ರಾಷ್ಟ್ರೀಯ ಶಿಕ್ಷಣ ನೀತಿ ಬಹುಕಾಲದಿಂದ ಚರ್ಚೆಯಲ್ಲಿರುವ ವಿಷಯ. ಎನ್‌ಡಿಎ ಸರಕಾರ ಅಧಿಕಾರಕ್ಕೇರಿದ ಬೆನ್ನಿಗೆ ದೇಶದ ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ರೂಪಿಸುವ ವಿಚಾರ ಪ್ರಸ್ತಾವಕ್ಕೆ ಬಂದಾಗ ಭಾರೀ ವಾದ-ವಿವಾದಗಳು ನಡೆದು ಅನಂತರ ತಣ್ಣಗಾಗಿತ್ತು. ಇದೀಗ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಮತ್ತೂಮ್ಮೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ವಿಷಯವನ್ನು ಪ್ರಸ್ತಾವಿಸುವುದರೊಂದಿಗೆ ಈ ಚರ್ಚೆ ಪ್ರಾರಂಭವಾಗಿದೆ. ತಿರುವನಂತಪುರದಲ್ಲಿ ಈ ಕುರಿತು ಮಾತನಾಡಿರುವ ಸಿಂಗ್ ಡಿಸೆಂಬರ್‌ನಲ್ಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಹಿರಂಗಪಡಿಸಲಿದ್ದೇವೆ ಎಂದಿದ್ದಾರೆ. ಬಿಜೆಪಿ ಹಾಗೂ ಅದರ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ಗೆ ಹಿಂದಿನಿಂದಲೂ ಪ್ರಸಕ್ತ ಶಿಕ್ಷಣ ಪದ್ಧತಿಯ ಬಗ್ಗೆ ತೀವ್ರವಾದ ಅಸಮಾಧಾನವಿದೆ. ಈಗಿನ ಶಿಕ್ಷಣ ಪದ್ಧತಿ ಭಾರತೀಯತೆಯನ್ನು ಪ್ರತಿಪಾದಿಸುತ್ತಿಲ್ಲ.
ದೇಶದ ಸಂಸ್ಕೃತಿಯನ್ನು ತಿಳಿಸಿ ಮೌಲ್ಯವನ್ನು ಬಿತ್ತುವಲ್ಲಿ ಶಿಕ್ಷಣ ವಿಫಲಗೊಂಡಿದೆ. ಈಗಲೂ ನಾವು ಬ್ರಿಟಿಷರು ಬಿಟ್ಟು ಹೋಗಿರುವ ಮೆಕಾಲೆ ಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ವಸಾಹತುಶಾಹಿ ಮನೋಧರ್ಮವನ್ನು ಕುರುಡಾಗಿ ಅನುಸರಿಸುವ ಶಿಕ್ಷಣ ಪದ್ಧತಿ ಬದಲಾಗಬೇಕು. ಪ್ರಸಕ್ತ ಶಿಕ್ಷಣ ಮಕ್ಕಳಲ್ಲಿ ಎಡಪಂಥೀಯ ಧೋರಣೆಯನ್ನು ಬೆಳೆಸುತ್ತದೆ ಎನ್ನುವುದು ಆರ್‌ಎಸ್‌ಎಸ್‌ನ ಆಳದಲ್ಲಿರುವ ಆತಂಕ. ಹೀಗಾಗಿ ಶಿಕ್ಷಣ ಪದ್ಧತಿಯಲ್ಲಾಗಿರುವ ತಪ್ಪುಗಳನ್ನು ಸರಿಪಡಿಸಿ ಸಮಗ್ರವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಬೇಕೆಂಬ ಕೂಗು ಎನ್‌ಡಿಎಯ ಆರಂಭದ ದಿನಗಳಲ್ಲಿ ಜೋರಾಗಿಯೇ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದ ಕೇಂದ್ರ ಸರಕಾರ ಟಿ.ಎಸ್.ಆರ್.ಸುಬ್ರಮಣಿಯನ್ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಎರಡು ಸಂಪುಟಗಳಲ್ಲಿ ಸಲ್ಲಿಸಿರುವ ಬೃಹತ್ ವರದಿಯ ಹಲವು ಅಂಶಗಳನ್ನು ಎತ್ತಿಕೊಂಡು ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಜನರ ಅಭಿಪ್ರಾಯ ತಿಳಿಯುವ ಸಲುವಾಗಿ ಕಳೆದ ವರ್ಷವೇ ಶಿಕ್ಷಣ ನೀತಿಯನ್ನು ಸರಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ. ಸಹಜವಾಗಿಯೇ ವಿಪಕ್ಷಗಳು ಇದು ಶಿಕ್ಷಣದ ಕೇಸರೀಕರಣ ಎಂಬ ಕೂಗೆಬ್ಬಿಸಿವೆ.
