Advertisement

ರಾಷ್ಟ್ರೀಯ ಸಂತ್ರಸ್ತರೆಂದು ಘೋಷಿಸಲಿ

08:37 PM Jun 25, 2021 | Team Udayavani |

ಕಾರವಾರ: ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಣೆ ಮಾಡಿ, ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಲು ಶಿಪ್‌ ಯಾರ್ಡ್‌ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಶಾಸಕಿ ರೂಪಾಲಿ ನಾಯ್ಕ ವಿನಂತಿಸಿದರು.

Advertisement

ಕಾರವಾರ ಹಾಗೂ ಅಂಕೋಲಾ ತಾಲೂಕಿನ 4604 ಕುಟುಂಬಗಳು ನೌಕಾನೆಲೆಯಲ್ಲಿ ನಿರಾಶ್ರಿತವಾಗಿವೆ. ಈ ಕುಟುಂಬಗಳು ನಿರಾಶ್ರಿತವಾಗಿ 3 ದಶಕಗಳಾದರೂ ಸಮಾಜದಲ್ಲಿ ಗೌರವಯುತ ಬದುಕು ಕಂಡುಕೊಳ್ಳುವಲ್ಲಿ ಇದುವರೆಗೂ ಸಾಧ್ಯವಾಗಿಲ್ಲ. ಸದ್ಯ ಕೇವಲ 968 ಕುಟುಂಬಗಳಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ನೌಕಾನೆಲೆ ನಿರಾಶ್ರಿತರು ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ತಮ್ಮ ಮನೆ, ಭೂಮಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಈ ಕಾರಣದಿಂದ ನಿರಾಶ್ರಿತರು ಉದ್ಯೋಗ, ಗೌರವಯುತ ಬದುಕಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನೂ ಹೊಂದಿ ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಯಾಗುವಂತಾಗಬೇಕು. ಇದಕ್ಕಾಗಿ ನೌಕಾನೆಲೆ ನಿರಾಶ್ರಿತರನ್ನು ರಾಷ್ಟ್ರೀಯ ಸಂತ್ರಸ್ತರು ಎಂದು ಘೋಷಿಸಬೇಕು. 4 ಸಾವಿರಕ್ಕೂ ಹೆಚ್ಚು ನಿರಾಶ್ರಿತ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕೊಡಬೇಕು. ಅವರಿಗೆ ಅಗತ್ಯ ಸೌಲಭ್ಯಗಳನ್ನೂ ದೊರಕಿಸಿಕೊಡುವ ಮೂಲಕ ದೇಶಕ್ಕಾಗಿ ತ್ಯಾಗ ಮಾಡಿದವರ ಬದುಕು ಹಸನಾಗುವಂತೆ ಮಾಡಬೇಕೆಂದು ಶಾಸಕರು ಮನವಿ ಮಾಡಿದರು.

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನೌಕಾನೆಲೆ, ಕೈಗಾ ಚತುಷ್ಪಥ ಹೆದ್ದಾರಿ, ಕದ್ರಾ, ಕೊಡಸಳ್ಳಿ ಜಲ ವಿದ್ಯುತ್‌ ಯೋಜನೆಗಳು ಹೀಗೆ ವಿವಿಧ ಕಾರಣಗಳಿಂದ ನಿರಾಶ್ರಿತರಾದ ಕುಟುಂಬಗಳ ಸಂಖ್ಯೆ ಹೆಚ್ಚಿದೆ. ನಿರಾಶ್ರಿತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೇಶದ ರಕ್ಷಣೆಗಾಗಿ ತ್ಯಾಗ ಮಾಡಿದವರು ಹೆಮ್ಮೆಯಿಂದ ಬದುಕುವಂತಾಗಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಶಿಪ್‌ ಯಾರ್ಡ್‌ ನಿರ್ಮಾಣಕ್ಕೆ ಮನವಿ: ಸೀಬರ್ಡ್‌ ನೌಕಾನೆಲೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ನೌಕಾನೆಲೆಗೆ ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಇಲ್ಲಿ ಯಾವುದೆ ಕೈಗಾರಿಕೆಗಳಿಲ್ಲ. ಸ್ಥಳೀಯ ಜನತೆಗೆ ಉದ್ಯೋಗ ಕೊಡುವ ಕೈಗಾರಿಕೆಗಳೂ ಇಲ್ಲಿಲ್ಲ. ಈ ಕಾರಣಕ್ಕಾಗಿ ಸರ್ಕಾರಿ ಸ್ವಾಮ್ಯದಲ್ಲಿ ರಕ್ಷಣಾ ಇಲಾಖೆ ಅಣು ವಿದ್ಯುತ್‌ ಸ್ಥಾವರ, ಕೊಂಕಣ ರೇಲ್ವೆ, ನೌಕಾನೆಲೆಯಲ್ಲಿ ಶಿಪ್‌ ಯಾರ್ಡ್‌ ಹಾಗೂ ಪೂರಕ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕರು ರಕ್ಷಣಾ ಸಚಿವರಲ್ಲಿ ವಿನಂತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next