Advertisement

ಸೂಕ್ತ ತಯಾರಿಯೊಂದಿಗೆ ಬರುತ್ತೇನೆ

05:07 AM Sep 23, 2017 | Team Udayavani |

ನಿಮ್ಮ ಪಕ್ಷ ಎಷ್ಟು ದಿನದಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಬಹುದು? ಎರಡು ತಿಂಗಳಾಗಬಹುದಾ?
ನಾನು ಸಿನೆಮಾ ಮಾಡಬೇಕಾದರೂ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೇನೆ. ಕನಿಷ್ಠ ಮೂರು ತಿಂಗಳಾದರೂ ನನಗೆ ತಯಾರಿ ಬೇಕೇ ಬೇಕು. ಇಷ್ಟು ಪ್ರಿಪರೇಷನ್‌ ಇಲ್ಲದೇ ಹೋದರೆ ಸಿನೆಮಾ ಸರಿಯಾಗಿ ಮಾಡುತ್ತೇನೆ ಎನ್ನುವ ಕಾನ್ಫಿಡೆನ್ಸ್‌ ನನಗಿರುವುದಿಲ್ಲ. ನಾವೀಗ ಮಾತನಾಡುತ್ತಿರುವುದು ಸಿನೆಮಾಕ್ಕಿಂತಲೂ ದೊಡ್ಡದಾದ, ಅದಕ್ಕಿಂತಲೂ ಎಷ್ಟೋಪಟ್ಟು ಮಹತ್ವದ್ದಾದ ವಿಷಯದ ಬಗ್ಗೆ. ಸಿನೆಮಾ ವಿಫ‌ಲವಾದರೆ “ಕ್ಷಮಿಸಿ, ಮುಂದಿನ ಸಿನೆಮಾ ಚೆನ್ನಾಗಿ ಮಾಡುತ್ತೇನೆ’ ಎಂದು ಹೇಳಬಹುದು. ಆದರೆ ರಾಜಕಾರಣದಲ್ಲಿ ಹಾಗೆ ಹೇಳುವುದು ಸಾಧ್ಯವೂ ಇಲ್ಲ, ಹಾಗೆ ಹೇಳಿ ಮುನ್ನಡೆಯುವ ಮನಸ್ಸೂ ನನಗಿಲ್ಲ. 

Advertisement

ನೀವು ದೇಶದ ರಾಜಕೀಯ ವಿದ್ಯಮಾನಗಳ ಬಗ್ಗೆ ಕಳೆದ ಒಂದೂವರೆ ವರ್ಷದಿಂದ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದೀರಿ…
ಅದಕ್ಕಿಂತಲೂ ಹೆಚ್ಚು ಸಮಯದಿಂದ. ಎರಡು ದಶಕದಿಂದ. 

ಹಾಂ…ಎರಡು ದಶಕದಿಂದ. ಆದರೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಬಂದಿದ್ದೀರಿ. ಅಂದರೆ ನೀವು ಈ ವ್ಯವಸ್ಥೆಯ ಅಧ್ಯಯನ ಮಾಡುತ್ತಿದ್ದೀರಿ ಎಂದಾಯಿತು. ಹೀಗಾಗಿಯೇ ಈ ಪ್ರಶ್ನೆ ಎರಡು ತಿಂಗಳಲ್ಲದಿದ್ದರೆ, ಮೂರು ತಿಂಗಳಲ್ಲಾದರೂ(90 ದಿನದಲ್ಲಿ) ನಿಮ್ಮ ಪಕ್ಷ ಬರಬಹುದಾ?
ನೂರು ದಿನ ಅಂದುಕೊಳ್ಳಿ! 

