Advertisement

ವಿವೇಚನೆಯ ಬೆಳಕಿನಲ್ಲಿ ಮುನ್ನಡೆಯೋಣ

12:21 AM Jan 07, 2021 | Team Udayavani |

ಉಪನಿಷತ್ತುಗಳು ಬೋಧಪ್ರದವಾದ, ಜೀವನೋತ್ಸಾಹವನ್ನು ತುಂಬುವ ಕಥೆಗಳ ಆಗರಗಳಾಗಿವೆ. ಇದು ಅಲ್ಲಿಂದ ಹೆಕ್ಕಿದ್ದು.
ಶೌನಕ ಮತ್ತು ಅಭಿಪ್ರತಾರಿ ಎಂಬಿಬ್ಬರು ಋಷಿಗಳಿದ್ದರು. ಅವರಿ ಬ್ಬರೂ ವಾಯು ದೇವರ ಆರಾಧಕರು. ಒಂದು ದಿನ ಇಬ್ಬರೂ ಯಜ್ಞ ಮುಗಿಸಿ ಮಧ್ಯಾಹ್ನದ ಭೋಜನಕ್ಕೆ ಕುಳಿತು ಕೊಳ್ಳುವಷ್ಟರಲ್ಲಿ ಬಾಗಿಲು ತಟ್ಟಿದ ಸದ್ದಾಯಿತು. ತೇಜಸ್ವಿಯಾದ ಒಬ್ಬ ಬಾಲ ಬ್ರಹ್ಮಚಾರಿ ಭಿಕ್ಷೆಗಾಗಿ ಅಲ್ಲಿ ನಿಂತಿದ್ದ. ಬ್ರಹ್ಮಚಾರಿಗಳು ಆಯಾ ದಿನದ ಆಹಾರವನ್ನು ಭಿಕ್ಷೆಯ ಮೂಲಕ ಸಂಗ್ರಹಿಸಿ ಉಣ್ಣುವುದು ಆ ಕಾಲದ ರೂಢಿ.

Advertisement

“ಈಗಲ್ಲ ಬಾಲಕನೇ, ನಾವು ಉಣ್ಣಲಿಕ್ಕೆ ಕುಳಿ ತಾಯಿತು. ಮುಂದಕ್ಕೆ ಹೋಗು’ ಎಂದ ಶೌನಕ. ಬಾಲಕನಿಗೆ ಇಂತಹ ಉತ್ತರ ಹೊಸದೇನಲ್ಲ. ದಿನವೂ ಭಿಕ್ಷೆಯತ್ತಿ ಉಣ್ಣುವವರು ಇಂತಹ ಮಾತುಗಳನ್ನೆಲ್ಲ ಕೇಳಲೇ ಬೇಕಾಗುತ್ತದೆ. ಹೀಗಾಗಿ ಐಹಿಕರ ಮನೆಗಳಿಂದ ಅಂಥ ಉತ್ತರ ಬಂದಿದ್ದರೆ ಅವನಿಗೆ ಅಚ್ಚರಿಯಾಗುತ್ತಿರಲಿಲ್ಲ. ಆದರೆ ಆಶ್ರಮದಲ್ಲಿಯೂ ಇಂಥ ನಿರಾಕರಣೆಯೇ ಎಂದುಕೊಂಡ ಬಾಲ ಬ್ರಹ್ಮಚಾರಿ. “ಮಹಿಮಾನ್ವಿತರೆ, ನೀವು ಯಾವ ದೇವರ ಆರಾಧಕರು ಎಂದು ಕೇಳಬಹುದೇ’ ಎಂದು ಪ್ರಶ್ನಿಸಿದ.

“ನಾವು ವಾಯು ದೇವರ ಉಪಾಸಕರು. ಆತ ಸರ್ವವ್ಯಾಪಿ, ಸರ್ವಾಂತರ್ಯಾಮಿ. ಪ್ರಾಣ ಎಂದೂ ಆತನನ್ನು ಕರೆಯುತ್ತಾರೆ’ ಎಂಬ ಉತ್ತರ ಒಳಗಿನಿಂದ ಬಂತು. “ಹಾಗಾದರೆ ಸಮಸ್ತ ಲೋಕ ಪ್ರಾಣ ದಿಂದಲೇ ರೂಪುಗೊಂಡದ್ದು ಮತ್ತು ಕೊನೆ ಯಾಗುವುದು ಕೂಡ ಅದರಲ್ಲೇ ಎಂಬುದು ನಿಮಗೆ ಗೊತ್ತಿರಬಹುದು…’ ಬ್ರಹ್ಮಚಾರಿ ಹೇಳಿದ.

