ಸಂತೋಷದಿಂದ ಬದುಕಬೇಕು ಎಂಬ ಹಂಬಲವಿದೆ ದಾರಿ ಯಾವುದು ತಿಳಿಯುವುದಿಲ್ಲ. ಇದ್ದರೂ ಗೋಚರಿಸುವುದಿ ಲ್ಲ.ವೃತ್ತಿಯಲ್ಲಿ ಖುಷಿಯಿಲ್ಲ, ಪ್ರವೃತ್ತಿಯ ಹುಡುಕುವ ಮನಸ್ಸಿ ಲ್ಲ.ಆದರೂ ಸಂತೋಷವಾಗಿರಬೇಕು. ಹೇಗೆ ಎಂದು ದಾರಿ ಹುಡುಕಬೇಕು
ಹೊತ್ತು ಮುಳುಗುವ ಹೊತ್ತು. ಹಕ್ಕಿಗಳು ಇನ್ನೇನು ಗೂಡು ಸೇರುವ ಸಮಯ. ಪ್ರಶಾಂತವಾಗಿ ಬೀಸುವ ಗಾಳಿ. ಮೌನವಾಗಿ ಕುಳಿತು ನೀಲ ಆಕಾಶದ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುವುದಿದೆಯಲ್ಲ ಅದರ ಸವಿಯೇ ಬೇರೆ. ನಿಜ ಹೇಳಬೇಕೆಂದರೆ ಇವೆಲ್ಲದರ ನಡುವಿನ ಕಪ್ಪು ಕತ್ತಲು ನಮ್ಮನ್ನು ಶೂನ್ಯದತ್ತ ತಳ್ಳಿ ಬಿಡುವುದಿಲ್ಲ. ಬದಲಾಗಿ ನಾಳೆ ಎಂಬ ಸುಂದರ ನಾವೆ ಬದುಕೆಂಬ ಸಾಗರದಲ್ಲಿ ಈಜಾಡುವುದಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತದೆ. ಈ ಕತ್ತಲು ಕಳೆದರೆ ನಾಳೆ ಮತ್ತೆ ಮಾಡಬೇಕಾಗಿರುವ ಕಾರ್ಯಗಳಿಗೆ ಬೇಕಾಗಿರುವ ಉತ್ಸಾಹಕ್ಕೆ ಜೀವ ನೀಡುವ ಕೆಲಸ ಮಾಡುತ್ತದೆ.
ಹೌದು ಬದುಕಿನ ಪ್ರತಿಯೊಂದು ದಿನವೂ ಇಲ್ಲ ನಾವು ಸಂತೋಷವನ್ನೇ ಬಯಸಿದರೆ, ಅದಕ್ಕಾಗಿ ಹಾತೊರೆಯುತ್ತಿದ್ದರೆ ನಾಳೆ ಏನು? ಎಂಬ ಅಗೋಚರ ಆತಂಕವೇ ನಮ್ಮಲ್ಲಿನ ಮನೋಸ್ಥೈರ್ಯವನ್ನು ಕುಗ್ಗಿಸಿ ಬಿಡುತ್ತದೆ. ಮನಸ್ಸಿನಲ್ಲಿ ನಾಳೆ ಎಂಬುದರ ಅಸ್ಪಷ್ಟ ಚಿತ್ರಣ, ಕಲ್ಪನೆಗಳ ಮಧ್ಯೆ ಇಂದು, ಈ ಕ್ಷಣ ಸಿಗುವ ಆನಂದವನ್ನು ಸವಿಯುವ ಸಮಯ ಕೈ ತಪ್ಪಿ ಹೋಗುತ್ತದೆ. ಇಂದು ಎಂಬ ಬೆಳಕನ್ನು ಆಸ್ವಾದಿಸಬೇಕಾದ ನಾವು ಬರಬೇಕಾಗಿರುವ ಕತ್ತಲಿನ ಗಂಟನ್ನು ಯೋಚಿಸುತ್ತಾ ಜೀವನವನ್ನು ಅರ್ಥ ಹೀನವನ್ನಾಗಿಸಿ ಬಿಡುತ್ತೇವೆ. ಈ ಮಧ್ಯೆ ದೇವರು ನೀಡಿದ, ಒಮ್ಮೆ ಕಳೆದರೆ ಮತ್ತೆ ಪಡೆಯಲಾಗದ ಸಮಯ ಎನ್ನುವ ಅಮೂಲ್ಯ ಉಡುಗೊರೆಯನ್ನು ನಷ್ಟ ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಕನಿಷ್ಠ ಪರಿವೆಯೂ ನಮಗಾಗುವುದಿಲ್ಲ. ಈ ಅರಿವು ನಮ್ಮೊಳಗೆ ಹುಟ್ಟಿದಾಗ ಆ ಅಜ್ಞಾತ ಶೂನ್ಯದಲ್ಲಿಯೂ ಸವಿಯುಣ್ಣುವ ಮನಸ್ಸು ನಮ್ಮದಾಗುತ್ತದೆ.
ಈ ಜಗತ್ತು ಅಚ್ಚರಿಗಳ ಸಂತೆ. ಇಲ್ಲಿ ನೋಡಿ ಅನಂದಿಸುವುದಕ್ಕೆ ಅನೇಕ ವಿಚಾರಗಳಿವೆ. ಅದನ್ನು ತಿಳಿದುಕೊಳ್ಳುವ ಚಿತ್ತ ನಮ್ಮಲ್ಲಿದ್ದರೆ ಬದುಕು ಬೆಳಗುತ್ತದೆ. ಹಾಗಾಗಿ, ಏನೇ ಬರಲಿ ಸಂತೋಷ ಪಡುವುದನ್ನು ಮೊದಲು ಕಲಿತುಕೊಳ್ಳಿ.
- ಭುವನ ಬಾಬು, ಪುತ್ತೂರು