Advertisement

ಆಯ್ಕೆ ಮಾಡಿದ ಜನರ ವಿಶ್ವಾಸ ಉಳಿಸಿಕೊಳ್ಳುವೆ

03:09 PM Jul 23, 2018 | Team Udayavani |

ಹರಿಹರ: 5 ವರ್ಷಗಳ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವ ಮೂಲಕ ನನ್ನನ್ನು ಆಯ್ಕೆ ಮಾಡಿ ಶಾಸನ ಸಭೆಗೆ ಕಳುಹಿಸಿದ ಜನತೆಯ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಶಾಸಕ ಎಸ್‌.ರಾಮಪ್ಪ ಹೇಳಿದರು.

Advertisement

ನಗರದ ಭಾಗೀರಥಿ ಕನ್ವೆನ್ಷನ್‌ ಹಾಲ್‌ನಲ್ಲಿ ಅಭಿಮಾನಿ ಬಳಗದಿಂದ ಭಾನುವಾರ ಆಯೋಜಿಸಿದ್ದ ತಮ್ಮ ಜನ್ಮದಿನಾಚರಣೆ ಹಾಗೂ ಮತದಾರರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಾತಿ, ಧರ್ಮ, ಪಕ್ಷಭೇದವಿಲ್ಲದೆ ಮತದಾರರ ನಿರೀಕ್ಷೆಗೂ ಮೀರಿ ಜನಸೇವೆ ಮಾಡುವುದಾಗಿ ಭರವಸೆ ನೀಡಿದರು. 

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿರುವ ನನಗೆ ಮಧ್ಯಮ ವರ್ಗ, ಬಡವರ, ಹಿಂದುಳಿದವರ ಕಷ್ಟ-ಕಾರ್ಪಣ್ಯಗಳೆನು ಎಂಬುದು ಗೊತ್ತು. ಜನರು ಸಹಸ್ರಾರು ಸಂಖ್ಯೆಯಲ್ಲಿ ಬಂದು ನನಗೆ ಶುಭ ಹಾರೈಸಿದ್ದೀರಿ. ನನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿರುವ ನಿಮಗೆ ಸದಾ ಋಣಿಯಾಗಿರುತ್ತೇನೆ ಎಂದರು.

ಪಕ್ಷದ ಕಾರ್ಯಕರ್ತರ, ಮುಖಂಡರ, ಅಭಿಮಾನಿ, ಜನತೆಯ ಪರಿಶ್ರಮದಿಂದ 64,081 ಮತ ಪಡೆದು ಗೆಲುವು ಸಾಧಿ ಸಲು ಸಾಧ್ಯವಾಯಿತು. ಕಳೆದ ಬಾರಿ ಸೋತರೂ ಎದೆಗುಂದಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಜನತೆ ನೀಡಿದ ಸಹಕಾರ
ಮರೆಯಲು ಸಾಧ್ಯವಿಲ್ಲ ಎಂದರು.

ಹಲವು ವರ್ಷಗಳಿಂದ ತಾಲೂಕಿನಲ್ಲಿ ಒಂದೂ ಮನೆ ನೀಡಲಾಗಿಲ್ಲ, ತಮ್ಮ ಅವಧಿಯಲ್ಲಿ ನಗರದಲ್ಲಿ ಮೂರು ಸಾವಿರ, ಗ್ರಾಮೀಣ ಭಾಗದಲ್ಲಿ ಆರು ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಇದೆ. ನದಿ, ಕೆರೆ, ಪಿಕ್‌ಅಪ್‌ ಡ್ಯಾಂ ಇದ್ದರೂ ತಾಲೂಕಿನ ಜನತೆಯ ಕುಡಿಯುವ ನೀರಿನ ಬವಣೆ ನಿವಾರಣೆಗೆ ಸೂಕ್ತ ವ್ಯವಸ್ಥೆ ಆಗಿಲ್ಲ. ಇದಕ್ಕಾಗಿ ಪಿಕ್‌ಅಪ್‌ ಡ್ಯಾಂ, ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

Advertisement

ತಾಲೂಕಿನ ಭದ್ರಾ ಕೊನೆ ಭಾಗದ ರೈತರಿಗೆ ನೀರು ಸಮರ್ಪಕವಾಗಿ ಸಿಗದೆ ರೈತ ಸಮುದಾಯ ಸಂಕಷ್ಟಕ್ಕೀಡಾಗಿದೆ. ಭೈರನಪಾದ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಸರಕಾರದ ಮಟ್ಟದಲ್ಲಿ ಚರ್ಚಿಸಿದ್ದೇನೆ. ಈ ಬಾರಿ ಮಳೆಯ ಕೃಪೆಯಿಂದ ಡ್ಯಾಂಗಳು ಭರ್ತಿಯಾಗಿವೆ. ರೈತರ ಮೊಗದಲ್ಲಿ ನಗು ಇದೆ. ಭತ್ತದ ಎರಡೂ ಬೆಳೆಗೆ ನೀರು ಸಿಗುವ ಸಾಧ್ಯತೆ ಇದೆ ಎಂದರು.

