Advertisement

ಅಧಿವಕ್ತಾ ಭೇದ-ಭಾವ ಮರೆತು ಕೆಲಸ ಮಾಡಲಿ: ಓಂಕಾರ ಶ್ರೀ

08:33 AM Jul 13, 2017 | Team Udayavani |

ದಾವಣಗೆರೆ: ಜಾತಿ, ಧರ್ಮ ಎಂಬ ಭೇದ-ಭಾವ ತೋರದೆ ಎಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಧಿವಕ್ತಾ ಪರಿಷತ್‌ ಕೆಲಸ ಮಾಡಲಿ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶಿಸಿದ್ದಾರೆ.

Advertisement

ಬುಧವಾರ ಕುವೆಂಪು ರಸ್ತೆಯಲ್ಲಿನ ಆಟೋ ನಿಲ್ದಾಣದ ಬಳಿಯ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸಮ್ಮೇಳನ ಕಾರ್ಯಾಲಯ ಉದ್ಘಾಟನೆ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು, ಅಧಿವಕ್ತಾ ಪರಿಷತ್‌ ಯಾವುದೇ ಧರ್ಮಕ್ಕೆ ಅಂಟಿಕೊಂಡು 
ಕೆಲಸ ಮಾಡುವುದಿಲ್ಲ ಎಂಬುದು ತಿಳಿದಿದೆ. ಸಮಾಜದಲ್ಲಿ ಶೋಷಣೆಗೊಳಗಾದವರ ಪರ ಕೆಲಸದ ಮೂಲಕ ತನ್ನ ಕರ್ತವ್ಯ ನಿಭಾಯಿಸಲಿ ಎಂದರು.

ಹಿಂದೆ ಬಸವಣ್ಣ ಉಳ್ಳವರು ಶಿವಾಲಯವ ಕಟ್ಟುವರಯ್ನಾ.. ನಾನೇನು ಮಾಡಲಿ ಬಡವನಯ್ಯ.. ಎಂದರು. ಇಂದು ಉಳ್ಳವರು ನ್ಯಾಯ ಕೊಂಡುಕೊಳ್ಳುವರಯ್ನಾ ನಾನೇನು ಮಾಡಲಿ ಎಂಬಂತ ಸ್ಥಿತಿಯಲ್ಲಿ ಅನೇಕ ಅಮಾಯಕ, ಮುಗ್ಧ, ತುಳಿತಕ್ಕೆ ಒಳಗಾದವರಿದ್ದಾರೆ. ಅವರ ಪರ ದನಿ ಎತ್ತುವ, ನ್ಯಾಯ ಕೊಡಿಸುವ ಕೆಲಸವನ್ನು ಈ ಪರಿಷತ್‌ ಮಾಡಲಿ. ಯಾರೂ ಏನೇ ಮಾತನಾಡಿಕೊಳ್ಳಲಿ. ಅದಕ್ಕೆ ಕಿವಿಗೊಡಬೇಡಿ. ಜೈ ಭಾರತ್‌ ಮಾತಾ ಎಂದು ಹೇಳುವ ಯಾರೇ ಕಷ್ಟಕ್ಕೆ ಸಿಲುಕಿದರೂ ಅವರ ಪರ ನಿಲ್ಲಿ. ಆಗ ನಿಮ್ಮ ಪರಿಷತ್‌ನ
ಮುಖ್ಯ ಉದ್ದೇಶ ಈಡೇರುತ್ತದೆ ಎಂದು ಅವರು ತಿಳಿಸಿದರು.

ಪರಿಷತ್‌ ರಾಜ್ಯಾಧ್ಯಕ್ಷ ಸೂರ್ಯಪ್ರಕಾಶ್‌ ಮಾತನಾಡಿ, ನಮ್ಮ ಪರಿಷತ್‌ ಕೇವಲ ಹಿಂದು ಧರ್ಮೀಯರ ಪರ ಕೆಲಸ ಮಾಡುತ್ತದೆ
ಎಂಬುದಾಗಿ ಕೆಲವರು ಹೇಳಿಕೊಂಡಿದ್ದಾರೆ. ಆದರೆ, ನಾವು ಅದನ್ನು ಮಾಡಲ್ಲ. ಹಿಂದು ಪರ ಕೆಲಸ ಮಾಡಲು ಬೇಕಾದಷ್ಟು  ಸಂಘಟನೆಗಳಿವೆ. ಅಧಿವಕ್ತಾ ಎಂದರೆ ಅಧಿಕಾರ ಇರುವ ನಾವುಗಳು ಅನ್ಯಾಯಕ್ಕೆ ಒಳಗಾದವರ ಪರ ಕೆಲಸ ಮಾಡುವುದು ಎಂದು ಅರ್ಥ ಎಂದರು. ನಮ್ಮ ಪರಿಷತ್‌ನ ಬೆಂಗಳೂರು ಸಮಾವೇಶಕ್ಕೆ 5,500 ಜನ ವಕೀಲರು ಬಂದಿದ್ದರು. ಈ ಪೈಕಿ ಕೆಲ ಮುಸ್ಲಿಂ, ಕ್ರೈಸ್ತರು ಇದ್ದರು. ನಮ್ಮನ್ನು ಟೀಕಿಸುವವರು ಅರ್ಥಮಾಡಿಕೊಳ್ಳಲಿ. ಇಂದಿನ ಸ್ಥಿತಿ ಬಹಳ ಹೀನಾಯವಾಗಿದೆ. ನಾವು ಸಮಸ್ಯೆಗೆ
ಪರಿಹಾರ ಕಂಡುಕೊಳ್ಳಬೇಕು. ದೇಶಕ್ಕೆ ಸಮಸ್ಯೆ ಬಂದಾಗ ನಾವು ಪ್ರಶ್ನೆ ಮಾಡುತ್ತೇವೆ. ನಮ್ಮಲ್ಲಿ ದೇಶ ಪ್ರೇಮಿಗಳು ಇರುವ ತನಕ ದೇಶ ಉಳಿಯುತ್ತದೆ. ದೇಶ ಪ್ರೇಮಿಗಳು ಕೊನೆಯಾದ ದಿನವೇ ದೇಶ ಅವನತಿಯಾಗುತ್ತದೆ. ಇದೇ ತತ್ವದಡಿ ನಾವು ಕೆಲಸಮಾಡುತ್ತೇವೆ. ಇಲ್ಲಿ ಧರ್ಮ ಅಡ್ಡಬರುವುದಿಲ್ಲ ಎಂದು ಅವರು ತಿಳಿಸಿದರು.

ರಾಜ್ಯ ಸಮಾವೇಶದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ, ವಕೀಲರು ನ್ಯಾಯ ಎತ್ತಿ ಹಿಡಿಯುವ
ಕೆಲಸಮಾಡಬೇಕು. ವಕೀಲಿ ವೃತ್ತಿ ಒಂದು ಸವಾಲಿನ ವೃತ್ತಿಯಾಗಿದೆ. ಪರಿಷತ್‌ ಮೂಲಕ ಸಮಾಜದ ಬಡವರಿಗೆ ನ್ಯಾಯ ಸಿಗುವಂತೆ
ಮಾಡಿ. ಮನೆ, ಮನೆ ಮಾತಾಗಿ ಎಂದು ತಿಳಿಸಿದರು. ಸಂಘದ ಅಧ್ಯಕ್ಷಬಿ.ಬಿ ರಾಮಪ್ಪ ಇತರರು ವೇದಿಕೆಯಲ್ಲಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next