ಸ್ವಾತಂತ್ರ್ಯ ಲಭಿಸಿದ ಬಳಿಕ ದೇಶದ ಶಿಕ್ಷಣ ವ್ಯವಸ್ಥೆ ಎಡಪಂಥೀಯ ಧೋರಣೆಗಳಿಂದ ಪ್ರಭಾವಿತವಾಗಿದೆ. ದುರದೃಷ್ಟವಶಾತ್ ಬ್ರಿಟಿಷರ ಮತ್ತು ಪಾಶ್ಚಾತ್ಯ ವಿದ್ವಾಂಸರ ಹೆಜ್ಜೆಗಳನ್ನು ಅನುಸರಿಸುವ ಸಲುವಾಗಿ ಭಾರತೀಯ ಸಂಸ್ಕೃತಿಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ. ಹೀಗಾಗಿ ನಮ್ಮ ಶಿಕ್ಷಣ ಪದ್ಧತಿ ನಮ್ಮದಾಗಿ ಉಳಿದಿಲ್ಲ. ಇದು ಪಾಶ್ಚಾತ್ಯ ಮತ್ತು ದೇಶೀಯ ಮಿಶ್ರಣದಿಂದ ಕಲಸುಮೇಲೋಗರವಾಗಿದೆ ಎನ್ನುತ್ತಿರುವ ಸರಕಾರ ಹೊಸ ನೀತಿಯಲ್ಲಿ ದೇಶೀಯತೆಯನ್ನು ತುಂಬಲು ಪ್ರಯತ್ನಿಸಿದೆ. ಪ್ರಾಥಮಿಕ ಹಂತದಿಂದಲೇ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕೆಂಬ ಪ್ರಾಮಾಣಿಕ ಕಾಳಜಿ ಹೊಂದಿರುವುದು ಅಭಿನಂದನೀಯ. ಆದರೆ ಈ ನೆಪದಲ್ಲಿ ಅತಿಯಾದ ದೇಶೀಯತೆಯನ್ನು ತುಂಬಿ ವಿಪಕ್ಷಗಳ ಆರೋಪಗಳನ್ನು ನಿಜವೆಂದು ಸಾಬೀತುಪಡಿಸಲು ಪ್ರಯತ್ನಿಸಬಾರದು. ಹಿಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳಲ್ಲಿ ಮಾಹಿತಿಗಳನ್ನು ತುಂಬುತ್ತಿದೆಯೇ ಹೊರತು ಜ್ಞಾನವನ್ನು ತುಂಬುವುದಿಲ್ಲ ಎನ್ನುವ ಆರೋಪದಲ್ಲಿ ಹುರುಳಿದೆ. ಇಂತಹ ಕೆಲವು ಮೂಲಭೂತ ತಪ್ಪುಗಳನ್ನು ಸರಿಪಡಿಸಲು ಹೊಸ ಶಿಕ್ಷಣ ನೀತಿ ಹೆಚ್ಚು ಗಮನಹರಿಸಬೇಕು.
