Advertisement

ಹುಟ್ಟಿಗೊಂದು ಅರ್ಥ ಕಲ್ಪಿಸೋಣ

10:30 PM Sep 22, 2019 | Sriram |

“ಮಾನವ ಜನ್ಮ ಬಲು ದೊಡ್ಡದು, ಇದ ಹಾಳುಮಾಡಿ ಕೊಳ್ಳದಿರಿ ಹುಚ್ಚಪ್ಪಗಳಿರ’ ಎಂಬ ಮಾತಿನಂತೆ ಈ ಬದುಕು ಅತ್ಯಮೂಲ್ಯ ಭೂಮಿಯ ಮೇಲಿನ ಬೇರಾವುದೇ ಜೀವಿಗಳಿಗೆ ಹೋಲಿಸಿದರೆ ಮಾನವನ ಬದುಕು ಬಲು ಶ್ರೇಷ್ಠವಾಗಿದೆ. ಇಂತಹ ಮಾನವ ಜನ್ಮ ಇತರರಿಗೆ ಮಾದರಿಯಾಗುವಂತಿರಬೇಕೇ ಹೊರತು ಬದುಕಿನುದ್ದಕ್ಕೂ ಸ್ವಾರ್ಥ, ಭ್ರಷ್ಟಚಾರ, ಅನಾಚಾರಗಳಂತಹ ಕಾರ್ಯಗಳಲ್ಲಿ ತೊಡಗಿಕೊಂಡು ಜೀವನವನ್ನು ಸಾಗಿಸುವುದು ತರವಲ್ಲ.

Advertisement

ಹುಟ್ಟಿನ ಸಾರ್ಥಕತೆಯನ್ನು ಪಡೆಯಬೇಕಾಗಿರುವುದು ಅತೀ ಆವಶ್ಯಕ. ಮಗುವಿನ ಮನಸ್ಸಿನ ಜತೆಗೆ ಪಕ್ವವಾದ ಯೋಚನೆಗಳನ್ನು ಬೆಳೆಸಿಕೊಳ್ಳಬೇಕು. ಹಾಗಿದ್ದಾಗ ಆತ ಒಂದೊಳ್ಳೆ ಸ್ಥಾನವನ್ನು ಸಮಾಜದಲ್ಲಿ ಗಳಿಸುತ್ತಾನೆ. ತಾನು ಮಾಡುವ ಪ್ರತಿ ಕಾರ್ಯದಲ್ಲೂ ಸಂತೃಪ್ತಿ ಕಾಣುತ್ತಾ, ಇತರರಿಗೆ ಸಹಾಯ ಮಾಡುವ ಮನಃಸ್ಥಿತಿ ಬೆಳೆಸಿಕೊಳ್ಳುವುದು ಅತೀ ಮುಖ್ಯ. ಯಾವುದೇ ಪ್ರತಿಫ‌ಲ ನಿರೀಕ್ಷೆ ಮಾಡದೇ ಇದ್ದಾಗ ಮಾತ್ರ ಮಾಡಿದ ಸೇವೆಗೆ ಬೆಲೆ ದೊರೆತಂತಾಗುತ್ತದೆ. ಇದರಿಂದ ನೊಂದವರ ಬಾಳಿಗೆ ಬೆಳಕಾದ ಪುಣ್ಯವು ಲಭಿಸುವುದರ ಜತೆಗೆ ಆತ್ಮಸಂತೃಪ್ತಿಯ ಜೀವನ ನಮ್ಮದಾಗುತ್ತದೆ.

ಹೆತ್ತವರಿಗೆ ಆಸರೆ
ತಂದೆ-ತಾಯಿಗೆ ಗೌರವ ನೀಡುವುದು ನಮ್ಮ ಆದ್ಯ ಕರ್ತವ್ಯ. ನಮಗೆ ಬದುಕು ಕರುಣಿಸಿದವರು ಅವರೇ ತಾನೇ. ಆದ್ದರಿಂದ ನಾವು ಅವರಿಗೆ ಸದಾ ಚಿರಋಣಿಗಳಾಗಿರಬೇಕು. ಜೀವನವಿಡೀ ತಮ್ಮ ಮಕ್ಕಳ ಖುಷಿಗಾಗಿ ಪರದಾಡುವ ಆ ಜೀವಗಳಿಗೆ ಮುಪ್ಪಿನ ಸಂದರ್ಭದಲ್ಲಿ ಆಸರೆಯಾಗಬೇಕಾಗಿರುವುದು ಮಕ್ಕಳ ಜವಾಬ್ದಾರಿ.

ನಮ್ಮ ಜೀವನವವನ್ನು ಇತರರಿಗೆ ಮಾದರಿಯಾಗುವಂತೆ ಸಾಗಿಸಬೇಕು. ನಾವು ಈ ಲೋಕ ತ್ಯಜಿಸಿದ ಮೇಲೆ ನಾಲ್ಕು ಜನರು ಕಣ್ಣೀರಿಡುವಂತೆ ಬದುಕಬೇಕೇ ಹೊರತು, ಇದ್ದಾಗ ಇತರರಿಗೆ ನೋವು ನೀಡಿ ಮತ್ತೂಬ್ಬರ ಕಣ್ಣೀರಿನಲ್ಲಿ ಸಂಭ್ರಮಿಸುವುದಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರೂ ತಮ್ಮ ಹುಟ್ಟಿಗೊಂದು ಅರ್ಥ ದೊರೆಯುವಂತೆ ಬದುಕಬೇಕು.

ತಪ್ಪು ಸಹಜ; ತಿದ್ದಿ ನಡೆಯೋನು ಮನುಜ
ಮಾನವನಾಗಿ ಹುಟ್ಟಿದ ಮೇಲೆ ತಪ್ಪುಗಳಾಗೋದು ಸಹಜ. ಆದರೆ ಈ ತಪ್ಪನ್ನು ತಿದ್ದಿನಡೆಯುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ಬಡವನಾಗಲೀ, ಶ್ರೀಮಂತನಾಗಲೀ ಕಷ್ಟಪಟ್ಟು, ಪ್ರಾಮಾಣಿಕ ಮಾರ್ಗದ ಮೂಲಕ ಯಶಸ್ಸನ್ನು ಸಿದ್ಧಿಸಿಕೊಳ್ಳಬೇಕೇ ವಿನಾ ಯಾವುದೇ ಅಡ್ಡದಾರಿಗಳಿಂದಲ್ಲ. ಇಂತಹ ದಾರಿಯಲ್ಲಿ ಗಳಿಸಿದ ಸಂಪತ್ತು ಕೇವಲ ಕ್ಷಣಕಾಲವಷ್ಟೆ. ಆದ್ದರಿಂದ ದೀರ್ಘ‌ಕಾಲದ ಸಂತಸಕ್ಕಾಗಿ ಪ್ರಾಮಾಣಿಕ ಮಾರ್ಗದಲ್ಲಿ ಸಾಗುವುದು ಅತೀ ಆವಶ್ಯಕ.

Advertisement

- ಶ್ರೀರಕ್ಷಾ ಶಿರ್ಲಾಲ್‌

Advertisement

Udayavani is now on Telegram. Click here to join our channel and stay updated with the latest news.

Next