ನಮ್ಮ ಪರಿಸರ ಮತ್ತು ವಿಶ್ವ ಪರಿಸರ ದಿನಾಚರಣೆಯ ಮಹತ್ವದ ಬಗ್ಗೆ ಅರಿತುಕೊಳ್ಳಲು ಇದು ನಮಗೆ ಇರುವ ಕೊನೆಯ ಅವಕಾಶ ಎಂದು ಭಾಸವಾಗುತ್ತಿದೆ. ಕಾರಣ ಪರಿಸರಕ್ಕೆ ಧಕ್ಕೆಯುಂಟುಮಾಡಿದರೆ ಏನಾಗುತ್ತದೆ ಎಂಬ ದೃಷ್ಟಾಂತ ಈಗ ನಮ್ಮ ಕಣ್ಣ ಮುಂದೆಯೇ ಇದೆ.
ಹಲವರಿಗೆ ಕಳೆದ ವರ್ಷ ಮುಂಗಾರು ಮಳೆಗೆ ಕೊಡಗು, ಚಿಕ್ಕಮಗಳೂರು ಮುಂತಾದೆಡೆ ಸಂಭವಿಸಿದ ಎಂದೂ ಕಾಣದ ಭೂಕುಸಿತ ಮತ್ತು ಪ್ರವಾಹದ ನೆನಪಿರಬಹುದು. ಇನ್ನು ಸುಧಾರಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂಬ ಸಂದೇಶವದು. ಅಷ್ಟಾದರೂ ನಾವಿನ್ನೂ ಜಗತ್ತೆಲ್ಲಾ ನಮಗೆ ಸೇರಿದ್ದು ಎಂಬ ಭ್ರಮೆಯಲ್ಲಿದ್ದೇವೆ. ನಮ್ಮಷ್ಟೇ ಈ ಭೂಮಿಯ ಮೇಲೆ ಹಕ್ಕು ಹೊಂದಿರುವ ಕಾಡುಪ್ರಾಣಿಗಳ ಮೇಲೆ ಅವ್ಯಾಹತ ದೌರ್ಜನ್ಯ ನಡೆಯುತ್ತಿದೆ. ಗಣಿಗಾರಿಕೆ, ಅವೈಜ್ಞಾನಿಕ ನೀರಾವರಿ ಯೋಜನೆಗಳು, ಕಾಡಿನ ಒತ್ತುವರಿ ನಾಶ ನಡೆಯುತ್ತಲೇ ಇದೆ. ನಾವು ಜಲಮೂಲಗಳನ್ನೂ ಬಿಟ್ಟಿಲ್ಲ. ಪರಿಸರಕ್ಕೆ ಕ್ಯಾರೇ ಅನ್ನದ ಮನುಷ್ಯನ ಜೀವನ ಶೈಲಿ, ಆಹಾರ ಪದ್ಧತಿ ನಮ್ಮನ್ನೀಗ ಕೋವಿಡ್ ಎಂಬ ಕಾಣದ ಜೀವಿಯ ಕೈಗೆ ಸಿಕ್ಕಿ ನರಳುವಂತೆ ಮಾಡಿದೆ.
