ಯಾದಗಿರಿ: ಹಸಿರು ಸಕಲ ಜೀವರಾಶಿಗಳಿಗೆ ಉಸಿರಾಗಿದೆ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು. ಅರಕೇರಾ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾಮಾಜಿಕ ಅರಣ್ಯ ವಲಯ ಇಲಾಖೆಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕೇವಲ ಶೇ. 3ರಷ್ಟಿದ್ದು, ಆದ್ದರಿಂದ ಹೆಚ್ಚಿನ ಸಸಿ ನೆಟ್ಟು ಕಾಡು ಬೆಳೆಸಬೇಕು ಎಂದ ಅವರು, ಪ್ರತಿಯೊಬ್ಬ ಮಗು ತನ್ನ ಹುಟ್ಟುಹಬ್ಬಕ್ಕೆ ಒಂದು ಸಸಿ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು.
ಅರಣ್ಯಾಧಿಕಾರಿ ತೋಷಣ ಕುಮಾರ ಮಾತನಾಡಿ, ಸಾಮಾಜಿಕ ಅರಣ್ಯ ವಲಯ ಇಲಾಖೆಯಲ್ಲಿ ವಿವಿಧ ಬಗೆ ಸಸಿಗಳು ಲಭ್ಯವಿದ್ದು, ಸಾರ್ವಜನಿಕರು ಅರಣ್ಯವನ್ನು ಬೆಳೆಸಲು ಮುಂದಾಗಬೇಕು ಎಂದರು. ಹೆಚ್ಚಿನ ಅರಣ್ಯ ಪ್ರದೇಶ ಬೆಳೆಸುವುದರಿಂದ ವಾತಾವರಣದಲ್ಲಿನ ಉಷ್ಣಾಂಶ ನಿಯಂತ್ರಣ ಆಗುತ್ತದೆ. ಬೆಳೆಯುತ್ತಿರುವ ನಗರೀಕರಣದಿಂದ ಪರಿಸರದಲ್ಲಿ ಉಸಿರಾಡಲು ಶುದ್ಧಗಾಳಿಯೂ ಸಿಗದಂತಾಗಿದೆ
ಎಂದರು.
ಈ ವೇಳೆ ಸಹಾಯಕ ಅರಣ್ಯಾಧಿಕಾರಿ ಮುದಣ್ಣ ಡಾಂಗೆ, ಮಹೇಂದ್ರ ಪಾಟೀಲ, ಮುಖ್ಯಗುರು ವಿಶ್ವನಾಥರಡ್ಡಿ ಪ್ರಭುಗೌಡ ಅರಿಕೇರಾ, ಭೋಜನಗೌಡ ಯಡಳ್ಳಿ ಇದ್ದರು.