ಹಾಸನ: ಕೋವಿಡ್-19 ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಯಾಗಿದ್ದು, ಸರ್ಕಾರ ರೈತರು, ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಿಲ್ಲ. ಸರ್ಕಾರಕ್ಕೆ ಆರ್ಥಿ ಸಂಕಷ್ಟವಿದ್ದರೆ ಆರ್ಥಿಕ ಸ್ಥಿತಿಗತಿಯ ಶ್ವೇತ ಪತ್ರ ಹೊರಡಿಸಲಿ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್. ಡಿ.ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್ ಜಾರಿಯಾದ ನಂತರ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ರೈತರು ಹಾಗೂ ಕೂಲಿ ಕೆಲಸವಿಲ್ಲದೇ ಅಸಂಘಟಿತ ವಲಯದ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಕೃತರಿಗೆ ಬೆಳೆ ಪರಿಹಾರ ಹಾಗೂ ಕಾರ್ಮಿಕರಿಗೆ ಸರ್ಕಾರ ತಿಂಗಳಿಗೆ 5 ಸಾವಿರ ರೂ. ಪರಿಹಾರ ಘೋಷಿಸಬೇಕಿತ್ತು. ಈಗ ಕಾರ್ಮಿಕರಿಗೆ ಘೋಷಿಸಿರುವ 2 ಸಾವಿರ ರೂ. ಪರಿಹಾರ ಯಾವುದಕ್ಕೂ ಸಾಲುವುದಿಲ್ಲ.
ಕಾರ್ಮಿಕ ಮಂಡಳಿಗೆ ನೋಂದಣಿಯಾಗದ ಅಸಂಘಟಿತ ವಯಲದ ಕಾರ್ಮಿಕರಾದ ಖಾಸಗಿ ವಾಹನಗಳ ಚಾಲಕರು, ಹೋಟೆಲ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಸರ್ಕಾರ ರಾಜ್ಯ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸುವುದನ್ನು ಬಿಟ್ಟರೆ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವು ಮಾತ್ರ ಸಿಗುತ್ತಿಲ್ಲ. ಸರ್ಕಾರಕ್ಕೆ ಮಾಸಿಕ 20 ಸಾವಿರ ಕೋಟಿ ರೂ. ತೆರಿಗೆ ಆದಾಯವಿದೆ. ಮುಖ್ಯಮಂತ್ರಿಯವರ ಪರಿಹಾರ ನಿಧಿಗೂ ನೆರವು ಬರುತ್ತಿದೆ. ಆ ಮೊತ್ತ ಎಲ್ಲಿಗೆ ಹೋಗುತ್ತಿದೆಯೋ ಗೊತ್ತಿಲ್ಲ. ಸರ್ಕಾರದ ಆರ್ಥಿಕ ಸ್ಥಿತಿಗತಿ, ಮುಖ್ಯಮಂತ್ರಿಯರ ಪರಿಹಾರ ನಿಧಿಗೆ ಬರುತ್ತಿರುವ ಮೊತ್ತ, ವೆಚ್ಚದ ವಿವರಗಳ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ತಿಜೋರಿಗೆ ಡೀಸಿಗಳ ಪೂಜೆ: ಕೋವಿಡ್-19 ನಿಯಂತ್ರಣ ಕ್ರಮಗಳಿಗೆ ಸರ್ಕಾರ ಜಿಲ್ಲಾಧಿಕಾರಿಗಳಿಗೆ 1.20 ಕೋಟಿ ರೂ. ಬಿಡುಗಡೆ ಮಾಡಿದೆ. ಎಸ್‌ಡಿಆರ್‌ಎಫ್ನಲ್ಲಿ ಎಲ್ಲಾ ತಾಲೂಕುಗಳ ತಹಶೀಲ್ದಾರರಿಗೆ 2 ಲಕ್ಷ ರೂ. ಬಿಡುಗಡೆ ಯಾಗಿದೆ. ಆದರೆ ಈ ಮೊತ್ತ ಖರ್ಚಾಗಿಲ್ಲ. ಜಿಲ್ಲಾಧಿಕಾರಿ ಸರ್ಕಾರದ ಹಣವನ್ನು ತಿಜೋರಿ
ಯಲ್ಲಿರಿಸಿ ಪೂಜೆ ಮಾಡುತ್ತಿದ್ದಾರೆ ಎಂದು ರೇವಣ್ಣ ಟೀಕಿಸಿದರು.
ಸಿಎಂಗೆ ಮನವಿ: ಸಿಎಂ ಯಡಿಯೂರಪ್ಪ ಅವರನ್ನು ಬುಧವಾರ ಭೇಟಿಯಾಗಿ ನಗರ, ಪಟ್ಟಣಗಳಿಂದ ಹಳ್ಳಿಗಳಿಗೆ ವಾಪಸಾಗಿರುವ ಜನರಿಗೆ, ವಲಸೆ ಕಾರ್ಮಿಕರಿಗೆ ನೆರವು ನೀಡ ಬೇಕು. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಕನಿಷ್ಠ 5 ಕೋಟಿ ರೂ. ಬಿಡುಗಡೆ ಮಾಡಬೇಕು. ತರಕಾರಿ, ಹಣ್ಣು, ಕಬ್ಬು ಮಾರಾಟ ಮಾಡಲಾಗದೇ ನಷ್ಟ ಅನುಭವಿಸಿರುವ ರೈತರಿಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಬೇಕು. ಆಲೂಗಡ್ಡೆ ಬೆಳೆಗಾರರಿಗೆ ಬಿತ್ತನೆ ಬೀಜ, ಔಷಧೋಪಚಾರಕ್ಕೆ ಕಳೆದ ವರ್ಷದಂತೆ ಈ ವರ್ಷವೂ ಶೇ.50 ರಷ್ಟು ಸಬ್ಸಿಡಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಔಪಚಾರಿಕ
ವಾಗಿ ಅಧಿಕಾರಿಗಳ ಸಭೆ ನಡೆಸಿ ಹೋದರೆ ಏನೂ ಪ್ರಯೋಜನವಾಗುವುದಿಲ್ಲ. ನೊಂದವರಿಗೆ ನೆರವಾಗುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಪಕ್ಷ ರಾಜಕಾರಣ ಮಾಡದೇ ನೊಂದವರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.
ಎಂಎಲ್‌ಎ ಫಂಡ್ ಸ್ಥಗಿತಗೊಳಿಸಬೇಡಿ: ಸರ್ಕಾರ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನೂ ಸ್ಥಗಿತ ಮಾಡಲು ಸರ್ಕಾರ ಹೊರಟಿದೆ. ಯಾವುದೇ ಕಾರಣಕ್ಕೂ ಶಾಸಕರ ನಿಧಿಯ ಅನುದಾನವನ್ನು ನಿಲ್ಲಿಸಕೂಡದು. ಶಾಸಕರು ಅಯಾ ಕ್ಷೇತ್ರಗಳಲ್ಲಿ ಜನರಿಗೆ ಭರವಸೆ ಕೊಟ್ಟು ಕಾಮಗಾರಿ ಮಂಜೂರು ಮಾಡಿದ್ದಾರೆ. ಈಗ
ಅನುದಾನ ನಿಲ್ಲಸಿದರೆ ಜನರಿಗೆ ಉತ್ತರ ಕೊಡ ಲಾಗುವುದಿಲ್ಲ, ಆದ್ದರಿಂದ ಎಂಎಲ್‌ಎ ಫಂಡ್ ಮುಂದುವರಿಸಿ ಎಂದು ಒತ್ತಾಯಿಸಿದರು.