ನೀವು ದೆಹಲಿ ಸಿಎಂ ಕೇಜ್ರಿವಾಲ್‌, ಕೇರಳ ಸಿಎಂ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗಿದ್ದೀರಿ. ಮುರಸೊಳಿ ಕಾರ್ಯಕ್ರಮದಲ್ಲೂ ಪಾಲ್ಗೊಂಡಿರಿ. ಹಾಗಿದ್ದರೆ ನಿಮ್ಮ ಸಿದ್ಧಾಂತವ್ಯಾವುದು? ಎಡವೋ ಅಥವಾ ಬಲವೋ?
ನಾನು ನಟ್ಟು ನಡುವೆ ನಿಲ್ಲಲು ಬಯಸುತ್ತೇನೆ. ನಾನು ಮಧ್ಯದಲ್ಲಿದ್ದರೂ ತುಸು ಎಡಕ್ಕೆ ಮುಖ ಮಾಡಿದೆನೆಂದರೆ ನಟ್ಟ ನಡುವೆ ಬರಲು ಕೆಲವು ಅಡ್ಜಸ್ಟ್‌ಮೆಂಟ್‌ಗಳನ್ನು ಮಾಡಿಕೊಳ್ಳುತ್ತೇನೆ. ಜನರಿಗೆ ಎಡ ಅಥವಾ ಬಲದಲ್ಲಿ ಆಸಕ್ತಿಯಿಲ್ಲ. 

ಆದರೆ ಕೇಸರಿ ನನ್ನ ಬಣ್ಣ ಅಲ್ಲ ಅಂತ ನೀವು ಹೇಳಿದ್ದೀರಲ್ಲ?
(ತಮ್ಮ ಕಪ್ಪು ಶರ್ಟನ್ನು ತೋರಿಸುತ್ತಾ) ಇದು ನನ್ನ ಬಣ್ಣ. ಕಪ್ಪು ಬಣ್ಣದಲ್ಲಿ ಎಲ್ಲಾ ಬಣ್ಣಗಳೂ ಸೇರಿರುತ್ತವೆ. ಕೇಸರಿ ಬಣ್ಣ ಕೂಡ! 

Advertisement

ರಾಜಕೀಯಕ್ಕೆ ಬರಲು ನಿಮಗೇಕೆ ಆಸಕ್ತಿ?
ನಾನೂ ಈ ಪ್ರಶ್ನೆ ಕೇಳಿಕೊಂಡಿದ್ದೇನೆ. ಜವುಗುನೆಲವನ್ನು ಯಾರಾದರೂ ಸರಿಪಡಿಸಲೇಬೇಕಲ್ಲ? ಜನರಿಗೆ ಈ ನೆಲವನ್ನು ವಾಸಯೋಗ್ಯವಾಗಿಸಬೇಕಲ್ಲ? ನಾನು ಈ ಮಾತನ್ನು ಹೇಳಿದಾಗ ಅದು ನಾಟಕೀಯ ಎನಿಸಬಹುದು. ಆದರೆ ಕೆಲ ಸಮಯದಿಂದ ನಮ್ಮ ರಾಜ್ಯವನ್ನು ಇವರೆಲ್ಲ ಎಷ್ಟು ಹೀನಾಯ ಹಂತಕ್ಕೆ ತಳ್ಳಿದ್ದಾರೆಂದರೆ ಈಗ ಅವರ ಬಳಿ ತೋರಿಸಿಕೊಳ್ಳಲು ಕೇವಲ ಅಂಕಿ ಸಂಖ್ಯೆಗಳಷ್ಟೇ ಇರುವುದು. ನಾವು ಆಡಳಿತವನ್ನು ಟೀಕಿಸಿದಾಗ ಈ ಹಳೆಯ ಅಂಕಿಸಂಖ್ಯೆಗಳನ್ನು ನಮ್ಮತ್ತ ಎಸೆಯುತ್ತಿದ್ದಾರೆ. ತಮಿಳುನಾಡಿನಲ್ಲಿ ನಿಜಕ್ಕೂ ಬದಲಾವಣೆಯಾಗಬೇಕು. ಆರೋಗ್ಯ, ಶಿಕ್ಷಣ ಮತ್ತು ಕೃಷಿ ವಲಯದ ಕಡೆಗಣನೆಯನ್ನು ನಿಲ್ಲಿಸಬೇಕು. ನಾನೇನೂ ನೆಡುವಾಸಲ್‌(ವಿವಾದಾತ್ಮಕ ಹೈಡ್ರೋಕಾರ್ಬನ್‌ ಯೋಜನೆ) ಬರಬೇಕು ಅಥವಾ ದೊಡ್ಡ ಉದ್ಯಮಗಳು ಬರಬೇಕು ಎಂದು ಹೇಳುತ್ತಿಲ್ಲ. ಚಿಕ್ಕ ಗುರಿಗಳ ಬಗ್ಗೆ ಮಾತನಾಡುತ್ತಿದ್ದೇನೆ. ರಾಜಕಾರಣಿಗಳಿಗೆ ನೇರವಾಗಿ 30 ಪ್ರತಿಶತ ಪಾಲು ಕೊಡುವ ದೊಡ್ಡ ಯೋಜನೆಗಳ ಬಗ್ಗೆ ಅಲ್ಲ!

