ಬೆಂಗಳೂರು: ಅಮೃತಕ್ಕಾಗಿ ದೇವ-ದಾನವರು ಒಂದಾದಂತೆ, ವೈದಿಕ ಧರ್ಮ ರಕ್ಷಣೆಗಾಗಿ ನಾವೆಲ್ಲ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಎಂಬ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ವೈದಿಕ ಧರ್ಮ ರಕ್ಷಣೆಗಾಗಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳು ಒಂದಾಗಬೇಕು. ಮಾಧ್ವರು ಮಾತ್ರವಲ್ಲದೆ ಮಾಧ್ವ ಮಠ, ಸಂಘಟನೆಗಳು ಒಂದಾಗಿ ಸುವರ್ಣಯುಗ ನಿರ್ಮಿಸಲು ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.
ಮಾಧ್ವ ಮಹಾಸಭಾ, ಬ್ರಾಹ್ಮಣ ಮಹಾ ಸಭಾದ ವಿರೋಧಿ ವೇದಿಕೆಯಲ್ಲ. ವಿಘಟಕ ಸಮೂಹವಲ್ಲ, ಪೂರಕ ವೇದಿಕೆ. ಇದರಲ್ಲಿ ಗೌಡ ಸಾರಸ್ವತ ಬ್ರಾಹ್ಮಣರೂ ಸದಸ್ಯತ್ವ ಪಡೆದು ಕೊಳ್ಳಬೇಕು. ಮಾಧ್ವ ಮಹಾಸಭಾವು ಭಕ್ತಿ, ಜ್ಞಾನ ಪ್ರಸಾರ ಹಾಗೂ ಸಮಾಜಮುಖೀ ಕಾರ್ಯಗಳನ್ನು ಮಾಡುತ್ತ ಜನಜನಿತವಾಗಿ, ದೇಶ ಕಲ್ಯಾಣಕ್ಕೆ ಕೊಡಗೆ ನೀಡಲಿ ಎಂದು ಹಾರೈಸಿದರು.
ಹಿಂದೂಗಳಲ್ಲಿ ಬ್ರಾಹ್ಮಣರಿದ್ದಾರೆ, ಬ್ರಾಹ್ಮಣರಲ್ಲಿ ಮಾಧ್ವರಿದ್ದಾರೆ. ಒಂದು ದೇವಸ್ಥಾನಕ್ಕೆ ಹೊರಾಂಗಣದಲ್ಲಿ ಹಾಗೂ ಒಳಾಂಗಣದಲ್ಲಿ ಪ್ರದಕ್ಷಿಣೆ ಪಥಗಳು ಇರುವಂತೆ, ವೈದಿಕರಲ್ಲಿ ಈ ಮಹಾಸಭಾಗಳು ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ನಗರದ ಕೋಟೆ ಹೈಸ್ಕೂಲ್ ಮೈದಾನದ ಶ್ರೀರಾಮ ಸೇವಾ ಮಂಡಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖೀಲ ಕರ್ನಾಟಕ ಮಾಧ್ವ ಮಹಾಸಭಾಕ್ಕೆ ಚಾಲನೆ ನೀಡಿ ಮಾತನಾಡಿದರು.
Related Articles
Advertisement
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ಮಹಾಸಭಾ ಕಟ್ಟಿಕೊಂಡರೆ ಸಾಲದು, ಪ್ರತಿದಿನ ಸಂಧ್ಯಾ ವಂದನೆ, ಗಾಯತ್ರಿ ಉಪಾಸನೆ, ವೇದಾಧ್ಯ ಯನ, ಯಜ್ಞಯಾಗಾದಿಗಳನ್ನು ಚೆನ್ನಾಗಿ ಮಾಡಿ ಬ್ರಾಹ್ಮಣ್ಯ ಉಳಿಸಿಕೊಳ್ಳಬೇಕು. ಹಣ, ವೇದಿಕೆ, ಮಾಧ್ಯಮಗಳಲ್ಲಿ ಪ್ರಚಾರದಿಂದ ಕಾರ್ಯ ಮಾಡಲು ಆಗಲ್ಲ. ಅಂತಃಸತ್ವದಲ್ಲಿ ಒಳಿತು ಮಾಡುವ ಹಂಬಲವಿದ್ದಾಗ ಕೆಲಸ ಮಾಡಲು ಬಲ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮಾಧ್ವರು ಅಲ್ಪಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಸುಮ್ಮನೆ ಕೂರದೆ, ದೇಶ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು. ಸಮುದಾಯ ಒಟ್ಟಿಗೆ ಸೇರಿದಾಗಲೇ ದೊಡ್ಡ ಕೆಲಸಗಳು ಆಗುತ್ತವೆ. ಮಹಾಸಭಾವು ಸಮುದಾಯದ ಯುವಜನರು ಉನ್ನತ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ಸಹ ನೆರವಾಗಬೇಕು ಎಂದು ಸಲಹೆ ನೀಡಿದರು.