ರಾಯಚೂರು: ಸಿಎಂ ಗ್ರಾಮ ವಾಸ್ತವ್ಯ ನಿರ್ಧಾರದ ಬಳಿಕ ಎಚ್ಚೆತ್ತು ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮೊದಲಿಗೆ ಎಕ್ಸರೇ ಕಣ್ಣಿನಿಂದ ಬರ ವೀಕ್ಷಣೆ ಮಾಡುವುದನ್ನು ನಿಲ್ಲಿಸಲಿ ಎಂದು ಮೀನುಗಾರಿಕೆ ಹಾಗೂ ಪಶು ಸಂಗೋಪನೆ ಸಚಿವ ವೆಂಟಕರಾವ್ ನಾಡಗೌಡ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತೇನೆಂದು ಹೇಳಿದ ಮೇಲೆ ಬಿಎಸ್‌ವೈಗೆ ತಾವು ವಿಪಕ್ಷ ನಾಯಕರು ಎಂಬುದು ನೆನಪಾಗಿದೆ. ಅದಕ್ಕಾಗಿಯೇ ಬರ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ.
ಆದರೆ, ವಾಸ್ತವವನ್ನು ಕಣ್ಣು ತೆರೆದು ನೋಡಿ ಮಾತನಾಡಲಿ. ಜಿಲ್ಲೆಯ ಲಿಂಗಸುಗೂರಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ. ಆದರೂ ಅವರು ಅ ಧಿಕಾರಿಗಳ ವಿರುದ್ಧ ರೇಗಾಡಿದ್ದಾರೆ. ಅಲ್ಲದೆ, ನರೇಗಾದಡಿ ಹಣ ಯಾಕೆ ಪಾವತಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ನರೇಗಾದಡಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ 15 ಸಾವಿರ ಕೋಟಿ ರೂ.ಗಳನ್ನು ಮೊದಲು ಬಿಡುಗಡೆ ಮಾಡಿಸಲಿ.
ನರೇಗಾ ಬಗ್ಗೆ ಟೀಕಿಸುವ ಯಾವುದೇ ನೈತಿಕತೆ ಬಿಜೆಪಿಯವರಿಗಿಲ್ಲ. ಕೂಲಿ ಕಾರ್ಮಿಕರಿಗೆ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಕೊಡಬೇಕಾದ ಹಣವನ್ನು ರಾಜ್ಯ ಸರ್ಕಾರ ಭರಿಸಿದೆ. ಮೊದಲು ಆ ಹಣ ಪಾವತಿಸಲಿ. ಇಲ್ಲವೇ ಕೇಂದ್ರದ ಬೊಕ್ಕಸ ದಿವಾಳಿಯಾಗಿದೆ ಎಂದಾದರೂ ಹೇಳಲಿ ಎಂದು ಕಿಡಿ ಕಾರಿದರು.
ಮಾನ್ವಿ ಕ್ಷೇತ್ರದಲ್ಲಿ ಜೂ.28ರಂದು ಸಿಎಂ ಕುಮಾರಸ್ವಾಮಿಯವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಬಗ್ಗೆ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ. ಹಿಂದೆ ಸಿಎಂ ಅವರ ಗ್ರಾಮ ವಾಸ್ತವ್ಯದಿಂದಲೇ ಹಳ್ಳಿಗಳ ಚಿತ್ರಣ ಬದಲಾಗಿತ್ತು. ಹಳ್ಳಿಗಳ ಅಭಿವೃದ್ಧಿ ಆಗಿಲ್ಲ ಎಂಬುದೆಲ್ಲ ಸುಳ್ಳು ಎಂದರು.
ಎಚ್‌ಕೆಆರ್‌ಡಿಬಿಯ ಎಲ್ಲ ಪಶು ವೈದ್ಯಕೀಯ ಕಾಲೇಜುಗಳನ್ನು ಉನ್ನತೀಕರಣ ಮಾಡಲಾಗುತ್ತಿದೆ. ಅದಾದ ಕೂಡಲೇ 600 ವೈದ್ಯರ ನೇಮಕಾತಿ ಮಾಡಲಾಗುವುದು. ಈಗಾಗಲೇ ಶೇ.50ರಷ್ಟು ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಮುಂದೆ ಎಲ್ಲ ಕೇಂದ್ರಗಳಿಗೂ ವೈದ್ಯರನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.