ತಮಿಳುನಾಡಿನಲ್ಲಿ ದೊಡ್ಡ ನಾಟಕವೇ ನಡೆಯುತ್ತಿದೆ. ಎಐಎಡಿಎಮ್‌ಕೆಯಲ್ಲಿ ಒಳಜಗಳ…
ಇದರಲ್ಲಿ ಜನರನ್ನೇಕೆ ಬಿಡುತ್ತಿದ್ದೀರಿ? ಅವರೂ ತಪ್ಪಿತಸ್ಥರೇ. ಒಂದು ಮತಕ್ಕೆ ಅವರು 5,000 ರೂಪಾಯಿ ತೆಗೆದುಕೊಂಡಿದ್ದಾರೆ. ಇದರಲ್ಲಿ ಒಳ್ಳೆಯ ಬ್ಯುಸಿನೆಸ್‌ ಕೂಡ ಆಗಲಿಲ್ಲ. ಮತದಾರರ ಮೌಲ್ಯ ಅದಕ್ಕಿಂತಲೂ ದೊಡ್ಡದು! ಅವರು ದಿನಕ್ಕೆ 5,000ಕ್ಕಿಂತಲೂ ಹೆಚ್ಚು ಸಂಪಾದಿಸಬಹುದು. ಆದರೆ ಐದು ವರ್ಷಕ್ಕೆ 5 ಸಾವಿರ ಪಡೆದಿದ್ದಾರೆ! ಅಂದರೆ ಈ ಭ್ರಷ್ಟಾಚಾರಕ್ಕೆ ಜನರೂ ಕಾರಣರೇ. ಈ ಅಪರಾಧದಲ್ಲಿ ಅವರೂ ಬಿಡಿಭಾಗಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪಾಪಪ್ರಜ್ಞೆಯೊಂದಿಗೇ ನಾವು ಬದಲಾವಣೆ  ಹಾದಿ ಹುಡುಕಬೇಕಿದೆ. 

ಆದರೆ ನೀವಲ್ಲವೇ ಬದಲಾವಣೆ ತರಲು ಬಯಸುವವರು?
ಜನರು ಬದಲಾಗಬೇಕು. ಮತದಾರರು ಪ್ರಾಮಾಣಿಕ ವ್ಯಕ್ತಿಯನ್ನು ಅಧಿಕಾರದಲ್ಲಿ ನೋಡಲು ಬಯಸುತ್ತಾರೆಂದರೆ ಮೊದಲು ಅವರು ಪ್ರಾಮಾಣಿಕರಾಗಬೇಕು.

ಹಾಗಿದ್ದರೆ ನೀವು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೀರಷ್ಟೆ…
ಹಾಗೆ ಹೇಳಲು ಬರುವುದಿಲ್ಲ. ನಾನು ನಾಳೆಯೇ ಅಖಾಡಕ್ಕೆ ಧುಮುಕುತ್ತೇನೆ ಎಂದೇನೂ ಅಲ್ಲ. ಆಸಕ್ತಿಯೊಂದಿದ್ದರೆ ಮುಂದೆ ಸಾಗಲು ಆಗುವುದಿಲ್ಲವಲ್ಲ? ಈ ಭಾರವನ್ನು ಹೊರುವಷ್ಟು ಶಕ್ತಿ ನನಗೆ ದಕ್ಕಬೇಕು. ಇದಕ್ಕಾಗಿ ನಾನು ತಯಾರಿ ನಡೆಸಬೇಕು. ಬರಿದಾದ ಖಜಾನೆ, ಅಸ್ತವ್ಯಸ್ಥ ಮೂಲಸೌಕರ್ಯ, ಅರೆಬರೆ ಕೆಲಸಗಳನ್ನು ನೋಡಿದಾಗ ಯಾವುದೇ ವ್ಯಕ್ತಿಗಾಗಲಿ ಇದು ದೊಡ್ಡ ಸವಾಲೇ ಸರಿ. ಅದರಲ್ಲೂ ಹೊಸ ಪಕ್ಷಕ್ಕೆ, ಹೊಸ ವ್ಯಕ್ತಿಗೆ ಬೃಹತ್‌ ಸವಾಲು. 

ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಾನು ನಿಮ್ಮನ್ನು ತಲುಪುವುದು ಹೇಗೆ?
ನಾನು ಹೊಸ ಜನರನ್ನು ಭೇಟಿಯಾಗಲಿದ್ದೇನೆ. ಹಂತಹಂತವಾಗಿ ನಾವು ಮುಂದಿನ ಹೆಜ್ಜೆಯನ್ನು ನಿರ್ಧರಿಸುತ್ತಾ ಹೋಗುತ್ತೇವೆ. ಜನರು ಈಗಾಗಲೇ ನನ್ನ ವೆಲ್‌ಫೇರ್‌ ಅಸೋಸಿಯೇಷನ್‌ನ ಭಾಗವಾಗಲು ಬಯಸುತ್ತಿದ್ದಾರೆ. ಆದರೆ ಉತ್ಸಾಹಿಗಳ್ಳೋ,  ಅವಕಾಶವಾದಿಗಳ್ಳೋ ಗೊತ್ತಿಲ್ಲ. ಹೀಗಾಗಿ ಜನರನ್ನು ಜೊತೆ ಸೇರಿಸಿಕೊಳ್ಳುವ ವಿಷಯದಲ್ಲಿ ನಾವು ಜಾಗರೂಕರಾಗಿರಬೇಕು. ಸುಮಾರು 37 ವರ್ಷದಿಂದ ನಮ್ಮ ಕಲ್ಯಾಣ ಸಂಘಕ್ಕೆ ಕೆಲಸ ಮಾಡಿದವರಿದ್ದಾರೆ. ಅವರಲ್ಲೂ ಅರ್ಹತೆಯಿರುವವರಿಗೆ ಮಾತ್ರ ಆದ್ಯತೆ ಸಿಗುತ್ತದೆ. ಅವರಿಗೆ ಅಧಿಕಾರದ ಹಪಾಹಪಿಯಿಲ್ಲ. ನನಗೂ ಇಲ್ಲ. ಆದರೆ ಜನರ ಸೇವೆ ಮಾಡಲು ಅಧಿಕಾರವೊಂದೇ ದಾರಿ ಎನ್ನುವುದಾದರೆ ಅದನ್ನು ನಾವು ಕೈವಶಮಾಡಿಕೊಳ್ಳುತ್ತೇವೆ.

“ಎಲ್ಲರಂತೆಯೇ ರಜನಿ ಸಹಾಯ ಪಡೆಯುವುದಕ್ಕೂ ಸಿದ್ಧ’ ಎಂದು ನೀವು ಹೇಳಿದ್ದಿರಿ. ಆದರೆ ಇದನ್ನೇ ಕೆಲವರು “ಕಮಲ್‌-ರಜನಿ ಒಂದಾಗಲಿದ್ದಾರೆ’ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ನೀವಿಬ್ಬರೂ ಭಿನ್ನ ಸಿದ್ಧಾಂತವನ್ನು ನಂಬುವ ಒಳ್ಳೆಯ ಸ್ನೇಹಿತರಷ್ಟೇ ಅಲ್ಲವೇ?
ಖಂಡಿತ. ಇಬ್ಬರ ಸೈದ್ಧಾಂತಿಕ ನಿಲುವೂ ಭಿನ್ನವಾದದ್ದು. ಆದರೆ ನಾವು ಒಬ್ಬರ ಮೇಲೊಬ್ಬರು ಈ ಸಿದ್ಧಾಂತಗಳನ್ನು ಹೇರುವ ಕೆಲಸ ಮಾಡುವುದಿಲ್ಲ. ನೈತಿಕ ಹಾದಿಯಲ್ಲೇ ನಡೆಯೋಣ ಎಂದು ಮಾತನಾಡಿಕೊಂಡಿದ್ದೇವೆ. 

