್ತದೆ. ಮಕ್ಕಳಿಗೆ ಸಮಯದೊಂದಿಗೆ ಪ್ರೀತಿಯನ್ನು ನೀಡುವ ಬದಲಿಗೆ ಮೊಬೈಲ್ ಅನ್ನು ಕೈಯಲ್ಲಿ ಇಟ್ಟುಬಿಡುತ್ತಾರೆ.
ಹಿಂದಿನ ಕಾಲದಲ್ಲಿ ಚಂದ್ರನನ್ನು ತೋರಿಸಿಕೊಂಡು ಊಟ ಮಾಡಿಸುತ್ತಿದ್ದರು, ಆದರೆ ಆ ಸನ್ನಿವೇಶ ಈ ಆಧುನಿಕ ಕಾಲದಲ್ಲಿ ಬದಲಾಗಿದೆ. ಚಂದ್ರನನ್ನು ತೋರಿಸುವ ಬದಲಿಗೆ, ಮೊಬೈಲ್ ತೋರಿಸಿಕೊಂಡು ಊಟ ಮಾಡಿಸುವ ಪರಿಸ್ಥಿತಿ ಬಂದಿದೆ.
ಮಕ್ಕಳು ಪ್ರೀತಿ, ವಾತ್ಸಲ್ಯದೊಂದಿಗೆ ಬೆಳೆಯುವ ಸಂದರ್ಭದಲ್ಲಿ ಪಾಲಕರು ಭವಿಷ್ಯದ ಲಾಭದ ಉದ್ದೇಶದಿಂದಾಗಿ ಮಕ್ಕಳಿಗೆ ಸಮಯ ನೀಡುವುದನ್ನೇ ಮರೆತುಬಿಟ್ಟಿದ್ದಾರೆ. ಮೊಬೈಲ್ ಎನ್ನುವುದು ಒಂದು ಬಾರಿಯ ಮನರಂಜನೆಯ ದೃಷ್ಟಿಯಿಂದ ಆಕರ್ಷಕವೆನಿಸಿದರೂ ಮಕ್ಕಳ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತದೆ. ತನ್ನ ತಂದೆ-ತಾಯಿ ತಮ್ಮ-ತಮ್ಮ ವ್ಯಾವಹಾರಿಕ ದೃಷ್ಟಿಯಿಂದ ದೂರವಿದ್ದಾರೆ ಎಂದಾಗ ಮಕ್ಕಳಿಗೆ ಮೊಬೈಲ್ ಎಂಬ ಮಾನವ ನಿರ್ಮಿತ ವಸ್ತು ಸ್ನೇಹಿತನಾಗಿ ಬಿಡುತ್ತದೆ. ಒಂದು ದೃಷ್ಟಿಯಿಂದ ನೋಡಿದರೆ ಹೆತ್ತವರೇ ಮಕ್ಕಳಿಗೆ ತನ್ನವರಿಗೆ ಸಮಯ ನೀಡುವ ಮೌಲ್ಯವನ್ನು ತಿಳಿಯದಂತೆ ಮಾಡಿಸುತ್ತಾರೆ.
ಈ ರೀತಿಯ ಹೆತ್ತವರ ವರ್ತನೆಯಿಂದಾಗಿ ವೃದ್ಧಾಶ್ರಮಗಳ ಸಂಖ್ಯೆ ವಿಸ್ತರಣೆಗೆ ದಾರಿ ಮಾಡಿ ಕೊಡುತ್ತದೆ. ಸಾಧ್ಯವಾದಷ್ಟು ತನ್ನ ಮಕ್ಕಳಿಗೆ ಹಾಗೂ ತನ್ನವರಿಗೆ ಸಮಯವನ್ನು ನೀಡಿ. ನಿಮ್ಮ ಮಕ್ಕಳ ಬಾಲ್ಯದ ಅವಿಸ್ಮರಣೀಯ ಕ್ಷಣ ಕಳೆದು ಹೋದರೆ ಮತ್ತೂಮ್ಮೆಮರುಕಳಿಸಲು ಸಾಧ್ಯವಿಲ್ಲ.
ಹಾಗಾಗಿ ಮನೆ ಮಕ್ಕಳೊಂದಿಗೆ ಸಾಧ್ಯವಾದಷ್ಟು ಪ್ರೀತಿ ವಾತ್ಸಲ್ಯದೊಂದಿಗೆ ಪಾಲಕರು ಸಮಯವನ್ನ ಕಳೆಯಿರಿ. ನೀವು ನೀಡುವ ಉತ್ತಮ ಸಂಸ್ಕಾರ, ಸಮಯ ಮಕ್ಕಳ ಭವಿಷ್ಯಕ್ಕೆ ದಾರಿದೀಪವಾಗುತ್ತದೆ.
-ತೃಪ್ತಿ ಗುಡಿಗಾರ್
ಎಂ.ಪಿ.ಎಂ., ಕಾಲೇಜು , ಕಾರ್ಕಳ