Advertisement

ಒಟ್ಟಿಗೇ ಬಹುಮಾನ ಸ್ವೀಕರಿಸೋಣ ಬಾರೋ…

08:49 PM Nov 04, 2019 | mahesh |

ನೀನು ಬರೆದ ಒಂದು ಚುಕ್ಕಿಯು ಕೂಡ ನನಗೆ ವೇದವಾಕ್ಯದಂತೆ.ಆ ಮೌನದಲ್ಲೇ ಏನೋ ಒಂದು ಮಾತಿದೆಯೆಂದು ನಾನರಿಯುವೆ. ಮೌನಂ ಸಮ್ಮತಿ ಲಕ್ಷಣಂ ಎಂದು ಹಿರಿಯರೇ ಹೇಳಿರುವರಲ್ಲ? ನೀ ಬರೆದ ಒಂದು ಅಕ್ಷರವೂ ನನ್ನ ಪಾಲಿಗೆ ಉಪನಿಷತ್ತಿನಂತೆ ಕಣೋ. ಅಷ್ಟೇ ಅಲ್ಲ; ಮೂರು ಸಾಲುಗಳ ನೀ ಬರೆದ ಕಾವ್ಯ ತ್ರಿಪದಿಯಂತೆಯೂ, ಐದು ಸಾಲುಗಳು ಶರಣರ ವಚನಗಳಂತೆ. ಇನ್ನು ಚೌಪದಿ,ಷಟ³ದಿ,ಹೀಗೆ ಸಾಗುತ್ತಲೇ ಹೋಗುವುದು.

Advertisement

ನೀನು ನನಗಾಗಿ ಎರಡು ಸಾಲು ಬರೆದರೆ ಅದೇ ಸಾಕೆನಗೆ. ನೀನು ಬರೆವ ಸಾಲುಗಳೇ ನನ್ನ ಪಾಲಿಗೆ ಸುಭಾಷಿತವೂ, ನುಡಿಮುತ್ತು. ಅಮೃತ ವಚನದ ವಾಚನದಂತೆ ದಿನಾಲೂ ಒಂದು ಪತ್ರ ತೆರೆದು ಓದುವುದನ್ನು ನಾನು ಹವ್ಯಾಸವೆನ್ನಲೋ, ಹುಚ್ಚು ಎನ್ನಲೋ, ಅಭ್ಯಾಸವೆನ್ನಲೋ ತಿಳಿಯದು. ಅದಕ್ಕೆ ಏನು ಹೆಸರಿಡಲಿ ಗೆಳೆಯ?

ನೀ ಬರೆದ ಪತ್ರಗಳ ಸಂಗ್ರಹವೇ ನನಗೊಂದು ಗ್ರಂಥ ಭಂಡಾರ. ಪ್ರೀತಿ ದೇವತೆಯ ಮುಂದೆ ಆ ಗ್ರಂಥವಿಟ್ಟು ಪೂಜಿಸುವ ಸೌಭಾಗ್ಯವತಿ ನಾನು. ಮಾಡದ ಪೂಜೆ, ವ್ರತ, ಉಪವಾಸ, ಸಂಕಷ್ಟಿಗಳಿಲ್ಲ. ಆದರೆ ದೇವರು ಮಹಾ ತಪಸ್ಸಿನ ನಂತರ ನೀಡುವ ವರದಂತೆ ನೀ ಒಲಿಯಲು ಬಹಳ ಸಮಯವೇ ಬೇಕೇನೋ ಎಂಬ ಶಂಕೆ ಎನಗೆ.

ಇಷ್ಟು ದಿನವಾದರೂ ನಿನ್ನ ಪತ್ರ ಕಾಣದೇ ಇರುವುದು ಯಾಕೋ ಬಿಡಿಸಲಾರದ ಒಗಟಾಗಿದೆ.ಆ ಒಗಟಿಗೆ ಉತ್ತರವ ಕಳುಹಿಸುವೆಯಾ?ಒಗಟು ಬಿಡಿಸಲು ರಸಪ್ರಶ್ನೆಯಲ್ಲಿ ನೀಡುವಂತೆ ನೀನು ಥಟ್‌ ಅಂತ ಮಾತಾಡಬೇಕೆಂದು ನಾ ಬಯಸುವೆ. ಕಾಲಾವಕಾಶ ಜಾಸ್ತಿ ತೆಗದುಕೊಳ್ಳದೇ ಈ ಪ್ರಶ್ನೆಗೆ ಬೇಗ ಉತ್ತರ ಹೇಳಿ ಬಹುಮಾನವನ್ನು ಜಂಟಿಯಾಗಿ ಸ್ವೀಕರಿಸೋಣ ಬಾ ಗೆಳೆಯ.

ಇಂತಿ ನಿನ್ನ ಪ್ರೀತಿಯ,
ಉಲೂಚಿ

Advertisement
Advertisement

Udayavani is now on Telegram. Click here to join our channel and stay updated with the latest news.

Next