ಅಂದರೆ ನೀವು ಅಧಿಕೃತವಾಗಿ ರಜನಿ ಜೊತೆ ಕೈ ಜೋಡಿಸಲು ಸಿದ್ಧವಿದ್ದೀರಾ?
ಅಗತ್ಯ ಬಿದ್ದರೆ, ಅವರಿಗೆ ಇಷ್ಟವಿದ್ದರೆ! ಪಕ್ಷದ ವಿಷಯದಲ್ಲಿ ನಾನು ಕೆಲವು ನಿಯಮಗಳನ್ನು ರೂಪಿಸುತ್ತೇನೆ. ಈ ನಿಯಮಗಳಲ್ಲಿ ಆಸಕ್ತಿಯಿರುವವರಿಗೆ ಸ್ವಾಗತವಿರುತ್ತದೆ.  

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಿಮಗೇನನ್ನಿಸುತ್ತೆ?
ಬೇರೆಯವರೆಲ್ಲ ಬರೀ ಭರವಸೆ ನೀಡಿದರೆ, ಮೋದಿ ಅವನ್ನು ಈಡೇರಿಸಲು ಪ್ರಯತ್ನಿಸಿದ್ದಾರೆ. ಸ್ವತ್ಛ ಭಾರತ ಒಳ್ಳೆ/ ಐಡಿಯಾ. ಡಿಮಾನಿಟೈಸೇಷನ್‌ ಕೂಡ ಒಳ್ಳೆಯ ಐಡಿಯಾ. ನೋಟು ಅಮಾನ್ಯದ ಬಗ್ಗೆ ಟೀಕೆಗಳು ಬರುತ್ತಿವೆ. ಆದರೆ ಅದರ ಬಗ್ಗೆ ಮಾತನಾಡಲು ನಾನೇನೂ ಅರ್ಥಶಾಸ್ತ್ರಜ್ಞನಲ್ಲ. ಈಗಲೇ ನಾವು ಯಾವುದೇ ನಿರ್ಣಯಕ್ಕೆ ಬರುವುದು ಬೇಡ. 

ತಮಿಳುನಾಡನ್ನು ಹಾಳು ಮಾಡಿದ್ದು ಯಾರು? ಭ್ರಷ್ಟಾಚಾರ ಕಾಣಿಸುತ್ತಿದೆ, ಒಂದು ಯೋಜನೆಯೂ ಮುಂದೆ ಸಾಗುತ್ತಿಲ್ಲ. ಇದಕ್ಕೆಲ್ಲ ಯಾರು ಕಾರಣ? ಡಿಎಂಕೆ, ಎಐಎಡಿಎಂಕೆ ಅಥವಾ ಶಶಿಕಲಾ ಕುಟುಂಬ? 
ಏನು ನಡೆಯುತ್ತಿದೆ ಅಂತ ಹೇಳುತ್ತೇನೆ ಕೇಳಿ. ಯಾರೇ ಆಗಲಿ ಭ್ರಷ್ಟರ ಜೊತೆ ಕೈಜೋಡಿಸಿದರೆ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು. ಹೀಗಾಗಿ ಈ ತಪ್ಪಿನ ಜವಾಬ್ದಾರಿ ಹೊರಬೇಕಿರುವುದು ಜನರು. 

ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನಿಮ್ಮ ಮೇಲೇಕೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ? ಏನಂತೀರಿ?
ಅವರದ್ದು ಈ ಕ್ಷಣದ ಪ್ರತಿಕ್ರಿಯೆ. ಅದಕ್ಕೆ ಉತ್ತರಿಸಬೇಕಾದ ಅಗತ್ಯವಿಲ್ಲ.

ಇವರೆಲ್ಲ ನಿಮ್ಮ ಬಗ್ಗೆ ಚಿಂತಿತರಾಗಿದ್ದಾರಾ? 
ಆಗಲಿ. ಆಗಲೇಬೇಕು. ಏಕೆಂದರೆ ನಾನು ಒಬ್ಬ ವ್ಯಕ್ತಿಮಾತ್ರವಲ್ಲ. ನಾನು “ಜನ’!

(ಕಮಲ್‌ಹಾಸನ್‌ ಟೈಮ್ಸ್‌ ನೌ ಮತ್ತು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದ ಆಯ್ದ ಭಾಗವಿದು)

Advertisement

Udayavani is now on Telegram. Click here to join our channel and stay updated with the latest news.

Next