ಇದಕ್ಕಿಂತಲೂ ಹೆಚ್ಚಾಗಿ ಕೊವಿಡ್ 19 ತಡೆಯಲು ಹೇರಲಾದ ಲಾಕ್ ಡೌನ್ ಸಮಯದಲ್ಲಿ ಮನುಷ್ಯ ಚಟುವಟಿಕೆಗಳ ಮೇಲೆ ಹೇರಲಾದ ನಿರ್ಬಂಧದದ ಸಮಯದಲ್ಲಿ ಕಂಡುಬಂದ ನಿಸರ್ಗದ ಅಚ್ಚರಿಗಳು, ಮನುಷ್ಯನ ದೌರ್ಜನ್ಯವಿಲ್ಲದ ಭೂಮಿ ಸ್ವರ್ಗಸಮಾನ ಎಂದು ಸಾರಿ ಹೇಳಿದವು. ಮನುಷ್ಯನ ಕಾಟವಿಲ್ಲದೆ ಕಾಡು ಪ್ರಾಣಿಗಳು ಸ್ವೇಚ್ಛೆಯಾಗಿ ಓಡಾಡಿದವು. ಅಪರೂಪದ ಪ್ರಾಣಿ, ಪಕ್ಷಿ, ಜಲಚರಗಳು ಕಾಣಿಸತೊಡಗಿದವು. ಕೋಟಿಗಟ್ಟಲೆ ಖರ್ಚು ಮಾಡಿದರೂ ಸ್ವತ್ಛವಾಗದ ಯಮುನಾ ನದಿಯಂತಹ ಹಲವು ನದಿಗಳ ನೀರು ತಿಳಿಯಾಯಿತು. ವಾಯುಮಾಲಿನ್ಯ ನಿಂತು ಪಂಜಾಬ್‌ನಿಂದಲೇ ಹಿಮಾಲಯ ಪರ್ವತಗಳು ಗೋಚರಿಸತೊಡಗಿದವು. ಎಲ್ಲಕ್ಕಿಂತಲೂ ಹೆಚ್ಚಾಗಿ ಅಚ್ಚರಿಯೆಂಬಂತೆ ಮೇ ತಿಂಗಳ ಹೊತ್ತಿಗೆ ಕಾಣಿಸಿಕೊಳ್ಳುತ್ತಿದ್ದ ಕುಡಿಯುವ ನೀರಿನ ತತ್ವಾರ ಈ ಬಾರಿ ಇಲ್ಲವಾಯಿತು.
ಪರಿಸರ ನಾವಂದು ಕೊಂಡದ್ದಕ್ಕಿಂತಲೂ ನಿಗೂಢ. ನಮ್ಮ ದೌರ್ಜನ್ಯಕ್ಕೆ ಅದು ಪಾಠ ಕಲಿಸದೇ ಬಿಡುವುದಿಲ್ಲ ಮತ್ತು ಅದರ ಮುಂದೆ ನಾವು ತೃಣಸಮಾನರು. ಹೀಗಾಗಿ ನಿಸರ್ಗ ಭೂಮಿಯ ಪ್ರತಿಯೊಂದು ಜೀವಿಗೂ ಸೇರಿದ್ದು. ಅದರ ಮೇಲಿನ ನಮ್ಮ ಹಕ್ಕಿನಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಕರ್ತವ್ಯವಿದೆ. ಇನ್ನಾದರೂ ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳೋಣ.
ಇದು ನಮ್ಮಿಂದಲೇ ಆರಂಭವಾದರೆ ಮಾತ್ರ, ಇತರರಿಂದ ನಿರೀಕ್ಷಿಸಬಹುದು. ನಮ್ಮ ದಿನನಿತ್ಯದ ಜೀವನದಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸೋಣ. ನಮ್ಮ ಮನೆಯ ಕಸ ನಮ್ಮ ವಾತಾವರಣದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಯೋಚನೆಯಿರಲಿ. ವಿವಿಧ ರೀತಿಯ ಮಾಲಿನ್ಯಗಳ ತಡೆಗೆ ನಮ್ಮ ಕೈಲಾದಷ್ಟು ಶ್ರಮಿಸೋಣ. ಕಾಡನ್ನು, ಕಾಡು ಪ್ರಾಣಿಗಳನ್ನು ನಾಶಮಾಡುವ ಯೋಜನೆಗಳ ಬಗ್ಗೆ ಒಟ್ಟಾಗಿ ಧ್ವನಿಯೆತ್ತೋಣ. ಈ ಬಾರಿಯ ವಿಶ್ವ ಪರಿಸರ ದಿನಾಚರಣೆ ಬರಿಯ ಆಚರಣೆಯಾಗದೆ ಹೊಸದೊಂದು ಜೀವನ ಶೈಲಿಗೆ ಮುನ್ನುಡಿ ಬರೆಯಲಿ.
ಗುರುಪ್ರಸಾದ್ ಟಿ.ಎನ್.
ಉಪನ್ಯಾಸಕ, ವಿ.ವಿ. ಕಾಲೇಜು ಮಂಗಳೂರು