“ನಿಜ, ಅದು ನಮಗೆ ತಿಳಿದಿದೆ. ನೀನು ಹೊಸದೇನನ್ನೂ ಹೇಳುತ್ತಿಲ್ಲ’ ಎಂದು ಋಷಿಗಳಿಬ್ಬರೂ ಉಣ್ಣಲು ಕುಳಿತಲ್ಲಿಂದಲೇ ಉತ್ತರಿಸಿದರು.
“ಹಾಗಾದರೆ ನೀವು ಇಂದಿನ ಆಹಾರವನ್ನು ಯಾರಿಗಾಗಿ ಅಡುಗೆ ಮಾಡಿದ್ದೀರಿ ಸ್ವಾಮೀ?’ ಎಂಬ ಪ್ರಶ್ನೆ ಬಾಲಕನಿಂದ ತೂರಿಬಂತು.
“ನಾವು ಉಪಾಸಿಸುವ ವಾಯು ಅಥವಾ ಪ್ರಾಣ ದೇವರಿಗಾಗಿಯೇ ತಾನೇ, ಇನ್ಯಾರಿಗೆ!’ ಋಷಿಗಳು ಹೇಳಿದರು.

“ಪ್ರಾಣವು ವಿಶ್ವವ್ಯಾಪಿಯಾದರೆ ಆ ವಿಶ್ವದ ಭಾಗವೇ ಆಗಿರುವ ನನ್ನಲ್ಲೂ ಪ್ರಾಣವೇ ಇದೆ. ನಿಮ್ಮ ಮುಂದೆ ನಿಂತ ಈ ಹಸಿದ ದೇಹದೊಳಗೆ ಮಿಡಿಯುತ್ತಿರುವುದೂ ಆ ಪ್ರಾಣವೇ ಆಗಿದೆ ಅಲ್ಲವೇ’ ಬಾಲಕ ಹೇಳಿದ.

Advertisement

“ಹೌದು, ನೀನು ನುಡಿಯುತ್ತಿರುವುದು ನಿಜ’ ಎಂದರು ಋಷಿಗಳು. ಬಾಲ ಬ್ರಹ್ಮಚಾರಿ ಮುಂದುವರಿಸಿ ಹೇಳಿದ, “ಮಾನ್ಯರೇ, ಹಾಗಾದರೆ ನನಗೆ ಆಹಾರವನ್ನು ನಿರಾಕರಿಸುವುದು ಎಂದರೆ ನೀವು ಯಾರನ್ನು ಉದ್ದೇಶಿಸಿ ಅದನ್ನು ತಯಾರಿಸಿದ್ದೀರೋ ಆ ಪ್ರಾಣ ದೇವರಿಗೇ ಆಹಾರವನ್ನು ನಿರಾಕರಿಸಿ ದಂತೆ ಅಲ್ಲವೇ?’.  ಋಷಿಗಳಿಗೆ ನಾಚಿಕೆಯಾಯಿತು. ಪ್ರಾಣ ದೇವರ ಉಪಾಸಕರಾಗಿದ್ದು ಕೊಂಡೂ ಇಂಥ ತಿಳಿವುಗೇಡಿತನವನ್ನು ಪ್ರದರ್ಶಿಸಿದ್ದಕ್ಕಾಗಿ ನಾಚಿಕೊಂಡರು. ಬಳಿಕ ಬಾಲ ಬ್ರಹ್ಮಚಾರಿಯನ್ನು ಒಳಕ್ಕೆ ಕರೆದು ತಮ್ಮ ಜತೆಗೆ ಕೂರಿಸಿಕೊಂಡು ಉಣಬಡಿಸಿದರು, ತಾವೂ ಉಂಡರು.

ಬೇಧಗಳು ಜಾತಿಯ ನೆಲೆಯಲ್ಲಿ, ಧರ್ಮ, ಅಂತಸ್ತು, ಅಧಿಕಾರ, ವರ್ಣ – ಹೀಗೆ ನೂರು ನಮೂನೆಗಳಲ್ಲಿ ಪ್ರದರ್ಶನವಾಗುತ್ತವೆ. ಲೋಕದ ವರ್ತನೆ ಅದು. ಆದರೆ ಎಲ್ಲರ ರಕ್ತದ ಬಣ್ಣವೂ ಕೆಂಪು. ಹಾಗೆಯೇ ಎಲ್ಲರ ದೇಹದೊಳಗೂ ಮಿಡಿಯುವ ಜೀವ ಅಬೇಧವಾದದ್ದು. ನಾವು ಕಲ್ಪಿಸುವ ಯಾವುದೇ ತರ-ತಮಗಳು ಅದಕ್ಕೆ ಅಂಟುವುದಿಲ್ಲ. ಅದು ಸೃಷ್ಟಿಮೂಲದ ಒಂದು ಭಾಗವಾಗಿದೆ; ದೇಹ ಅಳಿದ ಮೇಲೆ ಮೂಲವನ್ನು ಸೇರಿಕೊಳ್ಳುತ್ತದೆ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next