ಶಿವಮೊಗ್ಗ: ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಕಾಂಗ್ರೆಸ್‌ನವರೇ ಪ್ರಯತ್ನಿಸ್ತಾ ಇದ್ದಾರೆ. ಸಿದ್ದರಾಮಯ್ಯ ಸಹ ಟವಲ್ ಹಾಕಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಹಿಂದಿನಿಂದ ಕುಮ್ಮಕ್ಕು ಕೊಡ್ತಾ ಇರೋರೇ ಸಿದ್ದರಾಮಯ್ಯ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಎರಡು ಗುಂಪು ಬಡಿದಾಡ್ತಿದ್ದಾವೆ. ಮೇ 23ರ ನಂತರ ಇದು ಇನ್ನೂ ಜಾಸ್ತಿಯಾಗುತ್ತೆ. ಜಾತಿ, ಜಾತಿ ನಡುವೆ ಬೆಂಕಿ ಹಚ್ಚಿದ್ದು ಸಿದ್ದರಾಮಯ್ಯ. ಕಾಂಗ್ರೆಸ್ ಸರಕಾರ ಹೋಗಲು ಅವರೇ ಕಾರಣ. ಕಾಂಗ್ರೆಸ್ ಪಕ್ಷದಿಂದಲೇ ಸಿದ್ದರಾಮಯ್ಯನವರನ್ನು ಸಸ್ಪೆಂಡ್ ಮಾಡಬೇಕು. ಸಿದ್ದರಾಮಯ್ಯ ಹಾಗೂ ಅವರ ಚೇಲಾಗಳಿಗೆ ಸುಮ್ನಿರೋದಕ್ಕೆ ದಿನೇಶ್ ಗುಂಡೂರಾವ್ ಹೇಳಬೇಕು. ದಿನೇಶ್ ಗುಂಡೂರಾವ್‌ಗೆ ಆ ತಾಕತ್ ಇದೆಯಾ ಎಂದು ಪ್ರಶ್ನಿಸಿದರು.
ಈ ಜನ್ಮದಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲ್ಲ. ಆದರೆ, ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿಯೇ ಮತ್ತೆ ಮುಖ್ಯಮಂತ್ರಿಯಾಗುವೆ ಎನ್ನುತ್ತಿದ್ದಾರೆ. ತಮ್ಮ ಜೊತೆಗಿರುವ ಸೋಮಶೇಖರ್, ಬಸವರಾಜ್, ಪರಮೇಶ್ವರ ನಾಯಕ್ ಮುಂತಾದ ತಮ್ಮ ಚೇಲಾ ಶಾಸಕರಿಂದ “ನಾನೇ ಮುಖ್ಯಮಂತ್ರಿ’ ಎಂದು ಹೇಳಿ ಎಂದು ಕುಮ್ಮಕ್ಕು ಕೊಡುತ್ತಿದ್ದಾರೆ. ಏನೇ ಆಗಲಿ, ಸಿದ್ದು ಮತ್ತೆ ಸಿಎಂ ಆಗಲ್ಲ, ರಾಹುಲ್‌ಗೆ ಮದುವೇನೂ ಆಗಲ್ಲ ಎಂದರು.
ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ. 104 ಸೀಟುಗಳ ಜತೆ ಉಪ ಚುನಾವಣೆಯ ಎರಡೂ ಸ್ಥಾನ ಗೆಲ್ಲುತ್ತೇವೆ. ಇಬ್ಬರು ಪಕ್ಷೇತರ ಶಾಸಕರು ನಮ್ಮ ಜತೆ ಇದ್ದಾರೆ. ಜೊತೆಗೆ, ರಮೇಶ್ ಜಾರಕಿಹೊಳಿಯ ಶಾಸಕರ ತಂಡ ನಮ್ಮನ್ನು ಸೇರಿಕೊಳ್ಳುತ್ತದೆ. ಆಗ ನಮಗೆ ಬಹುಮತ ಬರುವುದು ಖಚಿತ.
-ಕೆ.ಎಸ್. ಈಶ್ವರಪ್ಪ