ರಾಜಕೀಯದಲ್ಲಿ ಟೀಕೆ, ವಿಡಂಬನೆ ಎಲ್ಲ ಸರಿ. ಆದರೆ ಅಂಥ ಮಾತುಗಳು ಲಕ್ಷ್ಮಣರೇಖೆ ದಾಟಬಾರದು. ಆದರೆ ಅಯ್ಯರ್ ವಿಚಾರದಲ್ಲಿ ಇಂತಹ ಸಭ್ಯತೆಯನ್ನು ನಿರೀಕ್ಷಿಸುವಂತಿಲ್ಲ. ಬಿಜೆಪಿಯವರನ್ನು ಟೀಕಿಸುವ ಖುಷಿಯಲ್ಲಿ ಅವರ ಮಾತುಗಳು ತುಟಿ ಮೀರಿ ಬಂದಿರುತ್ತವೆ.
ಪ್ರಧಾನಿ ನರೇಂದ್ರ ಮೋದಿಯನ್ನು ನೀಚ ವ್ಯಕ್ತಿ ಎಂದು ಕರೆಯುವ ಮೂಲಕ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ರಾಜಕೀಯ ಟೀಕೆಗಳ ಪರಿಭಾಷೆಯನ್ನು ನೀಚ ಮಟ್ಟಕ್ಕಿಳಿಸಿದ್ದಾರೆ. ಕೇಂದ್ರದ ಮಾಜಿ ಸಚಿವರೂ ಆಗಿರುವ ಅಯ್ಯರ್ ಯಾವಾಗಲಾದರೊಮ್ಮೆ ಸುದ್ದಿಯಾದರೆ ಅದು ಕೆಟ್ಟ ಕಾರಣಕ್ಕಾಗಿಯೇ ಆಗಿರುತ್ತದೆ ಎನ್ನುವುದು ದಿಲ್ಲಿಯ ರಾಜಕೀಯ ವಲಯದಲ್ಲಿ ಕೇಳಿ ಬರುವ ಮಾತು. ಇದನ್ನು ನಿಜಗೊಳಿಸುವಂತಿದೆ ಅಯ್ಯರ್ ವರ್ತನೆ. ಅವರಿಗೆ ಬಿಜೆಪಿ, ಮೋದಿ, ಅಮಿತ್ ಶಾ ಸೇರಿದಂತೆ ಬಲಪಂಥೀಯ ನಾಯಕರನ್ನು ಕಂಡರಾಗುವುದಿಲ್ಲ.ಹೀಗಾಗಿ ಅವರನ್ನು ಟೀಕಿಸುವಾಗ ಅವರ ನಾಲಗೆ ಆಚಾರವನ್ನು ಮರೆಯುತ್ತದೆ. ರಾಜಕೀಯದಲ್ಲಿ ಟೀಕೆ , ವಿಡಂಬನೆ ಎಲ್ಲ ಸರಿ, ಆದರೆ ಅದು ಲಕ್ಷ್ಮಣರೇಖೆ ದಾಟಬಾರದು. ಆದರೆ ಅಯ್ಯರ್ ವಿಚಾರದಲ್ಲಿ ಇಂತಹ ಸಭ್ಯತೆಯನ್ನು ನಿರೀಕ್ಷಿಸುವಂತಿಲ್ಲ. ಬಿಜೆಪಿಯವರನ್ನು ಟೀಕಿಸುವುದೆಂದರೆ ಅವರಿಗೆ ಏನೋ ಒಂದು ರೀತಿಯ ಖುಷಿ. ಈ ಖುಷಿಯಲ್ಲಿ ಅವರ ಮಾತುಗಳು ತುಟಿ ಮೀರಿ ಬಂದಿರುತ್ತವೆ. ಶುಕ್ರವಾರ ದಿಲ್ಲಿಯಲ್ಲೂ ಆಗಿರುವುದು ಇದೇ. ಮೋದಿಯನ್ನು ಟೀಕಿಸುವ ಭರದಲ್ಲಿ ಅವರು ಬಳಸಬಾರದ ಪದವನ್ನು ಬಳಸಿದ್ದಾರೆ. ವಿಚಿತ್ರವೆಂದರೆ ಅತ್ಯಂತ ನಿರ್ಣಾಯಕ ಗಳಿಗೆಯಲ್ಲಿ ಅಯ್ಯರ್ ಹೀಗೆ ಏನಾದರೊಂದು ಎಡವಟ್ಟು ಮಾಡಿಕೊಳ್ಳುತ್ತಾರೆ. ಚುನಾವಣೆಗೆ ಬರೀ 48 ತಾಸು ಬಾಕಿಯಿರುವಾಗ ಏನೇ ಮಾತನಾಡುವುದಿದ್ದರೂ ಅಳೆದೂಸುರಿದೂ ಮಾತನಾಡಬೇಕೆಂಬ ಪರಿಜ್ಞಾನ ಯಾವುದೇ ಪುಡಿ ರಾಜಕಾರಣಿಗಳಿಗಾದರೂ ಇರುತ್ತದೆ. ಆದರೆ ಅಯ್ಯರ್‌ಗೆ ಮಾತ್ರ ಈ ಮಾತು ಅನ್ವಯಿಸುವುದಿಲ್ಲ.
