ನಮ್ಮಿಬ್ಬರ ಪ್ರೀತಿಯ ಪಯಣಕ್ಕೆ ಸುಮಧುರ ಹಾಡುಗಳು ಸಾಕ್ಷಿಯಾಗಿದ್ದವು. ಒಂದರ ನಂತರ ಇನ್ನೊಂದು ಬರುವ ಹಾಡುಗಳ ಸರಮಾಲೆ ಸಾಂಗತ್ಯವನ್ನು ಮರೆಯಲಾರದಂತೆ ಮಾಡುತ್ತಿದ್ದವು.
ಸ್ನೇಹಿತನೇ, ನಿನ್ನ ಬಹುದಿನಗಳ ಆಸೆಯನ್ನು ಪೂರೈಸಿದ ಖುಷಿ ಅಂದು ನನಗಿತ್ತು. ನಿನಗೆ ಇಷ್ಟವೆಂದು ತಿಳಿ ಹಳದಿ ಸೀರೆಯುಟ್ಟು, ಮೊಗ್ಗಿನ ದುಂಡು ಮಲ್ಲಿಗೆ ತೊಟ್ಟು, ನಿನ್ನ ಬರುವಿಕೆಗೆ ಕಾಯುತ್ತಿದ್ದೆ. ಹುಡುಗಿಯರು ಯಾವಾಗಲೂ ಕಾಯಿಸುತ್ತಾರೆ ಎಂಬುದಕ್ಕೆ ನಾನು ಅಪವಾದ. ನಿನ್ನನ್ನು ನಾನು ಯಾವತ್ತೂ ಕಾಯಿಸಲಿಲ್ಲ ಎನ್ನುವುದು ವಿಶೇಷ. ನಿಗದಿತ ಸ್ಥಳ ಹಾಗೂ ಸಮಯಕ್ಕೆ ಇಬ್ಬರೂ ಬಂದಾಗಿತ್ತು. ಹೊಸ ಕಾರು ಕೊಂಡ ಖುಷಿಯಲ್ಲಿ ಒಂದು ಲಾಂಗ್ ಡ್ರೈವ್ ಹೋಗೋಣ ಎಂದು ನೀನು ಪದೇ ಪದೇ ಕೇಳಿದಾಗಲೂ, ಬೇಡ ಬೇಡ ಎಂದಿದ್ದೆ. ಅದು ಬರೀ ನಿನ್ನನ್ನು ಸ್ವಲ್ಪ ಪೀಡಿಸಬೇಕೆಂಬ ಆಸೆಯಿಂದ. ನನಗೂ ನಿನ್ನ ಜೊತೆ ಹೊಸ ಕಾರಿನಲ್ಲಿ ಪಯಣಿಸಬೇಕೆಂಬ ಆಸೆ ಇದ್ದದ್ದು ಸುಳ್ಳಲ್ಲ.
ಇಳಿ ಸಂಜೆಯಲ್ಲಿ ಕಾರು ಹೀಗೆ ಹೊರಡುತ್ತಾ ಇದ್ದರೆ ಜಗತ್ತೇ ಒಂದು ಕ್ಷಣ ಸ್ತಬ್ಧವಾದ ಅನುಭವ. ಅಲ್ಲಲ್ಲಿ ಎಲ್ಲವೂ ನಿಂತು, ನಮಗಷ್ಟೇ ದಾರಿ ಮಾಡಿಕೊಟ್ಟ ಕ್ಷಣಿಕ ಕಲ್ಪನೆ ಅೃೋಘ.