ಹಾಗೆಂದು ರಾಷ್ಟ್ರೀಯ ಶಿಕ್ಷಣ ನೀತಿ ರಚನೆಯಾಗುತ್ತಿರುವುದು ಇದೇ ಮೊದಲಲ್ಲ. 1979ರಲ್ಲಿ ಜನತಾ ಪಾರ್ಟಿ ಸಮಗ್ರವಾದ ನೀತಿಯನ್ನು ರಚಿಸಲು ಮುಂದಾಗಿತ್ತು. ಆಗ ಜನಸಂಘವೂ ಜನತಾ ಪಾರ್ಟಿಯ ಅಂಗವಾಗಿತ್ತು ಎನ್ನುವುದು ಗಮನಾರ್ಹ ಅಂಶ. ಆದರೆ ಕೇಂದ್ರೀಯ ಶಿಕ್ಷಣ ಸಲಹಾ ಸಮಿತಿಯ ನಿರಾಕರಣೆಯಿಂದಾಗಿ ಈ ಉದ್ದೇಶ ಈಡೇರಲಿಲ್ಲ. ಅನಂತರ 1968ರಲ್ಲಿ ಇಂದಿರಾ ಗಾಂಧಿ ಮತ್ತು 1986ರಲ್ಲಿ ರಾಜೀವ ಗಾಂಧಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಿದ್ದಾರೆ. 1992ರಲ್ಲಿ ಆಗ ಪ್ರಧಾನಿಯಾಗಿದ್ದ ಪಿ. ವಿ. ನರಸಿಂಹ ರಾವ್ ಶಿಕ್ಷಣ ನೀತಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಪ್ರಯತ್ನ ಮಾಡಿದ್ದರು. ಪ್ರಸ್ತುತ ಎನ್‌ಡಿಎ ಸರಕಾರ ದೇಶದ ಹೊಸ ಪೀಳಿಗೆಯ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಶಿಕ್ಷಣದ ಗುಣಮಟ್ಟದ ಸಮಗ್ರ ಸುಧಾರಣೆ ಹಾಗೂ ಆವಿಷ್ಕಾರ ಹಾಗೂ ಸಂಶೋಧನಾ ಪ್ರವೃತ್ತಿಗೆ ಒತ್ತು ನೀಡುವ ನೀತಿಯನ್ನು ಜಾರಿಗೊಳಿಸಲುದ್ದೇಶಿಸಿದೆ. ದೇಶದಲ್ಲಿ ಧಾರಾಳ ಶಿಕ್ಷಣ ಸಂಸ್ಥೆಗಳು ಇದ್ದರೂ ನಮ್ಮ ಶಿಕ್ಷಣದ ಗುಣಮಟ್ಟ ಇನ್ನೂ ಜಾಗತಿಕ ಮಟ್ಟ ತಲುಪಿಲ್ಲ ಎನ್ನುವುದು ಕಟು ವಾಸ್ತವ. ಈಗಲೂ ಜಗತ್ತಿನ ಟಾಪ್ 100 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆಯಲು ಭಾರತದ ವಿವಿಗಳು ವಿಫಲವಾಗುತ್ತಿ¤ವೆ. ಪ್ರತಿವರ್ಷ ಮೂವತ್ತರಿಂದ ನಲುವತ್ತು ಸಾವಿರ ಪಿಎಚ್‌ಡಿ ಪದವೀಧರರು ಹೊರಬರುತ್ತಿದ್ದರೂ ಜಾಗತಿಕ ಆರ್ಥಿಕತೆಗೆ ಭಾರತದ ಕೊಡುಗೆ ಮಾತ್ರ ಬರೀ ಶೇ. 0.2. ಉನ್ನತ ಶಿಕ್ಷಣವೆಂದರೆ ಅಮೆರಿಕ, ಇಂಗ್ಲಂಡ್, ಆಸ್ಟ್ರೇಲಿಯ ಎಂಬ ನಂಬಿಕೆಯೇ ಈಗಲೂ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ಅಂಶಗಳು ಸೇರಿದಂತೆ ಎಲ್ಲ ಲೋಪದೋಷಗಳತ್ತ ಗಮನಹರಿಸಬೇಕು.