2014ರ ಮಹಾಚುನಾವಣೆ ಸಂದರ್ಭದಲ್ಲಿ “ಚಹಾ ಮಾರುತ್ತಿದ್ದ ಮೋದಿಗೆ ಪ್ರಧಾನಮಂತ್ರಿಯಾಗುವ ಯೋಗ್ಯತೆಯಿಲ್ಲ. ಅವರೇನಿದ್ದರೂ ಚಹಾ ಮಾರಲಿಕ್ಕಷ್ಟೇ ಲಾಯಕ್ಕು. ಬೇಕಾದರೆ ಅವರಿಗೆ ಎಐಸಿಸಿ ಕಚೇರಿ ಎದುರು ಚಹಾದಂಗಡಿ ಮಾಡಿ ಕೊಡುತ್ತೇವೆ’ ಎಂದ ಅಯ್ಯರ್ ಹೇಳಿಕೆಯೇ ಬಿಜೆಪಿ ಬ್ರಹ್ಮಾಸ್ತ್ರವಾಗಿತ್ತು. ಈ ಟೀಕೆಯನ್ನೇ ತನಗನುಕೂಲ ವಾಗುವಂತೆ ತಿರುಗಿಸಿಕೊಂಡ ಬಿಜೆಪಿ ಚಾಯ್‌ಪೇ ಚರ್ಚಾ ಎಂಬ ವಿನೂತನ ಕಲ್ಪನೆಯನ್ನು ಹುಟ್ಟುಹಾಕಿ ಕಾಂಗ್ರೆಸ್‌ನ್ನು ನೆಲಕಚ್ಚಿದ್ದು ಪ್ರಜಾತಂತ್ರದ ಒಂದು ರೋಚಕ ಅಧ್ಯಾಯ. ಅನಂತರ ಪಾಕಿಸ್ಥಾನಕ್ಕೆ ಹೋದ ಅಯ್ಯರ್ ಅಲ್ಲಿನ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿ ಸುತ್ತಾ ಮೊದಲು ಮೋದಿಯನ್ನು ತೊಲಗಿಸಿ. ಬಳಿಕ ಭಾರತ-ಪಾಕ್ ಸಂಬಂಧದಲ್ಲಾಗುವ ಬದಲಾವಣೆ ಯನ್ನು ನೋಡಿ ಎಂದಿದ್ದರು.ಇಂತಹ ವಿವಾದಾತ್ಮಕ ಹೇಳಿಕೆಗಳಿಂದ ಅವರು ನಿಜವಾಗಿ ಲಾಭ ಮಾಡಿಕೊಡು ತ್ತಿರುವುದು ಬಿಜೆಪಿಗೇ. ಹೀಗಾಗಿಯೇ ಕಾಂಗ್ರೆಸ್ ಹಾಗೂ ವಿಪಕ್ಷ ಪಾಳಯ ಈಗ ಅಯ್ಯರ್ ಮೇಲೆ ಮುಗಿಬಿದ್ದಿವೆ. ಶನಿವಾರ ಮೊದಲ ಹಂತದ ಚುನಾವಣೆ ಎದುರಿಸುವ ಗುಜರಾತಿನಲ್ಲಿ ಅಯ್ಯರ್ “ನೀಚ’ ಹೇಳಿಕೆಯೇ ಈಗ ಪ್ರಚಾರದ ಮುಖ್ಯ ವಿಷಯವಾಗಿದೆ. ಗುಜರಾತ್‌ನಂತಹ ಸೂಕ್ಷ್ಮ ರಾಜ್ಯಗಳಲ್ಲಿ ಭಾವನೆಗಳೇ ನಿರ್ಣಾಯಕ. ಇಂತಹ ಪರಿಸ್ಥಿತಿಯಲ್ಲಿ ಅಯ್ಯರ್ ಹೇಳಿರುವ ಮಾತುಗಳು ಕಾಂಗ್ರೆಸ್‌ಗೆ ಪ್ರತಿಕೂಲವಾಗಿ ಪರಿಣಮಿಸಿದರೆ ಆಶ್ಚರ್ಯವಿಲ್ಲ.
ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್, ಬಡಿಗೆ ಕೊಟ್ಟು ಹೊಡೆಸಿಕೊಳ್ಳುತ್ತಿದೆ. ಸೆಲ್ಫ್ ಗೋಲ್ ಹೊಡೆಯುವುದರಲ್ಲಿ ಕಾಂಗ್ರೆಸಿಗರು ಪರಿಣತರಾಗಿರುವಂತಿದೆ. ಅಧ್ಯಕ್ಷ ಹುದ್ದೆಗೇರಲಿರುವ ರಾಹುಲ್ ಗಾಂಧಿಯ ಪ್ರಚಾರವೇ ದಿಕ್ಕುತಪ್ಪಿದೆ. ಆರಂಭದಲ್ಲಿ ಅಭಿವೃದ್ಧಿಯ ಕುರಿತು ಮಾತನಾಡುತ್ತಿದ್ದ ರಾಹುಲ್ ಹಠಾತ್ ಧಾರ್ಮಿಕ ವಿಚಾರಗಳನ್ನು ಎತ್ತಿಕೊಂಡರು. ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ಪಕ್ಷದ ಮೂಲಸಿದ್ಧಾಂತವನ್ನೇ ಪಣಕ್ಕೊಡ್ಡಿದರು. ಸೋಮನಾಥ ದೇಗುಲದಲ್ಲಿ ಅನ್ಯಧರ್ಮೀಯ ಎಂದು ನಮೂದಿಸಿ ವಿರೋಧಿಗಳ ಟೀಕೆಗೆ ಆಹಾರವಾದರು. ಇದನ್ನು ಸರಿಪಡಿಸಲು ಜನಿವಾರ ಧಾರಣೆ ಮಾಡಿದ ಬ್ರಾಹ್ಮಣ ಎಂದು ಹೇಳಿ ನಗೆಪಾಟಲಾದರು. ಇದೇ ವೇಳೆ ಪಕ್ಷದ ಇನ್ನೋರ್ವ ಹಿರಿಯ ನಾಯಕ ಕಪಿಲ್ ಸಿಬಲ್ ಕೂಡ ತನ್ನ ನಡೆಗಳಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ರಾಹುಲ್ ಗಾಂಧಿಯ ಪದೋನ್ನತಿಯನ್ನು ಮೊಗಲರ ವಂಶಾವಳಿಗೆ ಹೋಲಿಸುವ ಮೂಲಕ ಬಿಜೆಪಿಗೆ ತಾವಾಗಿಯೇ ಒಂದು ಅಸ್ತ್ರವನ್ನು ಚಿನ್ನದ ಹರಿವಾಣದಲ್ಲಿಟ್ಟು ಕೊಟ್ಟರು. ಅನಂತರ ಸುಪ್ರೀಂ ಕೋರ್ಟಿನಲ್ಲಿ ಅಯೋಧ್ಯೆ ಕೇಸಿಗೆ ಸಂಬಂಧಿಸಿದಂತೆ ಎಡಬಿಡಂಗಿ ವಾದ ಮಂಡಿಸಿ ಎಲ್ಲೆಡೆಯಿಂದ ಉಗಿಸಿಕೊಂಡಿದ್ದಾರೆ. ಸಿಬಲ್ ವರ್ತನೆಯಿಂದಾಗಿ ಕಾಂಗ್ರೆಸ್ ಹಿಂದು ವಿರೋಧಿ ಪಕ್ಷ ಎಂಬ ಹಣೆಪಟ್ಟಿ ಕಳಚಲು ಮಾಡಿದ ಪ್ರಯತ್ನಗಳು ನೀರಿನಲ್ಲಿ ಹೋಮವಿಟ್ಟಂತಾಗಿದೆ. ಚುನಾವಣೆ ಕಾಲದಲ್ಲಿ ಕಾಂಗ್ರೆಸಿನ ಕೆಲವು ಹಿರಿತಲೆಗಳು ಮಾಡುತ್ತಿರುವ ಈ ರಗಳೆಗಳನ್ನು ನೋಡಿದರೆ ಕಾಂಗ್ರೆಸ್ ಮುಕ್ತ ಭಾರತ ಮಾಡಲು ಬಿಜೆಪಿಯವರಿಗಿಂತ ಕಾಂಗ್ರೆಸಿನವರಿಗೇ ಹೆಚ್ಚು ಉತ್ಸಾಹವಿರುವಂತೆ ಕಾಣಿಸುತ್ತಿದೆ.