Advertisement

ದುಶ್ಚಟ ದೂರವಿಟ್ಟು, ಬಲಿಷ್ಠ ಭಾರತ ಕಟ್ಟೋಣ

05:55 PM Aug 24, 2022 | Team Udayavani |

ಭಾಲ್ಕಿ: ನಮ್ಮಲ್ಲಿರುವ ದುಶ್ಚಟಗಳೆಲ್ಲವನ್ನೂ ಬಸವ ಜೋಳಿಗೆಗೆ ಹಾಕಿ, ದುಶ್ಚಟಗಳಿಂದ ದೂರವಿದ್ದು, ಬಲಿಷ್ಠ ಭಾರತ ಕಟ್ಟುವಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ ಹೇಳಿದರು.

Advertisement

ತಾಲೂಕಿನ ಸಿದ್ದೇಶ್ವರ ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದ ಶ್ರಾವಣ ಬೆಳಕು, ಅರಿವಿನ ಜ್ಯೋತಿ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಹುಟ್ಟಿನಿಂದಲೇ ದುರ್ಗುಣಗಳ ದಾಸರಾಗಿರುವುದಿಲ್ಲ. ನಮ್ಮ ಪರಿಸರ ಮತ್ತು ಸಂದರ್ಭಕ್ಕೆ ಸಿಕ್ಕಿಕೊಂಡು ನಾವು ದುರ್ಗುಣ, ದುಶ್ಚಟಗಳ ದಾಸರಾಗುತ್ತೇವೆ. ಇದರಿಂದ ನಮ್ಮ ಶರೀರ ಸೇರಿದಂತೆ ಕುಟುಂಬ ಮತ್ತು ಪರಿಸರ ಹಾಳು ಮಾಡುತ್ತೇವೆ. ಕಾರಣ ಇಂದಿನಿಂದಲೇ ನೀವೆಲ್ಲರೂ ಸಂಕಲ್ಪ ಮಾಡಿ, ನಿಮ್ಮಲ್ಲಿರುವ ದುರ್ಗುಣ, ದುಶ್ಚಟಗಳನ್ನು ಅರಿವಿನ ಜ್ಯೋತಿಯ ಸಾಕ್ಷಿಯಾಗಿ, ಬಸವ ಜೋಳಿಗೆಗೆ ಹಾಕಿರಿ ಎಂದು ಮನವಿ ಮಾಡಿದರು.

ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಹುಮನಾಬಾದ ಘಟಕದ ಅಧ್ಯಕ್ಷ ಪಂಡಿತ ಬಾಳೂರೆ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನವು ಸುಮಾರು ವರ್ಷಗಳಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸೇರಿದಂತೆ ಸಾಮಾಜಿಕ ಕಳಕಳಿಯ ಹಲವಾರು ಕಾರ್ಯಗಳು ನಡೆಸುತ್ತಾ ಬರುತ್ತಿದೆ.

ಪ್ರಸ್ತುತ ಸಾಲಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಇರುವ ಕಾರಣ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಯೋಧರ ಪರಿಚಯ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿ ಪ್ರೇರಣೆ ಮತ್ತು ಶಿಕ್ಷಣ ಜಾಗೃತಿ ಕಾರ್ಯಾಗಾರ ನಡೆಸಬೇಕು ಎಂದರು. ಮಹಾತ್ಮ ಗಾಂಧಿ ಪ್ರೌಢಾಶಾಲೆ ಕಲವಾಡಿಯ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಬಲಿಷ್ಠ ಭಾರತದ ಕನಸು ನಮ್ಮೆಲ್ಲರದ್ದಾಗಬೇಕು. ಭಾರತ ಬಲಿಷ್ಠವಾಗಬೇಕಾದರೆ ಮೊದಲು ನಾವು ಬಲಿಷ್ಠರಾಗಬೇಕು. ಅದಕ್ಕೆ ನಾವು ನಮ್ಮಲ್ಲಿರುವ ದುಶ್ಚಟಗಳಿಗೆ ತಿಲಾಂಜಲಿ ಹೇಳಬೇಕು. ನಮ್ಮ ಮನೆಗಳು ಡಿವೈನ್‌ ಕೇಂದ್ರಗಳಾಗಬೇಕು.

ಆದರೆ ಇಂದು ಅವು ವೈನ್‌ ಕೇಂದ್ರಗಳಾಗುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಹೇಳಿದರು. ನಿವೃತ್ತ ಶಿಕ್ಷಕ ಶಿವಕುಮಾರ ಘಂಟೆ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಹರಪಳೆ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಶಾಂತಪ್ಪ ದುಬಳಗುಂಡಿ ಅವರು ಬಸವ ಜೋಳಿಗೆಯಲ್ಲಿ ದುಶ್ಚಟಗಳ ದಾನ ಮಾಡಿರಿ ಎಂದು ಜೋಳಿಗೆ ಹಿಡಿದು ಸಭಿಕರೆಲ್ಲರಿಗೂ ದುಶ್ಚಟಗಳ ಬಿಕ್ಷೆ ಬೇಡಿದರು. ಗ್ರಾಮದ ನೂರಾರು ಯುವಕರು ಗಟ್ಟಿ ಮನಸ್ಸಿನಿಂದ ತಮ್ಮಲ್ಲಿರುವ ದುರ್ಗುಣಗಳನ್ನು ತ್ಯಾಗ ಮಾಡಿರುವ ಬಗ್ಗೆ ಸಂಕಲ್ಪ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಕಾಶೆಪ್ಪ ಸೀತಾ, ನಾಗಶೆಟ್ಟಿ ಚೋಳಾ, ಸಂತೋಷ ಹಡಪದ, ಮಹೇಶ ವಾರದ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next