Advertisement

ಮುನಿಸು ಬದಿಗಿಟ್ಟು ಸುಭದ್ರ ಸರಕಾರ ನೀಡೋಣ: ಸಚಿವರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ

12:24 AM Nov 05, 2023 | Team Udayavani |

ಬೆಂಗಳೂರು: ಸದ್ಯವೇ ಲೋಕಸಭಾ ಚುನಾವಣೆ ಇರುವ ಕಾರಣ ನಾವು ಭಿನ್ನಮತ ಪ್ರದರ್ಶಿಸುವುದು ಸರಿಯಲ್ಲ. ಹೀಗಾಗಿ ಎಲ್ಲ ಮುನಿಸುಗಳನ್ನು ಬದಿಗಿಟ್ಟು, ಸುಭದ್ರ ಸರಕಾರ ನೀಡೋಣ ಹಾಗೂ ಲೋಕಸಭಾ ಚುನಾವಣೆಯತ್ತ ದೃಷ್ಟಿ ಹರಿಸೋಣ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರಿಗೆ ಮನವಿ ಮಾಡಿದ್ದಾರೆ.

Advertisement

ಶನಿವಾರ ಸಂಪುಟದ ಅರ್ಧದಷ್ಟು ಸಚಿವರ ಜತೆಗೆ “ಬ್ರೇಕ್‌ಫಾಸ್ಟ್‌ ಮೀಟಿಂಗ್‌’ ನಡೆಸಿರುವ ಸಿಎಂ, ಅನಗತ್ಯ ಹೇಳಿಕೆ ನೀಡಿ ವಿವಾದ ಸೃಷ್ಟಿಸದಂತೆ ಎಲ್ಲರನ್ನೂ ಕೋರಿಕೊಂಡಿದ್ದಾರೆ.
ಉಪಾಹಾರ ಕೂಟದಲ್ಲಿ ಡಿಸಿಎಂ ಶಿವಕುಮಾರ್‌, ಡಾ| ಜಿ. ಪರಮೇಶ್ವರ, ಎಂ.ಬಿ. ಪಾಟೀಲ್‌, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಕೆ.ಎನ್‌. ರಾಜಣ್ಣ ಸೇರಿ 15 ಸಚಿವರು ಭಾಗವಹಿ
ಸಿದ್ದರು. ಉಳಿದ ಸಚಿವರಿಗೆ ಮುಂದಿನ ದಿನಗಳಲ್ಲಿ ಉಪಾಹಾರ ಕೂಟ ಏರ್ಪಡಿಸಲು ಸಿಎಂ ನಿರ್ಧರಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಪಕ್ಷ ಹಾಗೂ ಸರಕಾರದ ಆಂತರಿಕ ವಿಚಾರವಾಗಿ ಅನಗತ್ಯ ಹೇಳಿಕೆ ನೀಡದಂತೆ ಸಿಎಂ ತಿಳಿಸಿದ್ದಾರೆ. ನಾನು ಸಹಿತ ಯಾರೊಬ್ಬರೂ ಈ ವಿಷಯದಲ್ಲಿ ಮಾತನಾಡುವುದು ಬೇಡ ಎಂದರು.

ಮಾಧ್ಯಮದವರು ಪ್ರಶ್ನೆ ಕೇಳಿದರೂ ಏನೂ ಪ್ರತಿಕ್ರಿಯೆ ನೀಡಬೇಡಿ. ಮಾಧ್ಯಮಗಳ ರಾಜಕೀಯ ಬಲೆಗೆ ಬೀಳಬೇಡಿ ಎಂದು ಸೂಚಿಸಿದ್ದೇವೆ. ರಾಜ್ಯದ ಜನ ಐದು ವರ್ಷ ಅಧಿಕಾರ ಮಾಡಲು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಅನಗತ್ಯ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಮತ
ದಾರರ ಅಭಿಪ್ರಾಯ ಪಡೆಯಲಾಗುವುದು. ಹೀಗಾಗಿ ಸಚಿವರಿಗೆ ತಮ್ಮ ಜಿಲ್ಲಾ ಪ್ರವಾಸ ಮಾಡಲು ಸೂಚನೆ ನೀಡಿದ್ದೆವು. ಕೆಲವು ಸಚಿವರ ಪ್ರವಾಸಕ್ಕೆ ಸಮಿತಿ ಜೋಡಿಸಿರಲಿಲ್ಲ. ಈಗ ಸಮಿತಿಯಲ್ಲಿ ಸೇರಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.

ಕಾಂತರಾಜು ವರದಿ ಬಗ್ಗೆ ಸಭೆ ಯಲ್ಲಿ ಚರ್ಚೆ ಆಯಿತೇ ಎಂಬ ಪ್ರಶ್ನೆಗೆ, ನಮ್ಮ ಸಮುದಾಯದವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಸರಕಾರ ಮಾಡುತ್ತಿರುವುದು ಸಾಮಾಜಿಕ ಆರ್ಥಿಕ ಸಮೀಕ್ಷೆ. ಈ ವರದಿ ಬಗ್ಗೆ ಅವರಿಗೆ ಅನುಮಾನಗಳಿದ್ದು, ಸರಕಾರ ಅವುಗಳನ್ನು ಬಗೆಹರಿಸುತ್ತದೆ. ಈವರೆಗೂ ವರದಿ ಬಗ್ಗೆ ಸರಿಯಾದ ತೀರ್ಮಾನಗಳಾಗಿಲ್ಲ. ವರದಿ ಇನ್ನೂ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು.

