Advertisement

ಕಲ್ಲುಗುಡ್ಡೆ-ಕಡಬ ಮಧ್ಯೆ ಸರಕಾರಿ ಬಸ್‌ ಓಡಾಡಲಿ

10:50 PM Jun 14, 2019 | mahesh |

ಕಲ್ಲುಗುಡ್ಡೆ: ನೂತನ ತಾಲೂಕು ಕೇಂದ್ರ ಕಡಬದಿಂದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಗೆ ದಿನದ ಮೂರು ಹೊತ್ತು ಸರಕಾರಿ ಬಸ್ಸಿನ ವ್ಯವಸ್ಥೆ ಮಾಡುವಂತೆ ಹಲವು ವರ್ಷಗಳಿಂದ ಆಗ್ರಹಗಳು ಕೇಳಿಬರುತ್ತಿದ್ದರೂ ಬೇಡಿಕೆ ಕನಸಾಗಿಯೇ ಉಳಿದಿದ್ದು, ಈ ಬಾರಿಯಾದರೂ ಇಲ್ಲಿಗೆ ಸಾರಿಗೆ ವ್ಯವಸ್ಥೆ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಾಲೂಕು ಕೇಂದ್ರ ಕಡಬದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಕಲ್ಲುಗುಡ್ಡೆಗೆ ಇಂದಿಗೂ ಸಾರಿಗೆ ವ್ಯವಸ್ಥೆಯಲ್ಲಿ ಹಿಂದುಳಿದಿದೆ. ಈ ಭಾಗದ ಜನತೆ ಇಂದಿಗೂ ಕಡಬ ಹಾಗೂ ಇತರ ಪ್ರದೇಶಗಳಿಗೆ ಪ್ರಯಾಣಿಸಲು ಖಾಸಗಿ ವಾಹನಗಳನ್ನೇ ಬಳಸುತ್ತಿದ್ದಾರೆ.

Advertisement

ವಿದ್ಯಾರ್ಥಿಗಳಿಗೂ ಸಂಕಟ
ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿಂದ ಕಡಬ ಹಾಗೂ ಇತರೆಡೆಗೆ ನಿತ್ಯ ಪ್ರಯಾ ಣಿಸುವವರು ಖಾಸಗಿ ವಾಹನವನ್ನೇ ಅವಲಂಭಿಸಬೇಕಾಗಿದ್ದು, ಕೆಲವೊಮ್ಮೆ ನಿಗದಿತ ಸಮಯಕ್ಕೆ ತಲುಪಲಾಗದೇ ತೊಂದರೆ ಅನು ಭವಿಸುತ್ತಿದ್ದಾರೆ. ಶಾಲಾ ಸಮಯಕ್ಕೆ ಹೊಂದಿಕೆಯಾಗುವಂತೆ ಬಸ್‌ ವ್ಯವಸ್ಥೆ ಮಾಡಿದರೆ ಉತ್ತಮ ಎನ್ನುತ್ತಾರೆ ವಿದ್ಯಾರ್ಥಿಗಳು.

ಮೂರು ಹೊತ್ತು ಬಸ್ಸು ಬರಲಿ
ಕಲ್ಲುಗುಡ್ಡೆಯಿಂದ ಬೆಳಗ್ಗೆ 7.15ಕ್ಕೆ ಮಂಗಳೂರಿಗೆ ಕೆ.ಎಸ್‌.ಆರ್‌.ಟಿ.ಸಿ. ಬಸ್ಸೊಂದು ಸಂಚರಿಸುತ್ತಿದ್ದು, ಆ ಬಳಿಕ ಕಡಬ ಭಾಗಕ್ಕೆ ಪ್ರಯಾಣಿಸಲು ಖಾಸಗಿ ವಾಹನವನ್ನೇ ಬಳಸಬೇಕಾಗಿದೆ. ಹೀಗಾಗಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಕಲ್ಲುಗುಡ್ಡೆ – ಕಡಬ ಮಧ್ಯೆ ಸರಕಾರಿ ಬಸ್ಸು ಓಡಾಡುವ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮಸಭೆಗಳಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಸಾರಿಗೆ ವ್ಯವಸ್ಥೆ ಮಾತ್ರ ಇನ್ನೂ ಲಭ್ಯವಾಗಿಲ್ಲ. ಇನ್ನಾದರೂ ಕಲ್ಲುಗುಡ್ಡೆ-ಕಡಬ ಮಧ್ಯೆ ಸಾರಿಗೆ ವ್ಯವಸ್ಥೆ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕೈಗೊಳ್ಳಲಿ ಎಂಬುವುದೇ ಗ್ರಾಮಸ್ಥರ ಆಗ್ರಹ.

 ಪರಿಶೀಲಿಸಿ ಕ್ರಮ
ಕಲ್ಲುಗುಡ್ಡೆ ಭಾಗಕ್ಕೆ ಕಡಬದಿಂದ ಯಾವ ಸಮಯದಲ್ಲಿ ಸರಕಾರಿ ಬಸ್ಸಿನ ಅಗತ್ಯವಿದೆ ಎನ್ನುವುದರ ಕುರಿತು ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ವರದಿ ಕಳುಹಿಸಿಕೊಟ್ಟಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಮುರಳೀಧರ್‌, ಕ.ರಾ.ರ.ಸಾ.ನಿ. ಪುತ್ತೂರು.

ಮನವಿ ಸಲ್ಲಿಕೆ
ಸಾರ್ವಜನಿಕರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡಬ-ಕಲ್ಲುಗುಡ್ಡೆ ಮಧ್ಯೆ ಸರಕಾರಿ ಬಸ್‌ ವ್ಯವಸ್ಥೆಗೆ ಗ್ರಾ.ಪಂ.ನಿಂದ ನಾವು ಪ್ರಯತ್ನಿಸುತ್ತಿದ್ದೇವೆ. ಕೆ.ಎಸ್‌.ಆರ್‌.ಟಿ.ಸಿ. ಪುತ್ತೂರು ವಿಭಾಗಕ್ಕೆ ಕಡಬ-ಕಲ್ಲುಗುಡ್ಡೆ-ಎಂಜಿರ ಮಧ್ಯೆ ಬಸ್‌ನ ವ್ಯವಸ್ಥೆ ಮಾಡುವಂತೆ ಹಾಗೂ ಸಮಯ, ಇತರ ಮಾಹಿತಿಯನ್ನು ಶೀಘ್ರ ಕಳುಹಿಸಿ, ಮನವಿ ಮಾಡಲಾಗುವುದು.
– ಸದಾನಂದ ಗೌಡ, ಅಧ್ಯಕ್ಷರು ಗ್ರಾ.ಪಂ. ನೂಜಿಬಾಳ್ತಿಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next