ಶಾಸಕ ಡಾ| ಶಾಮನೂರು ಶಿವಶಂಕರಪ್ಪ ಮಾತನಾಡಿ, ರಾಮಪ್ಪನವರು ಬಡ ಕುಟುಂಬದಿಂದ ಬಂದವರು. ಪರಿಶ್ರಮದಿಂದ ಉನ್ನತಿ ಸಾಧಿಸಿದ್ದಾರೆ. ಜನ ಸಾಮಾನ್ಯರ ಬಗ್ಗೆ ಸದಾ ತುಡಿಯುವ ಹೃದಯ, ಮುಗ್ಧತೆ, ಸರಳತೆ ಹೊಂದಿರುವ ರಾಮಪ್ಪರಿಗೆ ಕ್ಷೇತ್ರದ ಜನತೆ ಸದಾ ಬೆಂಬಲವಾಗಿರಬೇಕು ಎಂದರು.

ಬೆಳಿಗ್ಗೆ ಗ್ರಾಮದೇವತೆ, ಪೇಟೆ ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ನಾಡಬಂದ್‌ ಷಾವಲಿ, ಇಮಾಂ ಮೊಹಲ್ಲಾ ದರ್ಗಾ, ಆರೋಗ್ಯ ಮಾತೆ ಚರ್ಚ್‌ಗಳಿಗೆ ಪಕ್ಷದ ಕಾರ್ಯಕರ್ತರೊಂದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿ, ಧರಾಮ ಕಾಲೇಜು ಮೈದಾನದಲ್ಲಿ ಸಸಿ ನೆಡಲಾಯಿತು.

ಆರೋಗ್ಯ ಮಾತೆ ಚರ್ಚ್‌ ಫಾ| ಆಂತೋಣಿ ಪೀಟರ್‌, ಜಯಮ್ಮ ಎಸ್‌.ರಾಮಪ್ಪ, ನಗರಸಭಾ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ, ಸದಸ್ಯರಾದ ಬಿ.ರೇವಣಸಿದ್ದಪ್ಪ, ಶಂಕರ್‌ ಖಟಾವ್‌ಕರ್‌, ಎಸ್‌. ಎಂ. ವಸಂತ್‌, ಕೆ. ಮರಿದೇವ, ಕಿರಣ್‌ ಭೂತೆ, ಡಿ.ಜಿ. ರಘುನಾಥ್‌, ಜಿಪಂ ಸದಸ್ಯರಾದ ಅರ್ಚನಾ ಬೆಳ್ಳೂಡಿ ಬಸವರಾಜ್‌, ತಾಪಂ ಮಾಜಿ ಅಧ್ಯಕ್ಷ ಎಚ್‌.ಕೆ. ಕನ್ನಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಬಿ. ಆಬಿದ್‌ ಅಲಿ, ಎಲ್‌.ಬಿ. ಹನುಮಂತಪ್ಪ, ಎಂ. ನಾಗೇಂದ್ರಪ್ಪ, ಎಂ.ಬಿ. ರೋಷನ್‌, ಮುನಾಫ್‌, ಬಾಷಾ ಇತರರಿದ್ದರು.

ಕೆಲಸ ಮಾಡಿಸಿಕೊಳ್ಳುವುದು ರಾಮಪ್ಪಗೆ ಗೊತ್ತು: ಎಸ್‌ಎಸ್‌ ಇತ್ತೀಚೆಗೆ ನಡೆದ ದೂಡಾ ಸಭೆಯಲ್ಲಿ ಶಾಸಕ ಎಸ್‌.ರಾಮಪ್ಪ, ಹರಿಹರದಲ್ಲಿ ಅಭಿವೃದ್ಧಿಗೊಂಡಿರುವ ಹಳೆ ಪಿ.ಬಿ. ರಸ್ತೆಗೂ ದಾವಣಗೆರೆ ಮಾದರಿಯಲ್ಲೇ ಬೀದಿ ದೀಪ ಅಳವಡಿಸಬೇಕು ಎಂದು ಪಟ್ಟು ಹಿಡಿದರು. ಅದರಂತೆ ದೂಡಾದಿಂದ 1 ಕೋ.ರೂ. ಬಿಡುಗಡೆಗೊಳಿಸಲಾಗುವುದು. ಇದೆ ರೀತಿ ಭದ್ರಾ ಕಾಡಾ ಸಭೆಯಲ್ಲಿ 110 ದಿನ ಕಾಲುವೆಗಳಿಗೆ ನೀರು ನೀಡಲು ಬೇಡಿಕೆ ಇಟ್ಟರು. ಆ ಪ್ರಕಾರ ನೀರು ಹರಿಸಲಾಗಿದೆ. ಕಳೆದ ಅವಧಿ ಯಲ್ಲಿ ಚುನಾವಣೆಯಲ್ಲಿ ಸೋತರೂ ವಿವಿಧ ಯೋಜನೆಗಳ ಜಾರಿಗೆ ಶ್ರಮಿಸಿದ್ದಾರೆ. ರಾಮಪ್ಪಗೆ ಬೆನ್ನುಹತ್ತಿ ಕೆಲಸ ಮಾಡಿಕೊಳ್ಳುವುದು ಗೊತ್ತಿದೆ. ಅದರಲ್ಲೂ ಈಗ ಕೈಯಲ್ಲೇ ಅಧಿ ಕಾರವಿದೆ. ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡುತ್ತಾರೆ. ಅವರಿಗೆ ಬೆಂಬಲವಾಗಿ ನಾನೂ ಇದ್ದೇನೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next