ಮದ್ದೂರು: ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹದಿಂದ ನಲುಗಿರುವ ನೆರೆ ಸಂತ್ರಸ್ತರಿಗೆ ಶಾಸಕ ಡಿ.ಸಿ.ತಮ್ಮಣ್ಣ ಪ್ರತಿಷ್ಠಾನದ ವತಿಯಿಂದ 50 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳನ್ನು ಲಾರಿಗಳ ಮೂಲಕ ಉತ್ತರ ಕರ್ನಾಟಕಕ್ಕೆ ರವಾನಿಸಲಾಯಿತು.
ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಡಿ.ಸಿ. ತಮ್ಮಣ್ಣ ಪ್ರತಿಷ್ಠಾನದಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ರವಾನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಡಿ.ಸಿ. ತಮ್ಮಣ್ಣ, ರಾಜ್ಯದಲ್ಲಿ ಹಿಂದೆಂದೂ ಕಾಣದ ಜಲಪ್ರಳಯ ಉಂಟಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಯ ಜನರನ್ನು ಸಂತ್ರಸ್ತರನ್ನಾಗಿಸಿದೆ. ಇದರಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟಕ್ಕೊಳಗಾಗಿರುವುದು ನೋವಿನ ಸಂಗತಿ. ಅವರ ನೆರವಿಗೆ ನಿಂತು ಮಾನವೀಯತೆ ಮೆರೆದು ಅವರ ಕಷ್ಟಕ್ಕೆ ಸ್ಪಂದಿಸೋಣ ಎಂದು ಹೇಳಿದರು.
ರೈತರ ಸಂಕಷ್ಟಕ್ಕೆ ಸ್ಪಂದಿಸೋಣ: ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ನಿರೀಕ್ಷೆಗೂ ಮೀರಿ ನದಿಗಳು ತುಂಬಿ ಹರಿಯುತ್ತಿವೆ. ರೈತರು ಸಂಕಷ್ಟದಲ್ಲಿ ಸಿಲುಕಿ ದಿಕ್ಕು ತೋಚದಂತೆ ಕಂಗಾಲಾಗಿದ್ದಾರೆ. ಅಂತಹವರ ನೆರವಿಗೆ ಧಾವಿಸಿರುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರತಿಷ್ಠಾನದ ವತಿಯಿಂದ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ವಹಿಸಲಾಗಿದೆ ಎಂದರು.
ಎರಡು ಲಾರಿ ಮೆಕ್ಕೆ ಜೋಳದ ಹಸಿ ಮೇವು ಮತ್ತು ಆಹಾರ ಪದಾರ್ಥಗಳು ಹಾಗೂ ಇನ್ನಿತರೆ ಸಾಮಗ್ರಿಗಳನ್ನು 8 ಲಾರಿ ಮೂಲಕ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಸ್ಥಳಗಳಿಗೆ ರವಾನಿಸಲಾಯಿತು.
ಇದೇ ವೇಳೆ ಜಿಲ್ಲಾ ಪಂಚಾಯಿತಿ ಸದಸ್ಯ ಮರಿಹೆಗಡೆ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ಚಿಕ್ಕಮರಿಯಪ್ಪ, ಸತೀಶ್, ಮನೋಹರ್, ಪುರಸಭೆ ಸದಸ್ಯರಾದ ವನಿತಾ, ಪ್ರಮೀಳಾ, ಸರ್ವಮಂಗಳಾ, ಮಹೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಮುಖಂಡರಾದ ರಮೇಶ್, ದಾಸೇಗೌಡ, ಶೇಖರ್, ಶಂಕರ್, ಸೋಮಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸೌಮ್ಯ ಮತ್ತಿತರರು ಹಾಜರಿದ್ದರು.