ನೀನು ಅಂದುಕೊಂಡಂತೆಯೇ ನಡೀತಾ ಇದೆ ಎಂದು ಖುಷಿ ಪಟ್ಟ ನಿನ್ನ ಭಾವನೆಗಳು ಮುಖದ ಮೇಲೆ ನರ್ತನ ಮಾಡುತ್ತಿದ್ದದ್ದು ನೋಡುವಂಥದ್ದು! ಕಣ್ಣ ಸನ್ನೆಯಲ್ಲೇ ದಾರಿಯ ಮೇಲೆ ನಿಗಾ ಇರಲಿ ಎಂಬ ಸೂಚನೆಯನ್ನು ಹಾಗೆಯೇ ಅರ್ಥ ಮಾಡಿಕೊಂಡಿದ್ದೆ. ಬುದ್ಧಿವಂತನಿಗೆ ಇಷಾರೆಗಳೇ ಸಾಕು ಎನ್ನುವುದನ್ನು ಸಾಬೀತು ಮಾಡಿದ್ದೆ. ನನ್ನ ಕೂದಲಲ್ಲಿ ಸಿಕ್ಕಿಸಿದ ಮೊಗ್ಗು ದುಂಡು ಮಲ್ಲಿಗೆಯ ಮಾಲೆ, ನಿನ್ನನ್ನು ಪರವಶಗೊಳಿಸಿದ್ದನ್ನು ಮೆಲ್ಲಗೆ ನೋಡಿದ್ದೆ.
ಆ ಭಾಷೆ, ಈ ಭಾಷೆ ಅಥವಾ ಹಳೆಯದು, ಹೊಸದು ಎಂಬ ಭೇದವಿಲ್ಲದ ಅಭಿರುಚಿ, ಹಾಡಿನ ಆಲಿಸುವಿಕೆಗೆ ಇಬ್ಬರದೂ ಇದೆ. ಕನ್ನಡ ಅಥವಾ ಹಿಂದಿ, ಕಿವಿಗೆ ಇಂಪಾಗಿ ಕೇಳಿಸಿದರೆ ಸಾಕು; ಇಬ್ಬರೂ ಆ ಹಾಡಿಗೆ ಫಿದಾ. ನಮ್ಮಿಬ್ಬರ ಪ್ರೀತಿಯ ಪಯಣಕ್ಕೆ ಸುಮಧುರ ಹಾಡುಗಳು ಸಾಕ್ಷಿಯಾಗಿದ್ದವು. ಒಂದರ ನಂತರ ಇನ್ನೊಂದು ಬರುವ ಹಾಡುಗಳ ಸರಮಾಲೆ ಸಾಂಗತ್ಯವನ್ನು ಮರೆಯಲಾರದಂತೆ ಮಾಡುತ್ತಿದ್ದವು. ಆ ಕಾರು, ಆ ಪಯಣ, ಆ ಮಲ್ಲಿಗೆ ಮಾಲೆ, ಹಾಡುಗಳು, ಆಹಾ!! ಎಷ್ಟು ವೈವಿಧ್ಯಮಯ. ದಿನವೂ ಹೀಗೇ ಇರಬಾರದೆ? ನಮ್ಮನ್ನು ಜಗತ್ತನ್ನು ಮರೆತು ಕ್ಷಣಿಕ ಎಂದರೂ ಸರಿ, ಆ ಗಳಿಗೆಗೆ ಯಾವುದೂ ಸಮಾನವಲ್ಲ. ಇದ್ದು, ಇದ್ದುದ್ದನ್ನು ಸವಿಯುವ ವಿಶಾಲ ಭಾವ. ಬೇರೇನೂ ಬೇಡ ಎಂಬ ತಾತ್ಕಾಲಿಕ ತ್ಯಾಗ ಅವರ್ಣನೀಯ. ನೋಡೋ. ಏನೇ ಹೇಳು. ಈ ಕಲ್ಪನೆಯಲ್ಲಿ ಆನಂದವಿದೆ. ಈ ಕಲ್ಪನೆಗೆ ಜೀವ ಕೊಟ್ಟ ನಿನ್ನ ಲಾಂಗ್ ಡ್ರೈವ್ ಎಂದೆಂದೂ ಶಾಶ್ವತ. ಮತ್ತೆ ಮತ್ತೆ ನಿನ್ನ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಬೇಕೆಂಬುದು ಮನಸ್ಸು ಹಠ ಹಿಡಿಯುತ್ತಿದೆ.
-ಮಾಲಾ ಮ ಅಕ್ಕಿಶೆಟ್ಟಿ.
ಬೆಳಗಾವಿ.