ಶಿವಮೊಗ್ಗ: ತಾಂತ್ರಿಕ ಯುಗದಲ್ಲಿ ಜಾನಪದವನ್ನು ಪರಿಭಾವಿಸುವ ಕ್ರಮದಲ್ಲಿ ಬದಲಾವಣೆ ಮಾಡಿ ಅದನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ಸಾಹಿತಿ ಸಣ್ಣರಾಮ ಅಭಿಪ್ರಾಯಪಟ್ಟರು. ಸಹ್ಯಾದ್ರಿ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಭಾನುವಾರ ಆಯೋಜಿಸಿದ್ದ ಜಾನಪದ ಅರಿವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಪುನರುಜ್ಜೀವನ ವಿಷಯ ಕುರಿತು ಮಾತನಾಡಿದ ಅವರು, ಜಾನಪದವನ್ನು ಇಂದು ಸಂವಾದದಲ್ಲಿ ಮಾತ್ರ ಸೃಷ್ಟಿ ಮಾಡುತ್ತಿದ್ದೇವೆ. ಹಾಗಾಗಿ ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಕಾಲಕ್ಕೆ ತಕ್ಕಂತೆ ಜನಪದ ಕಲೆಗಳು ಬದಲಾವಣೆಯಾಗುತ್ತಿವೆ. ಹಿಂದೆ ಡೊಳ್ಳು ಕುಣಿತ ಮಾತ್ರವಿತ್ತು. ಇಂದು ಡೊಳ್ಳಿನ ಕುಣಿತ ಜತೆಗೆ ವೀರಗಾಸೆ ಗತ್ತು, ಕೋಲಾಟ ಸೇರ್ಪಡೆಯಾಗಿವೆ. ಜತೆಗೆ ಅನೇಕ ಉತ್ತರ ಕರ್ನಾಟಕದ ಕಲೆಗಳು ಸೇರ್ಪಡೆಯಾಗಿವೆ. ಜಾನಪದದ ಆಶಯಗಳಿಗೆ ಧಕ್ಕೆ ಬಾರದಂತೆ ಜನಪದ ಕಲೆಗಳನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಬಹುದು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಆದರೆ, ಜನಪದ ಕಲೆಯನ್ನು ಬೆಳೆಸುವಾಗ ಅದರದ್ದೇ ಆದ ಕ್ರಮವಿರುತ್ತದೆ. ಅದನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು. ಜಾನಪದ ಪ್ರಕಾರಗಳು ಎಲ್ಲಾ ಸಂದರ್ಭಗಳಲ್ಲಿಯೂ ಬಳಕೆಯಾಗುವಂತಹುದು.
ಜನಪದ ಕಲೆಗಳು ಸಂದರ್ಭವನ್ನು ಮೀರಿ ಬೆಳೆಯುತ್ತಿವೆ. ಜಾಗತೀಕರಣವನ್ನು ಮೆಟ್ಟಿ ನಿಂತ ಅದ್ಭುತ ಶಕ್ತಿ ಅದು. ಯಾವುದೇ ಸಂದರ್ಭವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಅದಕ್ಕೆ ಇದೆ. ಪ್ರಸ್ತುತ ಸಂದರ್ಭದಲ್ಲಿ ಬಳಕೆಯಾಗುತ್ತಿರುವ ಜನಪದ ಕಲೆಗಳು ಎಷ್ಟರ ಮಟ್ಟಿಗೆ ಜನರನ್ನು ತಲುಪುತ್ತಿವೆ ಎಂದು ತಿಳಿಯಬೇಕಿದೆ ಎಂದರು.
ಸಾಹಿತಿ ಡಾ| ಮುತ್ತಯ್ಯ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಮಗೆ ಏನು ಬೇಕೋ ಅದು ತಕ್ಷಣ ಸಿಗುವ ವಾತಾವರಣ ಇದೆ. ಈ ಎಲ್ಲಾ ಸೌಲಭ್ಯ ದೊರಕುವಾಗ ಯಾವುದೋ ಒಂದು ಕೊರತೆ ಇದೆ ಎಂದು ಅನಿಸುತ್ತದೆ. ಇದಕ್ಕೆ ಕಾರಣ ನಾಮ್ಮ ಮನಸ್ಸು ಗೊಂದಲದಲ್ಲಿದೆ. ನಮಗೆ ನೆಮ್ಮದಿ ಸಿಗಬೇಕು ಎಂದರೆ ಪುನಃ ನಾವು ಪೂರ್ವಿಕರ ಕಾಲಕ್ಕೆ ಹೋಗಬೇಕು ಎಂದು ಅಂದುಕೊಳ್ಳುತ್ತೇವೆ. ಎಲ್ಲೂ ಸಿಗದ ನೆಮ್ಮದಿಯನ್ನು ಜಾನಪದದಲ್ಲಿ ಕಾಣಲು ಹೊರಟಿದ್ದೇವೆ. ಅಂದರೆ ಪೂರ್ವಿಕರು ಸೃಷ್ಟಿಸಿದ ಕಾಲಘಟ್ಟಕ್ಕೆ ಹೋಗಲು ಬಯಸುತ್ತಿದ್ದೇವೆ ಎಂದು ವಿಶ್ಲೇಷಿಸಿದರು.
ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ| ಮೋಹನ್ ಚಂದ್ರಗುತ್ತಿ, ಎಚ್.ಟಿ. ಕೃಷ್ಣಮೂರ್ತಿ, ಡಾ| ಕವಿತಾ ಚಂದ್ರಗುತ್ತಿ. ಟಿ.ಪಿ. ನಾಗರಾಜ್ ಮತ್ತಿತರರು ಇದ್ದರು.