ಹುಬ್ಬಳ್ಳಿ/ಗಂಗಾವತಿ: ಮೇ 23ರಂದು ಸನ್ಯಾಸ ಸ್ವೀಕರಿಸಲು ಸಚಿವ ಎಚ್.ಡಿ.ರೇವಣ್ಣ ಸಿದ್ಧತೆ ಮಾಡಿಕೊಳ್ಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟಾಂಗ್ ನೀಡಿದ್ದಾರೆ.
ಗಂಗಾವತಿಯಲ್ಲಿ ನಡೆದ ಬಿಜೆಪಿಯ ವಿಜಯಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಪ್ರಧಾನಿಯಾಗಿ ಮೋದಿ ಮತ್ತೂಮ್ಮೆ ಆಯ್ಕೆಯಾದರೆ ರಾಜಕೀಯ ಸನ್ಯಾಸ ಸ್ವೀಕರಿಸುವ ಸಚಿವ ರೇವಣ್ಣ ಅವರು ತಮ್ಮ ಹೇಳಿಕೆಗೆ ಬದ್ಧವಾಗಿರಬೇಕು. ಮೇ 23ರಂದು ಸನ್ಯಾಸ ಸ್ವೀಕರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ರೇವಣ್ಣ ಹೇಳಿರುವ ಗೆಲುವಿನ ಸಂಖ್ಯೆ ನಿಂಬೆ ಹಣ್ಣಿನ ಭವಿಷ್ಯ. ಆದರೆ, ನಾವು ಹೇಳುತ್ತಿರುವ 22 ಅಭ್ಯರ್ಥಿಗಳ ಗೆಲುವು ಜನರ ಬಳಿ ಹೋಗಿ ಸಂಗ್ರಹಿಸಿದ ಮಾಹಿತಿ. ಭವಿಷ್ಯ ಹೇಳುವ ಸಂಖ್ಯೆಗೂ ಜನರು ನೀಡುವ ಅಭಿಪ್ರಾಯಕ್ಕೂ ಬಹಳ ವ್ಯತ್ಯಾಸವಿದೆ ಎಂದರು.
ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಇಡೀ ರಾಜ್ಯವೇ ಬೇಸತ್ತು ಹೋಗಿದೆ. ರಾಜ್ಯ,ರಾಷ್ಟ್ರದ ಅಭಿವೃದ್ಧಿಗಿಂತ ತಮ್ಮ ಕುಟುಂಬದ ಉದ್ಧಾರವೇ ಅವರಿಗೆ ಮುಖ್ಯವಾಗಿದೆ. ನಮಲ್ಲಿ ಅಂತಹ ಕುಟುಂಬ ರಾಜಕಾರಣವಿಲ್ಲ. ಒಂದು ಕುಟುಂಬದಿಂದ ಇಬ್ಬರು ಸ್ಥಾನಗಳನ್ನು ಹೊಂದಿದ್ದರೆ, ಅದು ಕುಟುಂಬ ರಾಜಕಾರಣವಲ್ಲ. ಆದರೆ, ದೇವೇಗೌಡರ ಕುಟುಂಬದಲ್ಲಿ ಮಕ್ಕಳು, ಸೊಸೆಯಂದಿರು, ಇದೀಗ ಮೊಮ್ಮಕ್ಕಳ ಕಾಟ ಬೇರೆ ಎಂದು ಟೀಕಿಸಿದರು.
ಚುನಾವಣೆ ಬಳಿಕ ಸರ್ಕಾರ ಪತನ: ಕಾಂಗ್ರೆಸ್‌ನಲ್ಲಿ ಮನಸ್ತಾಪ ಹೆಚ್ಚಾಗುತ್ತಿದ್ದು, ಲೋಕಸಭಾ ಚುನಾವಣೆ ನಂತರ ಇದು ಸ್ಫೋಟಗೊಳ್ಳಲಿದೆ. ಕೋಮಾ ಸ್ಥಿತಿಯಲ್ಲಿರುವ ಸಮ್ಮಿಶ್ರ ಸರ್ಕಾರ ಕೊನೆಯಾಗಲಿದೆ. 104 ಶಾಸಕರಿರುವ ಬಿಜೆಪಿ ಅಧಿ ಕಾರಕ್ಕೇರಲಿದೆ. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಅಲ್ಲಿರುವ ಶಾಸಕರಿಗೆ ಬೇಸರವಾಗಿದೆ.
ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಮಂಡ್ಯ, ಹಾಸನ, ರಾಮನಗರಕ್ಕೆ ರಾಜ್ಯ ಸರ್ಕಾರ ಸೀಮಿತವಾಗಿದೆ ಎಂದರು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಖಚಿತವಾಗಿದ್ದು, ಮಗ ಸೋಲುತ್ತಾನೆ ಎನ್ನುವ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಹತಾಶರಾಗಿದ್ದಾರೆ. ಹೀಗಾಗಿ, ಜನರು ಮಾಧ್ಯಮಗಳ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿವೆ ಎಂದು ಹೆದರಿಸುವ ಕೆಲಸ ಅವರಿಂದ ನಡೆಯುತ್ತಿದೆ ಎಂದು ಆರೋಪಿಸಿದರು.