Advertisement
ಸಮಾಜದಲ್ಲಿ ಸಾಮಾನ್ಯನಂತೆ ಜೀವಿಸಿ ಸಾಯುವುದರಲ್ಲಿ ಅರ್ಥವಿಲ್ಲ. ನಾವು ಬದುಕಿರುವುದು ಅಲ್ಪ ಸಮಯ ವಾದರೂ, ಈ ಕಡಿಮೆ ಅವಧಿಯಲ್ಲೇ ಸಹಸ್ರ ವರ್ಷಗಳ ಕಾಲ ನೆನಪಿಡು ವಂತಹ ಹಲವಾರು ಕೆಲಸ ಕಾರ್ಯಗಳನ್ನು ಮಾಡಬಹುದು. ಮಹಾವೀರ, ಬುದ್ಧ, ಯೇಸು, ಮಹಮ್ಮದ್ ಪೈಗಂಬರ್, ಆರ್ಯಭಟ, ಸುಶ್ರುತ, ಚರಕ, ಕಾಳಿದಾಸರಾದಿಯಾಗಿ ಆಧುನಿಕ ಕಾಲದ ಸಂಶೋಧಕರಾದ ಥಾಮಸ್ ಅಲ್ವಾ ಎಡಿಸನ್, ಐನ್‌ಸ್ಟಿನ್ ಇವರೆಲ್ಲರೂ ಸಾವಿರಾರು ವರ್ಷಗಳ ಹಿಂದೆ ಬದುಕಿ ಹೋದರೂ ಅವರು ಮಾಡಿದ ಸಮಾಜಮುಖೀ ಕಾರ್ಯಗಳಿಂದ ಇಂದಿಗೂ ಜೀವಂತವಾಗಿರುವುದರ ಜತೆಗೆ ಎಂದೆಂದಿಗೂ ಜೀವಂತ ವಾಗಿರುತ್ತಾರೆ. ಈ ಮಹಾನುಭಾವರಷ್ಟು ದೊಡ್ಡ ಸಾಧನೆಗಳನ್ನುಮಾಡಲು ಸಾಧ್ಯವಾಗದಿದ್ದರೂ ಸಣ್ಣ ಪುಟ್ಟ ಕಾರ್ಯ ಸಾಧನೆಯಂತೂ ಸಾಧ್ಯವಿದೆ. ನಮ್ಮ ಸಾವಿನ ಅನಂತರ ನಾವು ನೆಟ್ಟ ಮರ ಇನ್ನೊಬ್ಬರಿಗೆ ನೆರಳು, ಹೂ, ಹಣ್ಣು ಕೊಡುತ್ತಿದ್ದರೆ, ನಾವು ತೋಡಿದ ಬಾವಿ ಇನ್ನೊಬ್ಬರ ದಾಹ ನೀಗುತ್ತಿದ್ದರೆ, ನಾವು ಹೊತ್ತಿಸಿದ ಜ್ಞಾನದ ಜ್ಯೋತಿ ಮುಂದಿನವರಿಗೆ ದಾರಿ ದೀಪವಾದರೆ, ನಾವು ಮಾಡಿದ ಇತಿಹಾಸ ದಿಂದ ಮುಂದಿನವರು ಪಾಠ ಕಲಿಯು ವಂತಾದರೆ ನಾವು ಭೂಮಿಯ ಮೇಲೆ ಬದುಕಿದ್ದು ಸಾರ್ಥಕ. ಕೆಲವೇ ಕೆಲವು ದಿನ ಈ ಮಣ್ಣಿನಲ್ಲಿ ಜೀವಿಸುವ ಸಣ್ಣ ಎರೆಹುಳ ಕೂಡ ಈ ಮಣ್ಣನ್ನು ಫಲವತ್ತಾಗಿಸಿ ಸಾಯುತ್ತದೆ. ಆದ್ದರಿಂದ ಎಷ್ಟು ವರ್ಷ ಬದುಕಿದ್ದೆವು ಎನ್ನುವುದಕ್ಕಿಂತ ಬದುಕಿದ್ದಾಗ ಏನು ಮಾಡಿದೆವು ಎನ್ನುವುದೇ ಬಹಳ ಮುಖ್ಯ.ಉದ್ಯಮಿಯೋ, ರಾಜಕಾರ ಣಿಯೋ, ಶ್ರೀಮಂತನೋ ಮಾತ್ರ ಸಮಾಜಕ್ಕೆ ಅಪಾರ ಕೊಡುಗೆ ನೀಡ ಬಹುದು ಎಂಬುದು ತಪ್ಪು ಪರಿಕಲ್ಪನೆ. ಶ್ರೀಮಂತಿಕೆ ಇಲ್ಲದ ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ತನ್ನ ಹೃದಯ ಶ್ರೀಮಂತಿಕೆಯಿಂದ ಸಮಾಜ ಸೇವೆಯನ್ನು ಮಾಡಿ ಯಶಸ್ಸು ಗಳಿಸಬಹುದು.
ಸ್ವಂತ ಸೂರಿಲ್ಲದೆ ಕಿತ್ತಳೆ ಹಣ್ಣು ಮಾರಿಕೊಂಡು ಅಕ್ಷರದ ಕನಸು ಕಂಡು ಬಡ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬನಂತವರು ನಮ್ಮೆಲ್ಲರಿಗೂ ಆದರ್ಶರು. ಮತ್ತೊಬ್ಬರ ನೋವನ್ನು ಅರಿತುಕೊಂಡು, ಅವರ ನೋವಿಗೆ ಸ್ಪಂದಿಸಬೇಕು ಎಂಬ ಮನಸ್ಸೊಂದು ಇದ್ದರೆ ಎಂತಹ ದೀನರು ಕೂಡ ಜಗಮೆಚ್ಚುವ ಕೆಲಸ ಕಾರ್ಯ ಗಳನ್ನು ಮಾಡಲು ಸಾಧ್ಯ ಎಂಬುದನ್ನು ಈಗಾಗಲೇ ಹಲವು ಮಂದಿ ನಿರೂಪಿಸಿದ್ದಾರೆ. ಬಲ ಕೈಯಲ್ಲಿ ಕೊಟ್ಟ ದಾನ ಎಡ ಕೈಗೆ ಗೊತ್ತಾಗಬಾರದು ಎಂಬ ನಾಣ್ಣುಡಿ ಯಂತೆ ತನ್ನ ಸುತ್ತಮುತ್ತಲಿನ ಪರಿಸರದ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನ ಸೇವೆಯೇ ಜನಾರ್ದನ ಸೇವೆ ಎಂಬಂತೆ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಸಂಘ ಜೀವಿಯಾಗಿರುವ ಮಾನವ ಸಮಾಜದಲ್ಲಿ ಸದಾಚಾರ ಉಳ್ಳವನಾಗಿ ಬದುಕಿದಾಗ ಮಾತ್ರ ಜೀವನ ಸಾರ್ಥಕ ಎನಿಸುವುದು.
Related Articles
Advertisement