Advertisement

ಮೊದಲು ಮತಗಳ ದೃಢೀಕರಣವಾಗಲಿ

09:02 AM May 23, 2019 | mahesh |

ನವದೆಹಲಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಸಮೀಪಿಸುತ್ತಿರುವಂತೆ 22 ಪ್ರತಿಪಕ್ಷಗಳ ನಾಯಕರು ಮಂಗಳವಾರ ಮತ್ತೆ ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲು ಹತ್ತಿದ್ದಾರೆ. ಮೇ 23ರ ಗುರುವಾರ ಮತ ಎಣಿಕೆ ಆರಂಭಿಸುವುದಕ್ಕೂ ಮೊದಲೇ ವಿದ್ಯುನ್ಮಾನ ಮತಯಂತ್ರ ಮತ್ತು ಮತ ದೃಢೀಕರಣ ಯಂತ್ರ(ವಿವಿಪ್ಯಾಟ್)ಗಳಲ್ಲಿನ ಮತಗಳ ಹೋಲಿಕೆಯ ಕೆಲಸವನ್ನು ಪೂರ್ಣಗೊಳಿಸಬೇಕು ಎಂಬ ಹೊಸ ಕೋರಿಕೆಯನ್ನು ಈ ನಾಯಕರು ಆಯೋಗದ ಮುಂದಿಟ್ಟಿದ್ದಾರೆ.

Advertisement

ಸದ್ಯದ ಮಾಹಿತಿಯಂತೆ, ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ 5 ಇವಿಎಂ ಮತ್ತು ವಿವಿಪ್ಯಾಟ್ ಮತಗಳ ಹೋಲಿಕೆ ಮಾಡಲಾಗುತ್ತದೆ. ಆದರೆ, ಹೀಗೆ ಮಾಡುವುದರ ಬದಲಿಗೆ, ಮೊದಲು ಮತಗಳ ಹೋಲಿಕೆ ಕಾರ್ಯ ಮುಗಿಸಿ, ನಂತರ ಇವಿಎಂಗಳಲ್ಲಿನ ಮತಗಳ ಎಣಿಕೆ ಕಾರ್ಯ ಆರಂಭಿಸಬೇಕು ಎನ್ನುವುದು ಪ್ರತಿಪಕ್ಷಗಳ ಆಗ್ರಹವಾಗಿದೆ.

ಆಯೋಗದ ಭೇಟಿ ಬಳಿಕ ಈ ಕುರಿತು ವಿವರಣೆ ನೀಡಿದ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ‘ನಾವು ಇವಿಎಂ-ವಿವಿಪ್ಯಾಟ್ ಮತಗಳ ಹೋಲಿಕೆಯನ್ನು ಎಣಿಕೆಗೂ ಮೊದಲೇ ಮಾಡುವಂತೆ ಮನವಿ ಸಲ್ಲಿಸಿದ್ದೇವೆ. ಒಂದು ವೇಳೆ ಆರಂಭದ ಹೋಲಿಕೆ ವೇಳೆ ಯಾವುದಾದರೂ ಲೋಪ ಕಂಡುಬಂದಲ್ಲಿ, ಆಗ ಆ ನಿರ್ದಿಷ್ಟ ಅಸೆಂಬ್ಲಿ ಕ್ಷೇತ್ರದ ಎಲ್ಲ ಮತಗಟ್ಟೆಗಳಲ್ಲಿನ ವಿವಿಪ್ಯಾಟ್‌ಗಳ ಮತಗಳನ್ನೂ ಎಣಿಸಬೇಕು ಎಂದು ನಾವು ಕೋರಿದ್ದೇವೆ. ಏಕೆಂದರೆ, ಮತದಾನದ ಸಮಯದಲ್ಲಿ ಹಲವು ಇವಿಎಂಗಳಲ್ಲಿ ಲೋಪ ಕಂಡುಬಂದಿತ್ತು. ಅಲ್ಲದೆ, ಒಂದು ಪಕ್ಷಕ್ಕೆ ಹಾಕಿದ ಮತವು ಬೇರೊಂದು ಪಕ್ಷಕ್ಕೆ ಹೋಗಿದ್ದ ಉದಾಹರಣೆಗಳೂ ಇತ್ತು’ ಎಂದಿದ್ದಾರೆ. ನಮ್ಮ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಆಯೋಗವು, ಬುಧವಾರ ಬೆಳಗ್ಗೆ ಈ ಕುರಿತು ಸಭೆ ಕರೆದು ನಿರ್ಧರಿಸುವುದಾಗಿ ತಿಳಿಸಿದೆ ಎಂದೂ ಅವರು ಹೇಳಿದ್ದಾರೆ.

ಉತ್ತರ ಭಾರತದ ಹಲವೆಡೆ ಇವಿಎಂಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ, ಕೇಂದ್ರದ ಪಡೆಗಳನ್ನು ನಿಯೋಜಿಸುವಂತೆಯೂ ನಾವು ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದು ಬಿಎಸ್‌ಪಿ ನಾಯಕ ಸತೀಶ್‌ಚಂದ್ರ ಮಿಶ್ರಾ ತಿಳಿಸಿದ್ದಾರೆ. ವಿಪಕ್ಷಗಳ ಬೇಡಿಕೆ ಸಂಬಂಧ ಆಯೋಗ ಬುಧವಾರ ಬೆಳಗ್ಗೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next