Advertisement

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡೋಣ: ಹುಕ್ಕೇರಿ ಶ್ರೀ

04:13 PM Jun 05, 2023 | Team Udayavani |

ಶಿರಸಿ: ಭವಿಷ್ಯದ ಭಾರತಕ್ಕಾಗಿ, ಮಕ್ಕಳಿಗಾಗಿ ಪರಿಸರ ಸಂರಕ್ಷಣೆ ಎಲ್ಲರ ಮುಂದಿನ ಸವಾಲು ಹಾಗೂ ಆದ್ಯತೆ. ಈ ಕಾರಣಕ್ಕೋಸ್ಕರ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣ ಮಾಡಲು ಎಲ್ಲರೂ ಒಂದಾಗಿ, ಒಟ್ಟಾಗಿ ಸಂಕಲ್ಪ ಮಾಡಬೇಕಾಗಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ‍್ಯ ಸ್ವಾಮೀಜಿ ಹಕ್ಕೊತ್ತಾಯ ಮಾಡಿದರು.

Advertisement

ಸೋಮವಾರ ಅವರು ನಗರದ ಹೊರ ವಲಯದ ವೇದ ಆರೋಗ್ಯ ಕೇಂದ್ರದಲ್ಲಿ ಪವಿತ್ರ ವೃಕ್ಷಾರೋಪಣ ನಡೆಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೂ ಸ್ವಚ್ಛ ಭಾರತ, ಕಸ ಮುಕ್ತ ಭಾರತದ ಕನಸು ಕಂಡಿದ್ದಾರೆ. ಹುಕ್ಕೇರಿ ಮಠದಿಂದಲೂ ಪ್ಲಾಸ್ಟಿಕ್ ಚೀಲ ಮುಕ್ತ ಮಾಡುವಲ್ಲಿ ನಮ್ಮದೇ ಕೊಡುಗೆ ಕೊಡಬೇಕು ಎಂದು 2.80 ಲಕ್ಷ ಬಟ್ಟೆ ಚೀಲಗಳನ್ನು ಹೊಲಿಸಿ ವಿತರಣೆ ಮಾಡಿದ್ದೆವು ಎಂದರು.

ಮಠ ಮಾನ್ಯಗಳು ಕೇವಲ ಪೂಜೆ ಪುನಸ್ಕಾರ ಮಾಡುವದಲ್ಲ. ಭವಿಷ್ಯದ ಮಕ್ಕಳಿಗಾಗಿ ಹಾಗೂ ನಮಗಾಗಿ ಪರಿಸರದ ಸಂರಕ್ಷಣೆ ಮಾಡಬೇಕಿದೆ. ಇಲ್ಲೇ ಸಮೀಪದ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪರಿಸರದ ಸಂರಕ್ಷಣೆಯ ಹೋರಾಟದ ಜೊತೆಗೆ ಕೃಷಿ ಜಯಂತಿ ಕೂಡ ನಡೆಸುತ್ತಾರೆ. ಪರಿಸರದ ಉಳಿವು, ಉಳಿಸುವದು ಎಲ್ಲರೆ ಹೊಣೆ ಎಂದರು.

ಒಂದು ವೃಕ್ಷವು ಸ್ವಚ್ಛ ಮನದಿಂದ ಎಷ್ಟೆಲ್ಲ ನೆರವಾಗುತ್ತದೆ. ಆದರೆ, ನಾವು ವೇದಿಕೆಗಳಲ್ಲಿ ಪರಿಸರದ ಸಂರಕ್ಷಣೆಯ ಮಾತುಗಳನ್ನು ಮಾತ್ರ ಆಡುತ್ತೇವೆ. ಕೇವಲ ಮಾತನಾಡದೇ ಪರಿಸರದ ಉಳಿವಿಗೆ ಸರ್ವರೂ ಕಂಕಣ ಬದ್ಧರಾಗಬೇಕು. ಇಲ್ಲವಾದರೆ ಭವಿಷ್ಯಕ್ಕೆ ದೊಡ್ಡ ಕಂಟಕ ಆಗಲಿದೆ ಎಂದೂ ಆತಂಕಿಸಿದರು.

ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,1974 ರಿಂದ ಪರಿಸರದ ದಿನ ಆಚರಣೆ ಮಾಡುತ್ತಿದ್ದೇವೆ. ಈ ಬಾರಿಯ ಘೋಷ ವಾಕ್ಯ ಪ್ಲಾಸ್ಟಿಕ್ ಮಾಲಿನ್ಯ ತಡೆಯಬೇಕು. ಎಲ್ಲರಿಗೂ ವಯಕ್ತಿಕ, ಸಾಮಾಜಿಕ, ಕೌಟುಂಬಿಕ, ಸಂಘಟಿತ ಜೀವನದಲ್ಲಿ ಪರಿಸರದ ಮಹತ್ವ ಅರಿವಿದೆ. ಆದರೆ, ಈ ಅರಿವನ್ನು ವಯಕ್ತಿಕ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು.ಈ ಪರಿಸರ ಎಂದರೆ ನಾವು ಹಿಂದಿನ ಪೀಳಿಗೆಯಿಂದ ಪಡೆದ ಬಳುವಳಿಯಲ್ಲ. ಬದಲಿಗೆ ಮುಂದಿನ ಪೀಳಿಗೆಗೆ ನಾವು ತೆಗೆದಕೊಂಡ ಸಾಲ ಎಂದು ಸಂರಕ್ಷಿಸಬೇಕು ಎಂದರು.

Advertisement

ಭವಿಷ್ಯದ ಜನಾಂಗದ ಭವಿಷ್ಯ ಅಂಧಕಾರಕ್ಕೆ ಹೋಗದಂತೆ ಪರಿಸರ ಸಂರಕ್ಷಿಸಬೇಕು. ಯಾರೂ ಉದಾಸೀನ ಮಾಡದೇ ಪರಿಸರ ಸಂರಕ್ಷಣೆ ಮಾಡಬೇಕು ಎಂದೂ ಹೇಳಿದರು. ಈ ವೇಳೆ ಡಾ. ವೆಂಕಟ್ರಮಣ ಹೆಗಡೆ, ಸಂಗೀತಾ ಹೆಗಡೆ, ನಾರಾಯಣ ಹೆಗಡೆ ಇತರರು ಇದ್ದರು.

ಪ್ರಕೃತಿ ಸಂರಕ್ಷಣೆ ಎಲ್ಲರ ಜವಬ್ದಾರಿ. ನಿಸರ್ಗದ ಉಳಿದರೆ ಮಾತ್ರ ಎಲ್ಲ ಜೀವಿಗಳ ಉಳಿವು. ಈ ಸತ್ಯ ಅರಿತರೆ ಮಾತ್ರ ಪರಿಸರ ಉಳಿಸುವ ಜವಬ್ದಾರಿ ಹೃದಯದಿಂದ ಆರಂಭವಾಗುತ್ತದೆ.
ಡಾ. ವೆಂಕಟ್ರಮಣ ಹೆಗಡೆ, ಪ್ರಸಿದ್ಧ ವೈದ್ಯರು

Advertisement

Udayavani is now on Telegram. Click here to join our channel and stay updated with the latest news.

Next