Advertisement

ಬಿ ರಿಪೋರ್ಟ್‌ ಕಾಲ ಸನ್ನಿಹಿತ
ನನ್ನ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ದಾಖಲಿಸಿರಬಹುದು. ನನ್ನ ಎಲ್ಲ ದಾಖಲೆಗಳು ಸಾರ್ವಜನಿಕವಾಗಿವೆ. ನಾನು ಹಾಗೂ ನನ್ನ ಹೆಂಡತಿ ಇಬ್ಬರೂ ತೆರಿಗೆ ಪಾವತಿದಾರರು. ಇದು ಸಿಬಿಐಗೆ ನೀಡುವ ಪ್ರಕರಣವಲ್ಲ ಎಂದು ಅಡ್ವೊಕೇಟ್‌ ಜನರಲ್‌ ಹೇಳಿದ್ದರೂ ಯಡಿಯೂರಪ್ಪ ಅವರ ಸರಕಾರದ ಅವಧಿಯಲ್ಲಿ ಈ ಪ್ರಕರಣ ವನ್ನು ಸಿಬಿಐಗೆ ನೀಡಿದ್ದಾರೆ. ನೋಟಿಸ್‌ ಕೊಡುವುದಾದರೆ ಕೊಡಲಿ. ನಾನು ಅದಕ್ಕೆ ಉತ್ತರ ನೀಡುತ್ತೇನೆ. ಬಿ ರಿಪೋರ್ಟ್‌ ಬರೆಯುವ ಕಾಲ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನೀನೇ ಟೇಪ್‌ ಕಟ್‌ ಕಟ್‌ ಮಾಡು”
ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಮಧ್ಯೆ ಎರಡು ದಿನಗಳಿಂದ ಇದ್ದ ಬಿಗುವಿನ ವಾತಾವರಣ ಶನಿವಾರ ಇರಲಿಲ್ಲ. ಕಾವೇರಿಯಲ್ಲಿ ಹೊಸದಾಗಿ ಸ್ಥಾಪಿಸಿರುವ ಕಚೇರಿಯನ್ನು ಡಿ.ಕೆ.ಶಿವಕುಮಾರ್‌ ಕೈಯಿಂದಲೇ ಟೇಪ್‌ ಕಟ್‌ ಮಾಡಿಸಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿಸಿದರು. “ನೀನೇ ಕಟ್‌ ಮಾಡು’ ಎಂದು ಎಂದಿನ ಸಲುಗೆಯಲ್ಲೇ ಕತ್ತರಿ ನೀಡಿದರು. ನೀನು ಅಧ್ಯಕ್ಷ ನೀನೇ ಮಾಡಬೇಕೆಂದು ಪರಮೇಶ್ವರ ಕೂಡ ಧ್ವನಿಗೂಡಿಸಿದ್ದರು. ಒಟ್ಟಾರೆಯಾಗಿ ಒಬ್ಬರ ಮುಖವನ್ನು ಒಬ್ಬರು ನೋಡದ ವಾತಾವರಣ ಶನಿವಾರ ಬದಲಾಗಿತ್ತು.

ಇದರ ಜತೆಗೆ ಕಚೇರಿ ಪೂಜೆಯನ್ನು ಶಿವಕುಮಾರ್‌ ಕೂಡ ನಡೆಸಿದ್ದು, ಎಲ್ಲವನ್ನು ಮರೆತು ಐದು ವರ್ಷ ಸುಭದ್ರ ಅಡಳಿತ ನೀಡುವ ಜತೆಗೆ 2028ರಲ್ಲೂ ಈ ವಿಜಯ ಪುನರಾವರ್ತನೆ ಆಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸಿದರು. ಆಗ ಕೆಲವು ಸಚಿವರು ಲೋಕಸಭಾ ಚುನಾವಣೆಗೂ ಯಶಸ್ಸಾಗಲಿ ಎಂದು ಹೇಳಿದರು. ಹೀಗಾಗಿ “ನಾನೇ ಸಿಎಂ’ ಅಭಿಯಾನ ಕೊನೆಗೂ ಒಂದು ಹಂತಕ್ಕೆ ನಿಂತಂತಾಗಿದೆ.

ಮುಖ್ಯಮಂತ್ರಿ ವಿಚಾರದ ಬಗ್ಗೆ ನಾನು ಇನ್ನು ಯಾವುದೇ ಹೇಳಿಕೆ ನೀಡುವುದಿಲ್ಲ. ಮಾಧ್ಯಮದವರು ಈ ಬಗ್ಗೆ ಪ್ರಶ್ನೆ ಕೇಳಿದರೂ ನನ್ನ ಉತ್ತರವಿಲ್ಲ. ಸರಕಾರದಲ್ಲಿ ಯಾವುದೇ ಗೊಂದಲಗಳಿಲ್ಲ.
-ಡಾ| ಜಿ.ಪರಮೇಶ್ವರ, ಗೃಹ ಸಚಿವ

ಮಾಧ್ಯಮದವರು ಪ್ರಶ್ನೆ ಕೇಳಿದಾಗ ಉತ್ತರ ನೀಡಿದ್ದೇನೆ, ಇದರಲ್ಲಿ ಯಾವುದೇ ಗೊಂದಲ-ವಿವಾದ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ.
-ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next